ಜೆಡಿಎಸ್ 93 ಅಭ್ಯರ್ಥಿಗಳ ಪಟ್ಟಿಯಲ್ಲಿ ಬದಲಾವಣೆ ಇಲ್ಲ-ನಿಖಿಲ್ ಕುಮಾರಸ್ವಾಮಿ
ಪಕ್ಷದ ವರಿಷ್ಠರು,ರಾಜ್ಯಾಧ್ಯಕ್ಷರು ಈಗಾಗಲೇ ಪಟ್ಟಿಯನ್ನು ಅಧೀಕೃತವಾಗಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಸಾಧ್ಯತೆಗಳಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮಂಡ್ಯ, ಫೆಬ್ರವರಿ 14: ಮುಂಬರುವ ವಿಧಾನಸಭಾ ಚುನಾವಣೆಗೆ ಜಾತ್ಯತೀತ ಜನತಾದಳ ಈಗಾಗಲೇ 93 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಯಾವುದೇ ಅಭ್ಯರ್ಥಿಗಳನ್ನು ಬದಲಿಸಲಾಗದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಗರದ ಬಂದೀಗೌಡ ಬಡಾವಣೆಯಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರು ಈಗಾಗಲೇ ಪಟ್ಟಿಯನ್ನು ಅಧೀಕೃತವಾಗಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಸಾಧ್ಯತೆಗಳಿಲ್ಲ ಎಂದು ತಿಳಿಸಿದರು.
ಇನ್ನು ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮವಾಗುತ್ತದೆ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂ. ಶ್ರೀನಿವಾಸ್ ಅವರು ಸಮರ್ಥರಿದ್ದಾರೆ. ಅವರನ್ನು ಯಾವುದೇ ಕಾಣಕ್ಕೂ ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ನಾನು ರಾಮನಗರದಿಂದಲೇ ಸ್ಪರ್ಧೆ ಮಾಡುತ್ತೇನೆ.
ಕಳೆದ 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಿದ್ದೆ. ಈ ಬಾರಿ ಪಕ್ಷ ನನ್ನನ್ನು ರಾಮನಗರಿಂದ ಕಣಕ್ಕಿಳಿಯುವಂತೆ ಸೂಚನೆ ನೀಡಿದೆ. ಹಾಗಾಗಿ ನಾನು ರಾಮನಗರದಿಂದಲೇ ಸ್ಪರ್ಧೆ ಮಾಡುತ್ತೇನೆ. ಸಿ.ಎಸ್. ಪುಟ್ಟರಾಜು ಅವರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವೇಳೆ ಐದೂಕಾಲು ಲಕ್ಷ ಮತದಾರರು ಮತ ಹಾಕಿದ್ದರು. ನನಗೆ ಇನ್ನೂ 50 ಸಾವಿರ ಹೆಚ್ಚಿನ ಮತಗಳು ಬಂದಿವೆ. ಈ ಜಿಲ್ಲೆಯ ಜನತೆ ನಮ್ಮನ್ನು ಎಂದೂ ಕೈಬಿಟ್ಟಿಲ್ಲ. ಬಿಡುವುದೂ ಇಲ್ಲ. ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾದೆ. ಆದರೆ ಪಕ್ಷದ ತೀರ್ಮಾನದಂತೆ ನಾನು ರಾಮನಗರದಿಂದ ಸ್ಪರ್ಧಿಸುತ್ತಿದ್ದೇನೆ. ಪಕ್ಷ, ಸ್ಪರ್ಧೆ ಬೇಡ ಸಂಘಟನೆ ಮಾಡು ಎಂದು ಆದೇಶ ನೀಡಿದರೆ ಅದಕ್ಕೂ ಸೈ, ಇದರಲ್ಲಿ ಪಲಾಯನವಾದ ಇಲ್ಲವೇ ಇಲ್ಲ ಎಂದರು.

ಭಿನ್ನಾಭಿಪ್ರಾಯಗಳಿದ್ದಲ್ಲಿ ಹಿರಿಯರು ಸರಿಪಡಿಸುತ್ತಾರೆ
ಚುನಾವಣೆಗೆ ಸ್ಪರ್ಧಿಸಬೇಕು, ಜನಸೇವೆ ಮಾಡಬೇಕು ಎಂಬ ಬಯಕೆ ಎಲ್ಲರಿಗೂ ಸಹಜ. ಆದರೆ, ಎಲ್ಲರಿಗೂ ಟಿಕೆಟ್ ಕೊಡಲಾಗದು. ಇದರಿಂದ ಸ್ವಲ್ಪ ಅವರಿಗೆ ಬೇಸರವಾಗುತ್ತದೆ. ಭಿನ್ನಾಭಿಪ್ರಾಯಗಳಿದ್ದಲ್ಲಿ ಹಿರಿಯರು ಅದನ್ನು ಸರಿಪಡಿಸುತ್ತಾರೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಂಜು ಅವರಿಗೆ ಟಿಕೆಟ್ ನೀಡಲಾಗಿದೆ. ದೇವರಾಜು ಅವರು ಮುನಿಸಿಕೊಂಡಿದ್ದಾರೆ. ಅವರನ್ನೂ ಕರೆದು ಚರ್ಚೆ ನಡೆಸುತ್ತೇವೆ. ಕಳೆದ ಉಪ ಚುನಾವಣೆಯಲ್ಲಿ ಮಂಜು ಅವರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ಆಗಿತ್ತು. ಆದರೆ ಎಚ್.ಡಿ. ರೇವಣ್ಣ ಅವರು ದೇವರಾಜು ಅವರಿಗೆ ಟಿಕೆಟ್ ನೀಡುವಂತೆ ಸೂಚಿಸಿದ್ದರ ಮೇರೆಗೆ ಮಂಜು ಅವರನ್ನು ಸಮಾಧಾನಪಡಿಸಿ ಮುಂದಿನ ಚುನಾವಣೆಯಲ್ಲಿ ಗಣನೆಗೆ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನಗಳನ್ನು ಪಡೆಯುತ್ತದೆ
ಜೆಡಿಎಸ್ ಪಕ್ಷದ ಬಗ್ಗೆ ಅರಸಿಕೆರೆ ಶಾಸಕ ಶಿವಲಿಂಗೇಗೌಡರ ಅಸಮಾಧಾನ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಶಿವಲಿಂಗೇಗೌಡರ ಬಗ್ಗೆ ಗೌರವವಿದೆ. ಆದರೆ ಅವರ ನಡೆ ಭಿನ್ನವಾಗಿದ್ದು, ಗೊಂದಲದಿಂದ ಕೂಡಿದೆ. ಹಾಗಾಗಿ ಅಲ್ಲಿ ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಅವರು ಪರ್ಯಾಯವಾಗಿ ಅಶೋಕ್ ಅವರನ್ನು ಬೆಂಬಲಿಸಿದ್ದಾರೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಅವರು ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 123 ಸ್ಥಾನಗಳನ್ನು ಪಡೆದು ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಗರಣಗಳಲ್ಲೇ ಮುಳುಗಿಹೋಗಿದೆ
14 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದ ರೈತರ 26 ಸಾವಿರ ರೂಪಾಯಿ ಕೋಟಿ ಸಾಲ ಮನ್ನಾ ಮಾಡಿದ್ದೇವೆ. ಬಿಜೆಪಿಯವರು ಏನು ಮಾಡಿದ್ದಾರೆ, ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ನಿಖಿಲ್ ಕುಮಾರಸ್ವಾಮಿ, 40 ಪರ್ಸೆಂಟ್ ಕಮಿಷನ್, ಪಿಎಸ್‌ಐ ಹಗರಣ ಸೇರಿದಂತೆ ಹಗರಣಗಳಲ್ಲೇ ಮುಳುಗಿಹೋಗಿದೆ. ಇದೇ ಅವರ ಸಾಧನೆ. ನಮ್ಮ ಪಕ್ಷದಲ್ಲೇ ಇದ್ದು ರಾಜೀನಾಮೆ ನೀಡಿ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದರೂ ಕೆ.ಆರ್. ಪೇಟೆಯಲ್ಲಿ ರಸ್ತೆಗಳ ಸ್ಥಿತಿ ಚೆನ್ನಾಗಿಲ್ಲ. ಅವರು ಸ್ವಂತಕ್ಕಾಗಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡರೇ ವಿನಃ ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದಲ್ಲ ಎಂದು ಟೀಕಿಸಿದರು.











Click it and Unblock the Notifications