ಅಧಿವೇಶನಕ್ಕಿಂತ ಚುನಾವಣೆಯೇ ಮುಖ್ಯ ಎಂದವರಿಗೆ ಏನೂ ಹೇಳಲಾಗದು-ಎನ್.ಚಲುವರಾಯಸ್ವಾಮಿ
ಮಂಡ್ಯ, ಡಿಸೆಂಬರ್ 21: ವಿಧಾನಸಭಾ ಅಧಿವೇಶನದ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಮುಖ್ಯಮಂತ್ರಿಯಾಗಿದ್ದವರು ಸದನದ ಬಗ್ಗೆ ಗೌರವವಿಟ್ಟುಕೊಂಡು ಮಾತನಾಡಬೇಕು. ಸದನದ ಗೌರವ ಕುಂದಿಸುವ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿವೇಶನದಲ್ಲಿ ಭಾಗವಹಿಸುವುದಕ್ಕಿಂತ ಚುನಾವಣೆಯೇ ಮುಖ್ಯ ಎಂದುಕೊಂಡವರಿಗೆ ಏನೂ ಹೇಳಲಾಗದು. ಪಂಚರತ್ನ ರಥಯಾತ್ರೆಯನ್ನು ಮುಂದೆಯೂ ಮಾಡಬಹುದು. ಅಧಿವೇಶನಕ್ಕೆ ಮತ್ತೆ ಅವಕಾಶ ಸಿಗುವುದಿಲ್ಲ ಎಂದರ.
ಸದನದಲ್ಲಿ ಚರ್ಚೆಯಾಗುವ ವಿಷಯಗಳೆಲ್ಲವೂ ಜಾರಿಯಾಗುತ್ತಾ ಎಂದು ಕುಳಿತರೆ ಏನೂ ಆಗಲ್ಲ. ಜನರು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗುವ ವೇದಿಕೆ ಅದು. ಅಲ್ಲಿ ಶಾಸಕರಾದವರಿಗೆ ಹಕ್ಕೋತ್ತಾಯಗಳನ್ನು ಮಂಡಿಸುವುದಕ್ಕೆ ಸಂಪೂರ್ಣ ಅಧಿಕಾರವಿದೆ. ಸದನವನ್ನೇ ದೂರುವುದಾದರೆ ನಾವೆಲ್ಲಾ ವಿಧಾನಸಭೆಗೆ ಏಕೆ ಆಯ್ಕೆಯಾಗಬೇಕು. ವಿಧಾನಸಭೆಯಾದರೂ ಏಕಿರಬೇಕು ಎಂದು ಪ್ರಶ್ನಿಸಿದರು.

ರೈತರು ತಿಂಗಳಿಗೂ ಹೆಚ್ಚು ಕಾಲ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ. ಹಾಲಿಗೆ ಪ್ರೋತ್ಸಾಹಧನ ಬಿಡುಗಡೆಯಾಗಿಲ್ಲ. ವಸತಿರಹಿತರಿಗೆ ವಸತಿಯನ್ನು ನೀಡಲಾಗಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕಾದ ಶಾಸಕರು ಪಂಚರತ್ನ ರಥಯಾತ್ರೆಯಲ್ಲಿ ನಿರತರಾಗಿದ್ದರೆ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಹೇಗೆ. ನಮಗಂತೂ ಅಧಿಕಾರವಿಲ್ಲ. ನಾವು ಸರ್ಕಾರಕ್ಕೆ ಮನವಿ ಕೊಡಬಹುದು ಅಷ್ಟೇ. ಶಾಸಕರಾಗಿರುವವರಿಗೆ ಸದನದಲ್ಲಿ ಮಾತನಾಡುವ ಅಧಿಕಾರವಿದೆ. ಜನರು, ರೈತರ ಕಷ್ಟಗಳನ್ನು ಪ್ರಸ್ತಾಪಿಸುವುದಕ್ಕೆ ಅವಕಾಶವಿದ್ದರೂ ಚುನಾವಣೆಯನ್ನೇ ಪ್ರಧಾನ ಆದ್ಯತೆಯನ್ನಿಟ್ಟುಕೊಂಡು ಕರ್ತವ್ಯವನ್ನು ಮರೆತರೆ ಜನರೇ ಅದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.
ಚುನಾವಣೆಗೆ ಎಲ್ಲರೂ ಸಿದ್ಧರಾಗಲೇಬೇಕಿದೆ. ಹಾಗಂತ ಕಾಂಗ್ರೆಸ್ ಶಾಸಕರು ಸದನವನ್ನು ಬಿಟ್ಟು ಬಂದಿಲ್ಲ. ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಶಾಸಕರು ಸದನದಲ್ಲಿ ಜನರ ಸಮಸ್ಯೆಗಳಿಗೆ ಸದನದಲ್ಲಿ ಧ್ವನಿಯಾಗುತ್ತಿದ್ದಾರೆ. ಕಳೆದ ಬಾರಿ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಸದನದಲ್ಲಿ ಧ್ವನಿ ಎತ್ತಿದ್ದರಿಂದಲೇ ಮೈಶುಗರ್ ಕಾರ್ಖಾನೆ ಚಾಲನೆಗೆ ಕಾರಣವಾಯಿತು ಎಂದರು.
ಬಿಜೆಪಿಯನ್ನು ಹೊರಗಡೆ ನಿಂದಿಸುವ ಜೆಡಿಎಸ್ ಒಳಗೊಳಗೆ ಬೆಂಬಲ ನೀಡುವುದು ರಹಸ್ಯವೇನಲ್ಲ. ಬಿಜೆಪಿ ಜಾರಿಗೊಳಿಸಿದ ಹಲವು ಕಾಯ್ದೆಗಳಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಒಗ್ಗೂಡಿ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಮಾಡಿದರೂ ಜೆಡಿಎಸ್ ಬಿಜೆಪಿ ಅಭ್ಯರ್ಥಿ ಬೆನ್ನಿಗೆ ನಿಂತಿತು. ವಿಧಾನಸಭಾಧ್ಯಕ್ಷ ಕಾಂಗ್ರೆಸ್‌ನವರೆಂಬ ಕಾರಣಕ್ಕೆ ಅವರನ್ನು ಕೆಳಗಿಳಿಸಲು ಬಿಜೆಪಿಗೆ ಬೆಂಬಲ ನೀಡಿತು. ಹೀಗೆ ಜೆಡಿಎಸ್ ಹೊರಗಿನಿಂದ ಬಿಜೆಪಿಯನ್ನು ಟೀಕಿಸುತ್ತಾ ಒಳಗೊಳಗೆ ಬೆಂಬಲವನ್ನು ನೀಡುತ್ತಾ ದ್ವಿಮುಖ ನೀತಿ ಅನುಸರಿಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಮಾಜಿ ಶಾಸಕರಾದ ಎಂ.ಎಸ್. ಆತ್ಮಾನಂದ, ರಮೇಶ್ ಬಂಡಿಸಿದ್ದೇಗೌಡ, ಕೆ.ಬಿ. ಚಂದ್ರಶೇಖರ್, ಮುಖಂಡರಾದ ಗಣಿಗ ರವಿಕುಮಾರ್, ಅಂಜನಾ ಶ್ರೀಕಾಂತ್, ಎಚ್.ಕೆ. ರುದ್ರಪ್ಪ ಉಪಸ್ಥಿತರಿದ್ದರು.












Click it and Unblock the Notifications