ಮಂಡ್ಯದಲ್ಲಿ ನಿಖಿಲ್ ಹಿನ್ನಡೆಗೆ 'ಮೂರು ಶತ್ರುಗಳು' ಕಾರಣ ಎಂದ ಮುನಿರತ್ನ
Recommended Video
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಭಾರಿ ಹಿನ್ನಡೆಯಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ತೀವ್ರ ಪೈಪೋಟಿ ನೀಡಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಅಂತಿಮ ಹಂತದವರೆಗೂ ಹೋರಾಟ ನೀಡಿದರಾದರೂ ಗೆಲುವು ಸುಲಭವಾಗಿಲ್ಲ.
ಮಂಡ್ಯ ಫಲಿತಾಂಶದ ಬಗ್ಗೆ ರಾಜರಾಜೇಶ್ವರಿ ನಗರ ಕಾಂಗ್ರೆಸ್ ಶಾಸಕ, ನಿರ್ಮಾಪಕ ಮುನಿರತ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ನಿಖಿಲ್ ಕುಮಾರ್ ಸೋಲಿಗೆ ಮೂರು ಶತ್ರುಗಳು ಕಾರಣ' ಎಂದಿದ್ದಾರೆ.
''ಜೀವನದಲ್ಲಿ ಮೂರು ರೀತಿಯ ಶತ್ರುಗಳು ಇರ್ತಾರೆ. ಅಂತರಂಗ, ಬಹಿರಂಗ, ಹಿತಶತ್ರುಗಳು. ಮಂಡ್ಯದಲ್ಲೂ ಆ ಮೂರು ಶತ್ರುಗಳು ಸೇರಿ ಸೋಲಿಸಿದ್ರು. ನಿಖಿಲ್ ಬಹಳ ಒಳ್ಳೆಯ ಹುಡುಗ, ಆ ಹುಡುಗನ ವಿರುದ್ಧ ಕೆಲವರು ಕೆಲಸ ಮಾಡಿದ್ರು. ಹಾಗಾಗಿಯೇ ಸೋಲಬೇಕಾಯಿತು'' ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.

ಮುನಿರತ್ನ ನಿರೀಕ್ಷೆ ನಿಜ ಆಗಲಿಲ್ಲ
ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಮಂಡ್ಯದಲ್ಲಿ ಗೆದ್ದೆ ಗೆಲ್ತಾರೆ ಎಂಬ ಭರವಸೆ ನಿರ್ಮಾಪಕ ಮುನಿರತ್ನ ಅವರಿಗಿತ್ತು. 'ನಿಖಿಲ್ ಬಹಳ ಒಳ್ಳೆಯ ಹುಡುಗ, ಅವರ ಬಗ್ಗೆ ನನಗೆ ಗೊತ್ತಿದೆ, ಅವರನ್ನ ಮಂಡ್ಯ ಜನ ಕೈಬಿಡಲ್ಲ' ಎಂದು ಅತಿಯಾದ ಆತ್ಮ ವಿಶ್ವಾಸದಲ್ಲಿದ್ದರು. ಈಗ ನಿಖಿಲ್ ಸೋಲು ಮುನಿರತ್ನ ಅವರಿಗೂ ಬೇಸರ ತರಿಸಿದೆ.

ನಿಖಿಲ್ ಗಾಗಿ ಪ್ರಚಾರ ಮಾಡಿದ್ದ ಮುನಿರತ್ನ
ಮಂಡ್ಯದಲ್ಲಿ ನಿಖಿಲ್ ಕುಮಾರ್ ಪರವಾಗಿ ಸ್ವತಃ ಮುನಿರತ್ನ ಅವರು ಪ್ರಚಾರ ಮಾಡಿದ್ದರು. ಡಿಕೆ ಶಿವಕುಮಾರ್, ಸಿಎಂ ಕುಮಾರಸ್ವಾಮಿ ಜೊತೆ ಮಂಡ್ಯಕ್ಕೆ ಹೋಗಿದ್ದ ಮುನಿರತ್ನ ತಮ್ಮ ಸಿನಿಮಾ ನಟನನ್ನು ಗೆಲ್ಲಿಸಬೇಕೆಂದು ಮಂಡ್ಯ ಜನರಲ್ಲಿ ಕೇಳಿಕೊಂಡಿದ್ದರು.

ಅಂಬಿ ಅಂತ್ಯ ಸಂಸ್ಕಾರ ವಿಷ್ಯ ಚರ್ಚೆ ಮಾಡಿದ್ದ ಮುನಿರತ್ನ
ನಿಖಿಲ್ ಪರವಾಗಿ ಪ್ರಚಾರ ಮಾಡಲು ಮಂಡ್ಯಕ್ಕೆ ಹೋಗಿದ್ದ ಮುನಿರತ್ನ ಅಂದು ಅಂಬರೀಶ್ ಅಂತ್ಯ ಸಂಸ್ಕಾರದ ವಿಷ್ಯವನ್ನ ಪ್ರಸ್ತಾಪಿಸಿದ್ದರು. ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಕ್ರಿಯೆ ಮಾಡಲು ಜಾಗ ಸೂಚಿಸಿದ್ದೇ ನಿಖಿಲ್ ಎಂದು ಹೇಳಿಕೆ ನೀಡಿ ಮತಯಾಚನೆ ಮಾಡಿದ್ದರು. ಕೊನೆಗೂ ಅಭಿಮಾನವೂ ನಿಖಿಲ್ ಕೈಹಿಡಿಯಲಿಲ್ಲ.

ಕುರುಕ್ಷೇತ್ರ ಸಿನಿಮಾ ಏನಾಗುತ್ತೋ?
ಮುನಿರತ್ನ ನಿರ್ಮಾಣದ ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರ ನಿರ್ವಹಿಸಿದ್ದಾರೆ. ಆಗಸ್ಟ್ 9 ರಂದು ಸಿನಿಮಾ ರಿಲೀಸ್ ಆಗುತ್ತೆ ಎಂದು ಘೋಷಣೆ ಮಾಡಿ ಆಗಿದೆ. ಈ ಚಿತ್ರದಲ್ಲಿ ಸುಮಲತಾ ಪರ ನಿಂತಿದ್ದ ದರ್ಶನ್ ಪ್ರಮುಖ ಪಾತ್ರ ಮಾಡಿದ್ದರು. ಇದೀಗ, ದರ್ಶನ್ ಗೆಲುವು ನಿಖಿಲ್ ಸೋಲು ಚರ್ಚೆಗೆ ಕಾರಣವಾಗಿದ್ದು, ಕುರುಕ್ಷೇತ್ರದ ಕಥೆ ಏನಾಗುತ್ತೆ ಎಂಬ ಕುತೂಹಲ ಕಾಡುತ್ತಿದೆ.











Click it and Unblock the Notifications