ಮಂಡ್ಯ ಜಿಲ್ಲೆಗೆ ದಿಢೀರ್ ಭೇಟಿ ನೀಡಿದ ಸಚಿವ ನಾರಾಯಣ ಗೌಡ
ಮಂಡ್ಯ, ಮೇ 21: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ಇಂದು ಮಂಡ್ಯಕ್ಕೆ ದಿಢೀರ್ ಭೇಟಿ ನೀಡಿ, ಕೊರೊನಾ ವೈರಸ್ ಸೋಂಕಿತರಿಗೆ ಕ್ವಾರಂಟೈನ್ ಮಾಡಿರುವ ಸ್ಥಳದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಜನರನ್ನು ತಪಾಸಣೆ ನಡೆಸಿ ಕ್ವಾರಂಟೈನ್ ಮಾಡಲಾಗಿದೆ. ಅವರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸಚಿವರು ಸೂಚಿಸಿದ್ದರು. ಅಧಿಕಾರಿಗಳು ಆದೇಶವನ್ನು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತಂದಿದ್ದಾರೆ ಎಂದು ಖುದ್ದು ಸಚಿವರೇ ಭೇಟಿ ನೀಡಿ ವೀಕ್ಷಿಸಿದರು.
ಕೆ.ಆರ್ ಪೇಟೆಗೆ ಭೇಟಿ ನೀಡಿ, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದರು. ಇನ್ನೂ ಉತ್ತಮ ರೀತಿಯಲ್ಲಿ ಕ್ವಾರಂಟೈನ್ ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಚಿಕ್ಕ ಮಕ್ಕಳಿದ್ದಾರೆ ಅವರಿಗೆ ಹಾಲು, ಹಣ್ಣಿನ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು ಎಂದು ತಿಳಿಸಿದರು.

ಕೆಲವೆಡೆ ಸರಿಯಾದ ವ್ಯವಸ್ಥೆ ಇಲ್ಲ ಎಂಬ ಆರೋಪ ಬಂದಿದೆ. ಅಂತಹ ಆರೋಪ ಮತ್ತೆ ಬರಕೂಡದು. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು. ದೂರು ಬಂದರೆ ಸುಮ್ಮನಿರಲ್ಲ ಎಂದು ಸಚಿವ ನಾರಾಯಣ ಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಕ್ರಮವಹಿಸಲು ಮೊನ್ನೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ನಿನ್ನೆ ಆದಿಚುಂಚನಗಿರಿ ಶ್ರೀಗಳ ಸಾನ್ನಿಧ್ಯದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿದ್ದರು. ಇಂದು ಜಿಲ್ಲೆಗೆ ಭೇಟಿ ನೀಡಿ ಕ್ವಾರಂಟೈನ್ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications