ಕಾವೇರಿ ನದಿ ಸೃಷ್ಟಿಯ ಸುಂದರ ತಾಣ ಶ್ರೀರಂಗಪಟ್ಟಣ: ಇಲ್ಲಿನ ವಿಶೇಷತೆ ಗೊತ್ತಾ?

ಮಂಡ್ಯ, ಸೆಪ್ಟೆಂಬರ್‌ 12: ಪ್ರವಾಸಿ ತಾಣವಾಗಿರುವ ಶ್ರೀರಂಗಪಟ್ಟಣ ಪೌರಾಣಿಕ ಮತ್ತು ಐತಿಹಾಸಿಕವಾಗಿ ಎಲ್ಲರನ್ನು ಆಕರ್ಷಿಸುವ ತಾಣವಾಗಿದೆ. ತನ್ನದೇ ಆದ ಐತಿಹಾಸಿಕ ವೈಭವದಿಂದ ಮೆರೆದ ಪಟ್ಟಣವಾಗಿದೆ. ಜಗದ್ವಿಖ್ಯಾತ ದಸರಾ ಕೂಡ ಇಲ್ಲಿಂದಲೇ ಆರಂಭವಾಗಿರುವುದು ಇಲ್ಲಿನ ವಿಶೇಷತೆಗೆ ಸಾಕ್ಷಿಯಾಗಿದೆ. ಇಲ್ಲಿಗೊಮ್ಮೆ ಭೇಟಿ ನೀಡಿದರೆ ಇತಿಹಾಸದ ಕಥೆಗಳು ಕಣ್ಣಮುಂದೆ ಹಾದು ಬರುತ್ತವೆ. ಹಾಗೆಯೇ ಸುಂದರ ಪರಿಸರದೊಂದಿಗೆ ಇಲ್ಲಿರುವ ಪ್ರವಾಸಿ ತಾಣಗಳು ಆಕರ್ಷಿಸುತ್ತವೆ.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಗೆ ಸೇರಿದ ತಾಲೂಕು ಕೇಂದ್ರವಾಗಿದ್ದರೂ ಮೈಸೂರಿಗೆ ಸಮೀಪದಲ್ಲಿದೆ. ಹೀಗಾಗಿಯೇ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ. ಮೈಸೂರಿಗೆ ಆಗಮಿಸಿದವರು ಶ್ರೀರಂಗಪಟ್ಟಣಕ್ಕೆ ತೆರಳಿ ಪ್ರವಾಸಿ ತಾಣಗಳನ್ನು ನೋಡಿಕೊಂಡು, ದೇಗುಲಗಳ ದರ್ಶನ ಮಾಡಿಕೊಂಡು ಹಿಂತಿರುಗುತ್ತಾರೆ. ಇವತ್ತು ಮೈಸೂರು ದಸರಾ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದರೂ ಅದರ ಮೂಲ ಇರುವುದೇ ಶ್ರೀರಂಗಪಟ್ಟಣದಲ್ಲಿಯೇ ಅಷ್ಟೇ ಅಲ್ಲದೆ ಮೈಸೂರು ಸಂಸ್ಥಾನದ ಆಡಳಿತವು ಶ್ರೀರಂಗಪಟ್ಟಣದಿಂದಲೇ ನಡೆಯುತ್ತಿತ್ತು.

Mandya tourist Places What Is The Speciality Of Srirangapatna

ಇನ್ನು ಶ್ರೀರಂಗಪಟ್ಟಣ ಎಂದಾಕ್ಷಣ ಎಲ್ಲರ ಕಿವಿನಿಮಿರುತ್ತದೆ. ಜತೆಗೆ ಟಿಪ್ಪು ಸುಲ್ತಾನ್ ನೆನಪಾಗುತ್ತಾನೆ. ಏಕೆಂದರೆ ಟಿಪ್ಪು ಸುಲ್ತಾನ್ ತನ್ನ ರಾಜ್ಯಭಾರ ಮಾಡುತ್ತಿದ್ದದ್ದೇ ಶ್ರೀರಂಗಪಟ್ಟಣದಿಂದ ಮತ್ತು ಅದು ಆತನ ರಾಜಧಾನಿಯೂ ಆಗಿತ್ತು. ಇನ್ನು ನಾವು ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದರೆ ಇಲ್ಲಿನ ಇತಿಹಾಸ ರೋಚಕ ವಿಚಾರಗಳು ಇಲ್ಲಿಂದಲೇ ಹೊರಗೆ ಬರುತ್ತವೆ. ಶ್ರೀರಂಗಪಟ್ಟಣದ ಬಗ್ಗೆ ಪೌರಾಣಿಕವಾಗಿ ಹೇಳುವುದಾದರೆ ಕಾವೇರಿ ನದಿ ತಟದಲ್ಲಿದ್ದು, ಪವಿತ್ರಕ್ಷೇತ್ರವಾಗಿಯೂ, ಸಂಗಮಕ್ಷೇತ್ರವಾಗಿಯೂ ಪಾಪಕಳೆದು ಪುಣ್ಯನೀಡುವ ಕ್ಷೇತ್ರವಾಗಿಯೂ ಕಂಗೊಳಿಸುತ್ತದೆ. ಇನ್ನು ಕಾವೇರಿ ನದಿ ಎರಡು ಕವಲಾಗಿ ಒಡೆದು ಶ್ರೀರಂಗಪಟ್ಟಣವನ್ನು ದ್ವೀಪವನ್ನಾಗಿಸಿರುವುದು ವಿಶೇಷವಾಗಿದೆ.

ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆ

ಪೌರಾಣಿಕವಾಗಿ 'ಆದಿರಂಗ'ವೆಂದೂ, ಚಾರಿತ್ರಿಕವಾಗಿ 'ಅಷ್ಟಗ್ರಾಮ' ಎಂದೂ ಕರೆಯಲ್ಪಡುವ ಶ್ರೀರಂಗಪಟ್ಟಣವು ಕಾವೇರಿ ನದಿಯಿಂದ ನಿರ್ಮಿತವಾದ ನಯನ ಮನೋಹರ ದ್ವೀಪ ಎಂದರೆ ತಪ್ಪಾಗಲಾರದು. ಪಟ್ಟಣವು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು ಮೂರು ಮೈಲಿಗಳಷ್ಟು ಉದ್ದ ಮತ್ತು ಉತ್ತರ-ದಕ್ಷಿಣವಾಗಿ ಒಂದು ಮೈಲಿಯಷ್ಟು ಅಗಲವನ್ನು ಹೊಂದಿದೆ. ಇಲ್ಲಿರುವ ಭದ್ರ ಕೋಟೆಯನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯನು ಕ್ರಿ.ಶ. 1120ರಲ್ಲಿ ಹಾಗೂ ಕ್ರಿ.ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣನೆಂಬುವನು ನಿರ್ಮಿಸಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ.

ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರಿದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಟ ಕೋಟೆಯೆಂದು ಹೇಳಲಾಗಿದೆ. ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿದ್ದ ಇದು ಅವರ ಸಾಮಂತ ಶ್ರೀರಂಗರಾಯನ ನಂತರ 1610ರಲ್ಲಿ ಮೈಸೂರು ಅರಸರ ಕೈವಶವಾಗಿತ್ತು. ತದನಂತರ ರಾಜಧಾನಿಯಾಗಿ ಬಹು ವೈಭವದಿಂದ ಮೆರೆದಿತ್ತು. ಟಿಪ್ಪುವಿನ ಮರಣಾನಂತರ ಬ್ರಿಟಿಷರ ಅಧಿಪತ್ಯಕ್ಕೊಳಪಟ್ಟ ಶ್ರೀರಂಗಪಟ್ಟಣ ತನ್ನ ರಾಜಧಾನಿ ಪಟ್ಟವನ್ನು ಮೈಸೂರಿಗೆ ಬಿಟ್ಟುಕೊಟ್ಟಿತ್ತು. ಹಾಗೆಯೇ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ದಸರಾ ಹಬ್ಬ ಕೂಡ ಮೈಸೂರಿಗೆ ವರ್ಗಾವಣೆಗೊಂಡಿತು.

Mandya tourist Places What Is The Speciality Of Srirangapatna

ಹಲವು ದೇಗುಲಗಳ ಭವ್ಯ ಪಟ್ಟಣ

ಇತಿಹಾಸದ ಪುಟಗಳಲ್ಲಿ ಶ್ರೀರಂಗಪಟ್ಟಣದ ಬಗ್ಗೆ ಬಹಳಷ್ಟು ರೋಚಕ ವಿಚಾರಗಳಿವೆ. ಇಡೀ ಭಾರತವನ್ನು ತಮ್ಮ ಕೈವಶ ಮಾಡಿಕೊಂಡಿದ್ದ ಬ್ರಿಟೀಷರಿಗೆ ಭೇದಿಸಲಾಗದ ಭದ್ರಕೋಟೆಯಾಗಿತ್ತು. ಬ್ರಿಟೀಷರು ನಾಲ್ಕು ಬಾರಿ ಇಲ್ಲಿಗೆ ದಂಡೆತ್ತಿ ಬಂದಿದ್ದರು ಎಂದರೆ ಇಲ್ಲಿನ ಸಾಮರ್ಥ್ಯ ಅರಿವಾಗುತ್ತದೆ. ಇವತ್ತು ನಾವು ಶ್ರೀರಂಗಪಟ್ಟಣಕ್ಕೊಂದು ಸುತ್ತು ಹೊಡೆದರೆ ಮಲಗಿರುವ ಶ್ರೀರಂಗನಾಥಸ್ವಾಮಿ ದೇವಸ್ಥಾನ ಎದ್ದು ಕಾಣುತ್ತದೆ ಶ್ರೀರಂಗಸ್ವಾಮಿಯ ಕ್ಷೇತ್ರವಾದ್ದರಿಂದ ಶ್ರೀರಂಗಪಟ್ಟಣ ಎಂಬ ಹೆಸರು ಬಂದಿದೆ. ಈ ದೇವಾಲಯವು ಗಗನ ಚುಂಬಿಸುವ ಬೃಹತ್ ರಾಜಗೋಪುರವನ್ನು ಹೊಂದಿದ್ದು ಶ್ರೀರಂಗನಾಥಸ್ವಾಮಿಯ ಮಲಗಿರುವ ಮೂರ್ತಿಯಿದೆ. ಕ್ರಿ.ಶ. 894ರಲ್ಲಿ ಗಂಗರ ತಿರುಮಲೈ ಎಂಬಾತ ಕಟ್ಟಿಸಿದನೆಂದು ಹೇಳಲಾಗುತ್ತದೆ.

ಶ್ರೀ ಗಂಗಾಧರೇಶ್ವರ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ, ಶ್ರೀ ಜ್ಯೋತಿರ್ಮಹೇಶ್ವರಿ, ಶ್ರೀ ವಿಘ್ನೇಶ್ವರ, ನಗರೇಶ್ವರ, ಶ್ರೀ ಆಂಜನೇಯಸ್ವಾಮಿ, ಶ್ರೀ ಜನಾರ್ಧನಸ್ವಾಮಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಗೋಪಾಲಕೃಷ್ಣಸ್ವಾಮಿ, ಶಕ್ತಿದೇವತೆಗಳಾದ ಶ್ರೀ ಅಂಕಾಳಮ್ಮ, ಶ್ರೀ ಮಾರಮ್ಮ, ಶ್ರೀ ಕಾಳಮ್ಮ ಮುಂತಾದ ದೇವಾನುದೇವತೆಗಳ ಹಲವು ದೇವಾಲಯಗಳನ್ನು ನಾವು ನೋಡಬಹುದಾಗಿದೆ. ಇನ್ನು ದೇವಾಲಯಗಳೊಂದಿಗೆ ಶತಕೋಟಿ ರಾಮಮಂದಿರ ಕಾವೇರಿ ತೀರದಲ್ಲಿರುವ ಪ್ರಸಿದ್ಧ ಸಾಯಿಮಂದಿರ, ಉತ್ತರಾಧಿಮಠ, ರಾಘವೇಂದ್ರಮಠ, ಯತಿರಾಜಮಠ ಇತ್ಯಾದಿ ಮಠ ಮಾನ್ಯಗಳು, ಮಂದಿರಗಳು ಇಲ್ಲಿವೆ.

ಗಗನಚುಂಬಿಯಾದ ಜುಮ್ಮಾ ಮಸೀದಿ

ಶ್ರೀರಂಗಪಟ್ಟಣದ ಮತ್ತೊಂದು ಐತಿಹಾಸಿಕ ಸ್ಮಾರಕವೆಂದರೆ ಟಿಪ್ಪು ಪ್ರಾರ್ಥನೆ ಮಾಡುತ್ತಿದ್ದ 1781ರಲ್ಲಿ ಕಟ್ಟಿಸಲಾದ ಆಕಾಶಮುಟ್ಟುವ ನೂರಡಿ ಎತ್ತರದ ಆಕರ್ಷಕವಾದ ಎರಡು ಮಿನಾರುಗಳುಳ್ಳ 'ಜುಮ್ಮಾ ಮಸೀದಿ' ಎಲ್ಲರ ಗಮನಸೆಳೆಯುತ್ತದೆ. ಇಲ್ಲಿ ದೂರದ ಸ್ಥಳಗಳನ್ನು ವೀಕ್ಷಿಸಲು ಟಿಪ್ಪು ಬಳಸುತ್ತಿದ್ದ ಬಹು ಎತ್ತರದ 'ಬತೇರಿ', ಬ್ರಿಟಿಷರನ್ನು ಮತ್ತು ಮತ್ತಿತರೆ ತನ್ನ ವೈರಿಗಳನ್ನು ಟಿಪ್ಪು ಬಂಧಿಸುತ್ತಿದ್ದ ನೆಲಮಾಳಿಗೆಯ ಬಂದೀಖಾನೆಯಾದ 'ಬೇಲಿಡಂಜನ್', ಇದರ ಮಧ್ಯದಲ್ಲಿರುವ ಹತ್ತು ಅಡಿ ಉದ್ದದ ಟಿಪ್ಪು ಕಾಲದ 'ಪಿರಂಗಿ', ಇದರ ಹತ್ತಿರದಲ್ಲೇ ಇರುವ ಮೈಸೂರಿನ ನಾಲ್ಕನೇ ಮಹಾಯುದ್ಧದಲ್ಲಿ ಹೋರಾಡಿ ಮಡಿದ ಸೈನಿಕರನ್ನು ಸ್ಮರಿಸುವ 'ಸೈನಿಕ ಸ್ಮಾರಕ ಸ್ತಂಭ ಗಮನಸೆಳೆಯುತ್ತಿದೆ.

Mandya tourist Places What Is The Speciality Of Srirangapatna

ಕಾವೇರಿ ನದಿಯ ಎಡಕವಲಿಗೆ ಅಡ್ಡವಾಗಿ ನಿರ್ಮಿಸಿರುವ ಕರ್ನಾಟಕದ ಅತ್ಯಂತ ಪ್ರಾಚೀನ ಸೇತುವೆಯಾದ 'ವೆಲ್ಲೆಸ್ಲಿ ಸೇತುವೆ', 1784ರಲ್ಲಿ ಕಟ್ಟಲ್ಪಟ್ಟಿರುವ 1959ರಿಂದ ವಸ್ತು ಸಂಗ್ರಹಾಲಯವಾಗಿರುವ ಟಿಪ್ಪುವಿನ ಅಂದದ ಬೇಸಿಗೆ ಅರಮನೆ 'ದರಿಯಾ ದೌಲತ್', ಟಿಪ್ಪು ಸುಲ್ತಾನ್ ಮತ್ತು ಆತನ ತಂದೆ-ತಾಯಿ ಮತ್ತವರ ಕುಟುಂಬದವರ ಸಮಾಧಿಗಳಿರುವ 1784ರಲ್ಲಿ ನಿರ್ಮಾಣಗೊಂಡಿರುವ ಗೋಳಗುಮ್ಮಟದಾಕಾರದ 'ಗುಂಬಜ್' ಕಣ್ಮನಸೆಳೆಯುತ್ತದೆ. ಇಲ್ಲಿಗೆ ಸಮೀಪದಲ್ಲಿಯೇ ಕಾವೇರಿ ನದಿ ಇಬ್ಭಾಗವಾಗಿ ಹರಿದು ಮುಂದೆ ಸಾಗಿ ಮತ್ತೆ ಸೇರುವ ಸಂಗಮ ಕ್ಷೇತ್ರವಿದೆ.

ಶ್ರೀರಂಗಪಟ್ಟಣ ಸುತ್ತಮುತ್ತ ಏನೇನಿದೆ?

ಅಸ್ಥಿ ವಿಸರ್ಜಿಸುವ, ಪಿತೃಕ್ರಿಯೆ ನಡೆಸುವ ಪಶ್ಚಿಮವಾಹಿನಿ, ರಮಣೀಯ 'ಗೋಸಾಯಿ ಘಾಟ್' ಕಾವೇರಿಯ ಉತ್ತರ ದಡದಲ್ಲಿರುವ ಗಂಜಾಂನ ಪ್ರಸಿದ್ಧ 'ನಿಮಿಷಾಂಬ ದೇವಸ್ಥಾನ' ತುಸು ದೂರದಲ್ಲೇ ಇರುವ ಶ್ರೀರಾಮ, ಕಾಶಿವಿಶ್ವನಾಥ, ಕನ್ಯಕಾ ಪರಮೇಶ್ವರಿ, ಗೌರಿ ದೇಗುಲಗಳು ಹಾಗೂ ಫ್ರೆಂಚ್‌ನ ಕ್ರೈಸ್ತ ಪಾದ್ರಿ ಅಬ್ಬಿದುಬುವಾ ಸ್ಥಾಪಿಸಿರುವ 'ಅಬ್ಬಿದುಬುವಾ ಚರ್ಚ್' ಕಾವೇರಿ ನದಿಯ ಮಧ್ಯ ಭಾಗದಲ್ಲಿರುವ ವಿಶ್ವವಿಖ್ಯಾತ 'ರಂಗನತಿಟ್ಟು ಪಕ್ಷಿಧಾಮ', ನಂದಿ ಬಸಪ್ಪ ಛತ್ರ, ಅಂಡಾಪುರದ ರಂಗಾಚಾರ್ಯ ಛತ್ರ, ಗಾಡಿಚೆಲುವರಾಯಶೆಟ್ಟಿ ಛತ್ರ, ಮಹಾರಾಜರ ಛತ್ರಗಳು ಹೀಗೆ ಹತ್ತು ಹಲವು ತಾಣಗಳು ಇಲ್ಲಿವೆ. ಇನ್ನು ಶ್ರೀರಂಗಪಟ್ಟಣವು ಮೈಸೂರಿಗೆ ಕೇವಲ 16 ಕಿ.ಮೀ. ದೂರದಲ್ಲಿದ್ದು, ಇಲ್ಲಿಂದ ಬೇಕಾದಷ್ಟು ಬಸ್ ಸೌಲಭ್ಯಗಳು ಇವೆ. ಬೆಂಗಳೂರಿನಿಂದ 122 ಕಿ.ಮೀ. ದೂರವಾಗುತ್ತದೆ.

ಶ್ರೀರಂಗಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ. ಅಂತರದಲ್ಲಿ ಬನ್ನೂರು ರಸ್ತೆಯಲ್ಲಿರುವ 'ಕರಿಘಟ್ಟ ಗಿರಿಧಾಮ', ಅಲ್ಲೇ ತುಸುದೂರದಲ್ಲಿ 'ಗೆಂಡೆಹೊಸಹಳ್ಳಿ ಪಕ್ಷಿಧಾಮ' (ಬಂಡೀಸಿದ್ದೇಗೌಡ ಪಕ್ಷಿಧಾಮ) ಇದರ ಸಮೀಪದಲ್ಲೇ 'ಬೋರೇದೇವರಗುಡಿ', ಚಿತ್ರನಗರಿ ಎಂದೇ ಖ್ಯಾತವಾಗಿರುವ 'ಮಹದೇವಪುರ' ದಂತಹ ರಮ್ಯ ಸ್ಥಳಗಳು ಪ್ರವಾಸಿಗರನ್ನು ಮಂತ್ರ ಮುಗ್ಧಗೊಳಿಸುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿಂದ 15 ಕಿ.ಮೀ. ದೂರದಲ್ಲಿ ಕೆಆರ್ ಎಸ್ ಜಲಾಶಯ ಮತ್ತು ಬೃಂದಾವನವಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಶ್ರೀರಂಗಪಟ್ಟಣದಲ್ಲಿಯೇ ಹೋಟೆಲ್ ರೆಸಾರ್ಟ್‌ಗಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+