ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಕೌಂಟರ್ ಸಿಬ್ಬಂದಿ ನಿರ್ಲಕ್ಷ್ಯ: ರೋಗಿಗಳ ಪರದಾಟ
ಮಂಡ್ಯ, ಅಕ್ಟೋಬರ್ 11: ಮಂಡ್ಯ ಜಿಲ್ಲಾಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ 10 ರೂಪಾಯಿ ಚೀಟಿ ಪಡೆಯುವುದೆಂದರೆ ಅದೊಂದು ದೊಡ್ಡ ಸಾಹಸದ ಕೆಲಸ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಚೀಟಿ ಪಡೆಯಬೇಕು. ತುರ್ತಾಗಿ ಚೀಟಿ ಬೇಕೆಂದರೆ ಸಿಗುವುದೇ ಇಲ್ಲ. ಇದು ಒಂದು ದಿನದ ಕತೆಯಲ್ಲ. ನಿತ್ಯ ಸಾವಿರಾರು ರೋಗಿಗಳು ಅನುಭವಿಸುತ್ತಿರುವ ಯಮಯಾತನೆಯಾಗಿದೆ.
ಹೇಳಿಕೊಳ್ಳುವುದಕ್ಕೆ ಮಾತ್ರ ಮಿಮ್ಸ್ ದೊಡ್ಡಾಸ್ಪತ್ರೆ. ಸಂಪೂರ್ಣ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೆ ಚೀಟಿ ಕೊಡುವುದಕ್ಕೆ ಇರುವುದು ಒಂದೇ ಕೌಂಟರ್. ನಿತ್ಯ 1500 ರಿಂದ 1800 ಸಂಖ್ಯೆಯಲ್ಲಿ ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುವುದಕ್ಕೆ ಆಸ್ಪತ್ರೆಗೆ ಬರುತ್ತಿದ್ದಾರೆ. ಅವರೆಲ್ಲರೂ 10 ರೂಪಾಯಿ ಕೊಟ್ಟು ಚೀಟಿ ಪಡೆಯುವುದು ಕಡ್ಡಾಯ.
ಕೌಂಟರ್‌ನಲ್ಲಿರುವ ಮೂವರು ಚೀಟಿ ಕೊಡುವುದಕ್ಕೆ ತೋರಿಸುತ್ತಿರುವ ಉದಾಸೀನತೆ, ಬೇಜವಾಬ್ದಾರಿತನ, ನಿರ್ಲಕ್ಷ್ಯದಿಂದ ಚೀಟಿ ಕೊಡುವ ಕೇಂದ್ರ ಸದಾಕಾಲ ಜನದಟ್ಟಣೆಯಿಂದ ತುಂಬಿರುತ್ತದೆ ಎನ್ನಲಾಗಿದೆ. ರೋಗಿಗಳು ಅನುಭವಿಸುವ ನೋವು, ಸಂಕಟ, ನರಳಾಟ, ತುರ್ತು ಚಿಕಿತ್ಸೆಗಾಗಿ ಬಂದವರ ಆತಂಕ, ದೂರದ ಊರಿನಿಂದ ಬಂದವರ ಕಾತರ, ವೈದ್ಯರನ್ನು ಶೀಘ್ರ ಭೇಟಿ ಮಾಡಬೇಕೆಂದು ಬರುವವರ ಹಂಬಲ ಯಾವುದು ಕೂಡ ಚೀಟಿ ಕೊಡುವ ಸಿಬ್ಬಂದಿಗೆ ಅರ್ಥವಾಗುವುದೇ ಇಲ್ಲ.

ಹರಟೆಯಲ್ಲಿ ಬ್ಯುಸಿಯಾದ ಮಿಮ್ಸ ಸಿಬ್ಬಂದಿ
ಕೌಂಟರ್‌ನಲ್ಲಿ ಚೀಟಿ ಕೊಡುವುದಕ್ಕೆ ಇರುವ ಸಿಬ್ಬಂದಿ ಮೂವರು ಅವರದ್ದೇ ಆದ ಲೋಕ, ಮಾತು, ಹರಟೆಯಲ್ಲಿ ತೊಡಗಿರುತ್ತಾರೆ. ಲೋಕಾಭಿರಾಮವಾಗಿ ಹರಟುತ್ತಾ ಚೀಟಿಯನ್ನು ಕೊಡುತ್ತಿರುತ್ತಾರೆ. ಒಮ್ಮೊಮ್ಮೆ ಟೀ-ಕಾಫೀ ಕುಡಿದು ಬರುವುದಕ್ಕೆ ಎದ್ದು ಹೋಗುವವರು 15-20 ನಿಮಿಷವಾದರೂ ಬರುವುದೇ ಇಲ್ಲ. ಅಲ್ಲಿಯವರೆಗೂ ಕೌಂಟರ್‌ಗಳಲ್ಲಿ ಜನರು ಕಾದು ಕೂರುವುದು ಅನಿವಾರ್ಯವಾಗಿದೆ. ಕೆಲವೊಮ್ಮೆ ಒಬ್ಬರೇ ಚೀಟಿಯನ್ನು ಕೊಡುತ್ತಿರುತ್ತಾರೆ.

ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಜನ ಹೈರಾಣು
ಇಷ್ಟೊಂದು ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸುವ ಸಿಬ್ಬಂದಿಯ ಕರ್ತವ್ಯಲೋಪ ವೈದ್ಯಾಕಾರಿಗಳ ಗಮನಕ್ಕೆ ಬಂದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಧೈರ್ಯ ಪ್ರದರ್ಶಿಸುತ್ತಿಲ್ಲ. ಏಕೆಂದರೆ, ಚೀಟಿ ಕೊಡುವ ಕೌಂಟರ್‌ನಲ್ಲಿರುವ ಸಿಬ್ಬಂದಿ ಸಾಕಷ್ಟು ಪ್ರಭಾವಿಗಳಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಂಡರೆ ಅದನ್ನು ಎದುರಿಸುವ ಶಕ್ತಿ ಮಿಮ್ಸ್ ನಿರ್ದೇಶಕರಿಗೇ ಇಲ್ಲ ಎಂದು ಹೇಳಲಾಗುತ್ತಿದೆ. ಇದು ಮಿಮ್ಸ ಆಸ್ಪತ್ರೆಯ ಪರಿಸ್ಥಿತಿಯಾಗಿದ್ದು, ಜಿಲ್ಲಾಸ್ಪತ್ರೆಯನ್ನು ನಂಬಿಕೊಂಡು ಬಂದ ರೋಗಿಗಳು ಹೈರಾಣಾಗುತ್ತಿದ್ದಾರೆ.

ಸದ್ಯ ಆಸ್ಪತ್ರೆ ಪ್ರವೇಶದ್ವಾರದಲ್ಲಿ ಒಂದೇ ಒಂದು ಕೌಂಟರ್
ಕೌಂಟರ್ ಸಮಸ್ಯೆಯಿಂದಾಗಿಯೇ ಈ ಮೊದಲು ಆಸ್ಪತ್ರೆಯೊಳಗೆ ಹಲವಾರು ಕಡೆಗಳಲ್ಲಿ ಹೊರರೋಗಿಗಳು ಚೀಟಿ ಪಡೆಯುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆಗ ಜನರು ಸುಲಭವಾಗಿ ಚೀಟಿಯನ್ನು ಪಡೆದುಕೊಂಡು ಶೀಘ್ರವಾಗಿ ವೈದ್ಯರ ಬಳಿಗೆ ಹೋಗುತ್ತಿದ್ದರು. ಕೌಂಟರ್‌ಗಳ ಬಳಿ ಜನದಟ್ಟಣೆಯ ಸಮಸ್ಯೆಯೇ ಇರಲಿಲ್ಲ. ಹಲವಾರು ತಿಂಗಳುಗಳ ಕಾಲ ಈ ಕೌಂಟರ್‌ಗಳು ಕಾರ್ಯನಿರ್ವಹಿಸಿದವು. ಇದರಿಂದ ಆಸ್ಪತ್ರೆಗೆ ಬರುವ ಜನರಿಗೆ ಚೀಟಿ ಪಡೆಯಲು ಯಾವುದೇ ಅನಾನುಕೂಲವಾಗುತ್ತಿರಲಿಲ್ಲ. ಆನಂತರದಲ್ಲಿ ಆ ಕೌಂಟರ್‌ಗಳನ್ನು ಮುಚ್ಚಲಾಯಿತು. ಹೊರ ರೋಗಿಗಳಿಗೆ ಚೀಟಿ ಕೊಡುವುದಕ್ಕೆ ಈಗ ಆಸ್ಪತ್ರೆ ಪ್ರವೇಶದ್ವಾರದಲ್ಲಿ ಒಂದೇ ಒಂದು ಕೌಂಟರ್ ಇದೆ. ಅಲ್ಲೇ ಚೀಟಿ ಪಡೆಯಬೇಕಿದೆ. ಇದು ಜನರಿಗೆ ದುರ್ಬರವಾಗಿದ್ದು, ಸಮಯಕ್ಕೆ ಸರಿಯಾಗಿ ಚೀಟಿ ಸಿಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೈಚೆಲ್ಲಿ ಕುಳಿತ ಮಿಮ್ಸ್ ವೈದ್ಯಾಧಿಕಾರಿಗಳು
ಆಸ್ಪತ್ರೆ ಒಳಗಿದ್ದ ಕೌಂಟರ್‌ಗಳನ್ನು ಮುಚ್ಚಿದ್ದೇಕೆ ಎಂಬ ಪ್ರಶ್ನೆಗೆ, ಕೌಂಟರ್‌ಗಳಲ್ಲಿ ಕೆಲಸ ನಿರ್ವಹಿಸುವುದಕ್ಕೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುವುದಕ್ಕೂ ಅವಕಾಶವಿಲ್ಲ. ಕೌಂಟರ್‌ಗಳ ಬಳಿ ಸಂಗ್ರಹವಾಗುವ ಹಣಕ್ಕೆ ಸೂಕ್ತ ಸುರಕ್ಷತೆ ಇರುವುದಿಲ್ಲ. ಅದಕ್ಕಾಗಿ ಒಂದೇ ಒಂದು ಕೌಂಟರ್ ಮೂಲಕ ಜನರಿಗೆ ಚೀಟಿಯನ್ನು ವಿತರಿಸಲಾಗುತ್ತಿದೆ ಎಂದು ವೈದ್ಯಾಕಾರಿಗಳು ಹೇಳುತ್ತಾರೆ. ಹೊರಗಿನ ಕೌಂಟರ್‌ನಲ್ಲಿರುವ ಸಿಬ್ಬಂದಿ ತ್ವರಿತಗತಿಯಲ್ಲಿ ಚೀಟಿ ವಿತರಿಸಿದರೆ ಜನದಟ್ಟಣೆಯನ್ನು ಕಡಿಮೆ ಮಾಡಬಹುದು. ಆದರೆ, ಆ ಆಸಕ್ತಿಯನ್ನು ಸಿಬ್ಬಂದಿ ತೋರಿಸುವುದೇ ಇಲ್ಲ. ಇದರಿಂದ ಸದಾಕಾಲ ಜನರು ಕೌಂಟರ್‌ಗಳ ಬಳಿ ತುಂಬಿಹೋಗಿರುತ್ತಾರೆ. ಸಮಸ್ಯೆಗೆ ಪರಿಹಾರವನ್ನೇ ಸೂಚಿಸಲಾಗದೆ ಮಿಮ್ಸ್ ವೈದ್ಯಾಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.
ಇನ್ನು ಆಸ್ಪತ್ರೆಯ ಈ ಅವ್ಯವಸ್ಥೆಯ ಬಗ್ಗೆ ಮಾತನಾಡಿದ ಮಿಮ್ಸ್ ನಿರ್ದೇಶಕ ಬಿ.ಜೆ.ಮಹೇಂದ್ರ ಅವರು, " ಮಿಮ್ಸ್ ಆಸ್ಪತ್ರೆಯಲ್ಲಿನ ಹೊರರೋಗಿಗಳ ವಿಭಾಗದಲ್ಲಿ ಕೌಂಟರ್ ಸಮಸ್ಯೆ ನನ್ನ ಗಮನದಲ್ಲೂ ಇದೆ. ಹೆಚ್ಚಿನ ಕೌಂಟರ್‌ಗಳನ್ನು ತೆರೆಯುವುದಕ್ಕೆ ಸೂಕ್ತ ಸಿಬ್ಬಂದಿಗಳಿಲ್ಲ. ಅದೇ ಕಾರಣಕ್ಕೆ ಆಸ್ಪತ್ರೆ ಒಳಗಿದ್ದ ಕೌಂಟರ್‌ಗಳನ್ನು ಮುಚ್ಚಲಾಗಿದೆ. ಕೌಂಟರ್‌ಗಳಲ್ಲಿರುವ ಸಿಬ್ಬಂದಿ ತ್ವರಿತಗತಿಯಲ್ಲಿ ರೋಗಿಗಳಿಗೆ ಚೀಟಿ ವಿತರಿಸುವಂತೆ ಸೂಚಿಸಿದ್ದೇವೆ. ಅನಗತ್ಯ ವಿಳಂಬ, ಬೇಜವಾಬ್ದಾರಿತನ, ನಿರ್ಲಕ್ಷ್ಯ ಕಂಡುಬಂದರೆ ಸೂಕ್ತ ಕ್ರಮ ಜರುಗಿಸುತ್ತೇನೆ" ಎನ್ನುವ ಭರವಸೆ ನೀಡಿದ್ದಾರೆ.











Click it and Unblock the Notifications