ಮಂಡ್ಯದಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧೆ ಸಾವು, ಮನೆಯಲ್ಲಿ 8 ಲಕ್ಷಕ್ಕೂ ಅಧಿಕ ಹಣ ಪತ್ತೆ
ಮಂಡ್ಯ, ಆಗಸ್ಟ್ 23: ಜೀವನವಿಡೀ ಹಸಿವಿನಿಂದ ಕಷ್ಟಪಟ್ಟು ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿರುವ ಆಶ್ಚರ್ಯಕರ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದ ನೂರ್ ಎಂಬ ವೃದ್ಧೆಯೇ ಮೃತಪಟ್ಟವರು. ಇವರಿಗೆ ಕುಟುಂಬದ ಯಾವುದೇ ಆಸರೆ ಇರಲಿಲ್ಲ. ವಯಸ್ಸಾಗಿದ್ದರೂ ಹೊಟ್ಟೆಪಾಡಿಗಾಗಿ ನಗರದ ಪ್ರಮುಖ ರಸ್ತೆಗಳು, ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಯಾರ ಸಹಾಯವೂ ಇಲ್ಲದೆ ಏಕಾಂಗಿಯಾಗಿ ಸಣ್ಣ ಕೊಠಡಿಯೊಂದರಲ್ಲಿ ವಾಸವಾಗಿದ್ದ ಇವರು, ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕೊನೆಗೆ ಚಿಕಿತ್ಸೆ ಮತ್ತು ಸೂಕ್ತ ಆರೈಕೆಯಿಲ್ಲದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ವಿಧಿ-ವಿಧಾನಗಳಂತೆ ಅಂತ್ಯಸಂಸ್ಕಾರ
ವೃದ್ಧೆ ನೂರ್ ಮೃತಪಟ್ಟ ಸುದ್ದಿ ತಿಳಿದ ತಕ್ಷಣ ಇಷ್ಟು ದಿನ ಆಕೆಯ ಯೋಗಕ್ಷೇಮ ವಿಚಾರಿಸದ ಸಂಬಂಧಿಕರು ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಅಂತ್ಯಕ್ರಿಯೆಯ ವ್ಯವಸ್ಥೆ ಮಾಡಿದರು. ವಿಧಿ-ವಿಧಾನಗಳಂತೆ ಅಂತ್ಯಸಂಸ್ಕಾರ ಮುಗಿದ ನಂತರ ಸಂಬಂಧಿಕರು ಮತ್ತು ಕೆಲ ಸ್ಥಳೀಯರು ಸೇರಿ ವೃದ್ಧೆ ವಾಸವಿದ್ದ ಮನೆಯನ್ನು ಸ್ವಚ್ಛಗೊಳಿಸಲು ಹಾಗೂ ಪರಿಶೀಲಿಸಲು ಒಳಗೆ ತೆರಳಿದ್ದರು.
ಆಗ ಅಲ್ಲಿದ್ದ ಹಳೆಯ ಚೀಲಗಳು, ಬಟ್ಟೆಯ ಮೂಟೆಗಳು ಮತ್ತು ಡಬ್ಬಿಗಳನ್ನು ತೆರೆದು ನೋಡಿದಾಗ ಎಲ್ಲರಿಗೂ ಶಾಕ್ ಕಾದಿತ್ತು. ವೃದ್ಧೆ ವರ್ಷಗಳಿಂದ ಕೂಡಿಟ್ಟಿದ್ದ ನಾಣ್ಯಗಳ ಚೀಲಗಳು ಹಾಗೂ ಕರೆನ್ಸಿ ನೋಟುಗಳ ಕಂತೆಗಳು ಸಾಲಾಗಿ ಪತ್ತೆಯಾಗಿವೆ. ಬಳಿಕ ಸ್ಥಳೀಯ ಪ್ರಮುಖರು ಹಾಗೂ ಸಂಬಂಧಿಕರು ಸೇರಿ ಹಣವನ್ನು ಎಣಿಸಲು ಪ್ರಾರಂಭಿಸಿದರು.
ವೃದ್ಧೆಯ ಚೀಲದಲ್ಲಿತ್ತು 8 ಲಕ್ಷ ರೂ.ಗೂ ಹೆಚ್ಚು ಹಣ
ನಾಣ್ಯಗಳು ಮತ್ತು ಚಿಲ್ಲರೆ ನೋಟುಗಳನ್ನು ಎಣಿಸಿ ಮುಗಿಸುವಷ್ಟರಲ್ಲಿ ಎಲ್ಲರೂ ದಂಗಾಗಿದ್ದರು. ಭಿಕ್ಷಾಟನೆ ಮಾಡುತ್ತಿದ್ದ ಆ ವೃದ್ಧೆಯ ಬಳಿ ಬರೋಬ್ಬರಿ 8 ಲಕ್ಷ ರೂಪಾಯಿಗೂ ಹೆಚ್ಚು ನಗದು ಹಣ ಸಂಗ್ರಹವಾಗಿರುವುದು ಖಚಿತವಾಯಿತು. ಬಳಿಕ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಮಧ್ಯಸ್ಥಿಕೆ ವಹಿಸಿ, ಪತ್ತೆಯಾದ ಸಂಪೂರ್ಣ ಹಣವನ್ನು ಮೃತ ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಈ ಸುದ್ದಿ ತಿಳಿಯುತ್ತಿದ್ದಂತೆ ಮಂಡ್ಯದ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತವಾಗಿದೆ. 'ವೃದ್ಧೆ ಜೀವಂತವಾಗಿದ್ದಾಗ ಆಕೆಗೆ ಒಂದು ಹೊತ್ತಿನ ಊಟ ನೀಡಲು ಅಥವಾ ಯೋಗಕ್ಷೇಮ ವಿಚಾರಿಸಲು ಬರದ ಸಂಬಂಧಿಕರು, ಆಕೆ ತೀರಿಕೊಂಡ ತಕ್ಷಣ ಹಣ ಹಂಚಿಕೊಳ್ಳಲು ಬಂದಿದ್ದಾರೆ,' ಎಂದು ಕೆಂಡಕಾರಿದ್ದಾರೆ.
'ಭಿಕ್ಷೆ ಬೇಡಿ ಕೂಡಿಟ್ಟಿದ್ದ ಹಣವನ್ನು ಕಣ್ಣು ಮುಚ್ಚಿ ಸ್ವೀಕರಿಸಿದ ಸಂಬಂಧಿಕರ ನಡೆ ಮಾನವೀಯತೆಗೆ ಹಿಡಿದ ಕನ್ನಡಿ,' ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ಘಟನೆಯು ಮಂಡ್ಯ ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸಮಾಜದಲ್ಲಿ ನಶಿಸುತ್ತಿರುವ ಮಾನವೀಯ ಮೌಲ್ಯಗಳಿಗೆ ಕನ್ನಡಿ ಹಿಡಿದಂತಿದೆ. ಒಟ್ಟಿನಲ್ಲಿ ಕಷ್ಟದ ಕಾಲದಲ್ಲಿ ಆಗದ ಸಂಬಂಧಿಕರು ಕೊನೆಯಲ್ಲಿ ಹಣಕ್ಕಾಗಿ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.


Click it and Unblock the Notifications
