KRS Dam: ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ರೈತರ ಪ್ರತಿಭಟನೆ
ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೂ ತಕ್ಷಣವೇ ನೀರು ಹರಿಸುವಂತೆ ಒತ್ತಾಯಿಸಿ ಭೂಮಿತಾಯಿ ಹೊರಾಟ ಸಮಿತಿ ಸದಸ್ಯರು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಮಂಡ್ಯ ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಕುವೆಂಪು ವೃತ್ತದಲ್ಲಿ ರೈತ ಮುಖಂಡ ಕೆ.ಎಸ್ ನಂಜುಡೇಗೌಡ ನೇತೃತ್ವದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರು ಜಮಾಯಿಸಿ, ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್ ನಂಜುಂಡೇಗೌಡ ಮಾತನಾಡಿ, ಜಲಾಶಯದಲ್ಲಿ ಇರುವ ನೀರನ್ನು ತಮಿಳುನಾಡು ಹಿತ ಕಾಯಲು ನದಿ ಮೂಲಕ ನೀರು ಹರಿಸಿದ ಸರ್ಕಾರ, ಮಂಡ್ಯ ಜಿಲ್ಲೆಯ ರೈತರಿಗೆ ಬೇಸಿಗೆ ಹಂಗಾಮು ಬೆಳೆಗೂ ನೀರು ಕೊಡದೆ, ಇದೀಗ ಮುಂಗಾರು ಬೆಳೆಗೆ ಬಿತ್ತನೆ ಬೀಜ ಹಾಕಿ ಬೆಳೆ ಬೆಳೆಯಲು ರೈತರನ್ನು ದಿಕ್ಕೆಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ನೀರಾವರಿ ಸಚಿವರು ಸೇರಿದಂತೆ ಸರ್ಕಾರದ ಮಂತ್ರಿಗಳು ಮಂಡ್ಯ ಜಿಲ್ಲೆಯ ರೈತರಿಗೆ ನೀರು ಹರಿಸದೆ ಬರಡು ಭೂಮಿ ಮಾಡಿ ಸೇಡಿನ ರಾಜಕಾರಣ ಮಾಡಿ, ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಿದ್ದಾರೆ. ಸರ್ಕಾರ ಮೂರು ದಿನಗಳಲ್ಲಿ ನಾಲೆಗಳಿಗೆ ನೀರು ಹರಿಸಬೇಕು, ಇಲ್ಲದಿದ್ದರೆ ರೈತ ಕುಟುಂಬಗಳ ಜೊತೆ ಜನ-ಜಾನುವಾರುಗಳನ್ನು ರಸ್ತೆಗಿಳಿಸಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಸ್ತುತ ಕೆಆರ್‌ಎಸ್ ಅಣೆಕಟ್ಟೆಯಲ್ಲಿ 87 ಅಡಿ ನೀರಿದ್ದು ನಾಲೆಗಳಿಗೆ ನೀರು ಹರಿಸಿ, ಮುಂಗಾರು ಬೆಳೆಗೆ ಬಿತ್ತನೆ ಬೀಜ ಹಾಕಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಭೂಮಿತಾಯಿ ಹೋರಾಟ ಸಮಿತಿ ಅದ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಸರ್ಕಾರವನ್ನು ಒತ್ತಾಯಿಸಿದರು.
ಕೆಆರ್ ಎಸ್ ಒಳಹರಿವು ಎಷ್ಟಿದೆ?
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಳ್ಳುತ್ತಿದ್ದು ಒಳಹರಿವು ನಿಧಾನವಾಗಿ ಹೆಚ್ಚಾಗುತ್ತಿದೆ. ಹಾರಂಗಿ ಜಲಾಶಯದ ಒಳಹರಿವು 378 ಕ್ಯೂಸೆಕ್ಸ್ ಇದ್ದು 200 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. 8.50 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 3.30 ಟಿಎಂಸಿ ಅಡಿ ನೀರು ಸಂಗ್ರಹವಿದೆ.
ಹೇಮಾವತಿ ಜಲಾಶಯಕ್ಕೆ 1233 ಕ್ಯೂಸೆಕ್ಸ್ ನೀರು ಹರಿದುಬರುತ್ತಿದ್ದು, 250 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. 37.10 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 10.98 ಟಿಎಂಸಿ ನೀರು ಸಂಗ್ರಹವಾಗಿದೆ.
ಕೆಆರ್ ಎಸ್ ಜಲಾಶಯದ ಒಳಹರಿವು 1279 ಕ್ಯೂಸೆಕ್ಸ್ ಇದ್ದು 984 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್ ಎಸ್ ಒಟ್ಟು ಸಂಗ್ರಹ ಸಾಮರ್ಥ್ಯ 49.45 ಟಿಎಂಸಿ ಆಗಿದ್ದು, 14.59 ಟಿಎಂಸಿ ನೀರು ಸಂಗ್ರಹವಾಗಿದೆ.
ಕಬಿನಿ ಜಲಾಶಯದ ಒಳಹರಿವು 2008 ಕ್ಯೂಸೆಕ್ಸ್ ಇದ್ದು, 1000 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. 9.10 ಟಿಎಂಸಿ ನೀರು ಸಂಗ್ರಹದಲ್ಲಿದೆ.












Click it and Unblock the Notifications