ಬೆಟ್ಟಿಂಗ್‌ಗೆ ದಾಸನಾಗಿ ಪತ್ನಿ ಮಕ್ಕಳನ್ನು ಬೀದಿಪಾಲು ಮಾಡಿದ ಭೂಪ
ಮದ್ದೂರು, ನವೆಂಬರ್ 14: ಕ್ರಿಕೆಟ್ ಬೆಟ್ಟಿಂಗ್ ದಾಸನಾಗಿದ್ದ ಪತಿಯೋರ್ವ ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು ಹಾಗೂ ಮಾವನನ್ನು ಅನಾಥರನ್ನಾಗಿಸಿ ಊರು ಬಿಟ್ಟು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮನೆ ಯಜಮಾನನ ಬೆಟ್ಟಿಂಗ್ ಚಟದಿಂದ ಬೀದಿಗೆ ಬಂದ ಕುಟುಂಬ ಮಂಡ್ಯದ ಹೆಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೆ ಚಳಿ ಹಾಗೂ ಮಳೆಯ ನಡುವೆ ಜೀವನ ನಡೆಸಿ, ಈಗ ತಾತ್ಕಾಲಿಕ ನೆಲೆ ಸೇರಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಆರ್.ಎಂ.ಸಿ. ಯಾರ್ಡ್ ಪಕ್ಕದಲ್ಲಿ ವಾಸ ಮಾಡುತ್ತಿದ್ದ ಶ್ರೀಕಾಂತ್‌ಕುಮಾರ್ ಆರು ವರ್ಷಗಳ ಹಿಂದೆ ಅನ್ನಪೂರ್ಣ ಎಂಬಾಕೆಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಶ್ರೀಕಾಂತ್‌ಕುಮಾರ್ ತನ್ನ ವೃದ್ಧ ಮಾವ ಸುರೇಶ್ ಅವರೊಂದಿಗೆ ವಾಸವಾಗಿದ್ದರು.

ಶ್ರೀಕಾಂತ್‌ಕುಮಾರ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಬಿದ್ದು ದುಡಿದ ಹಣ ಕಳೆದುಕೊಂಡು, ಮೈತುಂಬಾ ಸಾಲ ಮಾಡಿಕೊಂಡಿದ್ದ. ಬಳಿಕ ಸಾಲಗಾರರ ಕಾಟ ತಡೆಯಲಾರದೆ ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿಯಾಗಿದ್ದ. ಈ ವೇಳೆ ಅನ್ನಪೂರ್ಣ ಮೂರು ತಿಂಗಳ ಗರ್ಭಿಣಿಯಾಗಿದ್ದರು.
ಹೊಟ್ಟೆ ಪಾಡಿಗಾಗಿ ಕುಣಿಗಲ್‌ನಿಂದ ಮದ್ದೂರು ತಾಲೂಕು ಹೆಮ್ಮನಹಳ್ಳಿಗೆ ವಲಸೆ ಬಂದ ಅನ್ನಪೂರ್ಣ, ಪಂಚಾಯಿತಿ ಕಚೇರಿ ಆವರಣದಲ್ಲಿ ವಾಸ ಮಾಡಿಕೊಂಡು ಹಳ್ಳಿಗಳಲ್ಲಿ ಬಟ್ಟೆ ವ್ಯಾಪಾರ, ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಈಕೆಯ ಕುಟುಂಬಕ್ಕೆ ಗ್ರಾಮಸ್ಥರು ನೆರವಾಗಿದ್ದು, ಊಟ-ತಿಂಡಿ ನೀಡುತ್ತಿದ್ದರು. ಈ ಮಧ್ಯೆ ಅನ್ನಪೂರ್ಣಗೆ ಕಳೆದ 20 ದಿನಗಳ ಹಿಂದೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಅನ್ನಪೂರ್ಣ ಹಸುಗೂಸು ಹಾಗೂ ತನ್ನ ಕುಟುಂಬದೊಂದಿಗೆ ಮತ್ತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಶ್ರಯ ಪಡೆದಿದ್ದರು. ಸದ್ಯ ಮಾಧ್ಯಮಗಳ ವರದಿಯಿಂದ ಅನ್ನಪೂರ್ಣಳ ಕರುಣಾಜನಕ ಸ್ಥಿತಿಯ ಬಗ್ಗೆ ಮಾಹಿತಿ ಅರಿತ ತಾಲೂಕು ಆರೋಗ್ಯಾಧಿಕಾರಿ ಡಾ. ರವೀಂದ್ರ ಬಿ.ಗೌಡ, ಕದಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಭಾರ್ಗವಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್ ಹಾಗೂ ಗ್ರಾ.ಪಂ. ಪಿಡಿಓ ಲೀಲಾವತಿ ಅನ್ನಪೂರ್ಣ ಮತ್ತು ಆಕೆಯ 11 ದಿನಗಳ ಮಗು ಸೇರಿದಂತೆ ಕುಟುಂಬವನ್ನು ಮಂಡ್ಯ ನಗರದ ಅಕ್ಷಯ್ ನರೇಶ್ ಸ್ವಾಧಾರ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ. ಇನ್ನು ಅನ್ನಪೂರ್ಣ ತಂದೆ ಸುರೇಶ್ ಅವರನ್ನು ಅನಾಥಾಶ್ರಮಕ್ಕೆ ಸೇರಿಸಲಾಗಿದೆ.












Click it and Unblock the Notifications