ನವೆಂಬರ್‌ 25ರಂದು ಕೆಆರ್‌ಎಸ್‌ ಹಿನ್ನೀರಿನ ಬಾಹುಬಲಿಗೆ ಮಹಾಮಸ್ತಕಾಭಿಷೇಕ

ಮಂಡ್ಯ, ನವೆಂಬರ್‌ 24: ಕೆಆರ್‌ಎಸ್‌ ಹಿನ್ನೀರು ಪ್ರದೇಶದ ಬಸದಿ ಹೊಸಕೋಟೆ ಗ್ರಾಮದಲ್ಲಿ ಬಾಹುಬಲಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಶ್ರವಣ ಬೆಳಗೊಳದ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಅಮರಕೀರ್ತಿ ಯುಗಳ ಮುನಿಗಳ ದಿವ್ಯಸಾನಿಧ್ಯದಲ್ಲಿ ಪುನರ್ ಪ್ರತಿಷ್ಠಾಪನಾ ಕಾರ್ಯ ಭರದಿಂದ ಸಾಗುತ್ತಿದ್ದು, ನವೆಂಬರ್‌ 25ರಂದು ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ.

ಸುಮಾರು 17 ಅಡಿ ಎತ್ತರದ ವೈರಾಗ್ಯಮೂರ್ತಿ ಭಗವಾನ್ ಬಾಹುಬಲಿ ಮೂರ್ತಿಯ ಪುನರ್ ಪ್ರತಿಷ್ಠಾಪನಾ ಕಾರ್ಯವನ್ನು ಭಗವಾನ್ ಬಹುಬಲಿ ದಿಗಂಬರ ಜೈನ ಟ್ರಸ್ಟ್ ಹಮ್ಮಿಕೊಂಡಿದೆ. ಭಗವಾನ್ ಬಾಹುಬಲಿಯ ಏಕಶಿಲಾಮೂರ್ತಿ ಹಾಗೂ ವಿವಿಧ ತೀರ್ಥಂಕರರ ಮೂರ್ತಿಗಳು ಹಾಗೂ ಮಂಟಪಗಳನ್ನು ಹೊಯ್ಸಳ ದೊರೆ ಬಿಟ್ಟಿದೇವ(ವಿಷ್ಣುವರ್ಧನ)ನ ಆಪ್ತ ದಂಡನಾಯಕನಾಗಿದ್ದ ಪುಣಿಸಿಮಯ್ಯನು ಕ್ರಿ.ಶ.1147ರಲ್ಲಿ ನಿರ್ಮಿಸಿದ್ದನು ಎಂದು ಶಿಲಾ ಶಾಸನದಿಂದ ತಿಳಿದುಬಂದಿದೆ.

mahamastakabhisheka-for-bahubali

ಶ್ರೀಕ್ಷೇತ್ರವನ್ನು ತಲತಲಾಂತರದಿಂದ ಜೈಹನ ಶ್ರಾವಕ, ಶ್ರಾವಕಿಯರು ಹಾಗೂ ಟ್ರಸ್ಟ್ ಸದಸ್ಯರು ಸಂರಕ್ಷಿಸಿಕೊಂಡು ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ತೆರೆಯ ಮರೆಯಲ್ಲಿದ್ದ ಬಾಹುಬಲಿಯ ಶಿಲಾಮೂರ್ತಿಯನ್ನು ಕೃಷ್ಣರಾಜಸಾಗರದ ಹಿನ್ನೀರಿಗೆ ಹೊಂದಿಕೊಂಡಂತೆ 15 ಅಡಿ ಎತ್ತರದ ವಿಶಾಲವಾದ ಜಗುಲಿಯ ಮೇಲೆ ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆ ಮಾಡಲಾಗಿದ್ದು ಭಿನ್ನಗೊಂಡಿದ್ದು ಹಾನಿಗೊಳಗಾಗಿದ್ದ ತೀರ್ಥಂಕರರ ಶಿಲಾಮೂರ್ತಿಗಳನ್ನು ನೂತನವಾಗಿ ಪುನರ್ ನಿರ್ಮಿಸಿ ವಿಶೇಷವಾದ ಪೂಜೆ ಪುರಸ್ಕಾರಗಳನ್ನು ನಡೆಸಿ ಅಭಿಷೇಕ ಮಾಡಿ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಡಾ.ಡಿ.ವೀರೇಂದ್ರಹೆಗಡೆ ಮಾರ್ಗದರ್ಶನದಲ್ಲಿ ಅಭಿವೃದ್ಧಿ

ಜೈನಕಾಶಿಯೆಂದೇ ಜಗದ್ವಿಖ್ಯಾತವಾಗಿರುವ ಶ್ರವಣಬೆಳಗೊಳ ಕ್ಷೇತ್ರಕ್ಕೆ ಕೇವಲ 45ಕಿ.ಮೀ ದೂರದಲ್ಲಿರುವ ಕೆ.ಆರ್.ಪೇಟೆ ತಾಲೂಕಿನ ಬಸದಿ ಹೊಸಕೋಟೆ ಜೈನಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರಹೆಗಡೆ ಅವರ ಮಾರ್ಗದರ್ಶನದಲ್ಲಿ ಬಸದಿ ಹೊಸಕೋಟೆ ಜೈನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.

ಇದರ ನಡುವೆ ಭಗವಾನ್ ಬಾಹುಬಲಿಸ್ವಾಮಿಯ ಪುನರ್ ಪ್ರತಿಷ್ಠಾಪನೆ ಹಾಗೂ ಸಿದ್ಧಚಕ್ರದ ಆರಾಧನಾ ಮಹೋತ್ಸವವು ಅಲ್ಲದೆ ನ,25ರಂದು ಮಹಾಮಸ್ತಕಾಭಿಷೇಕವನ್ನು ಶ್ರದ್ಧಾಭಕ್ತಿಯಿಂದ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ದೇಶದಲ್ಲಿಯೇ ಅಪರೂಪದ ಬಾಹುಬಲಿ

ಇನ್ನು ಬಾಹುಬಲಿ ಶಿಲಾಮೂರ್ತಿಯ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ದಿಗಂಬರ ಆಮೋಘಕೀರ್ತಿ ಯುಗಳ ಮುನಿಗಳು ಮಾತನಾಡಿ ಬಸದಿ ಹೊಸಕೋಟೆಯಲ್ಲಿ ವಿಶಾಲವಾದ ಜಲಸಾಗರದ ಪಕ್ಕದ ಪ್ರಕೃತಿಯ ಮಡಿಲಿನಲ್ಲಿ ಧ್ಯಾನಾಸಕ್ತನಾಗಿ ನಿಂತಿರುವ ಬಾಹುಬಲಿ ಮೂರ್ತಿಯು ದೇಶದಲ್ಲಿಯೇ ಅಪರೂಪದ್ದಾಗಿದೆ.

mahamastakabhisheka-for-bahubali

ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸವನ್ನು ಹೊಂದಿರುವ ಬಸದಿ ಹೊಸಕೋಟೆಯ ಗೊಮ್ಮಟಕ್ಷೇತ್ರವು ಅಭಿವೃದ್ಧಿ ಕೆಲಸ ಕಾರ್ಯಗಳಿಂದ ವಂಚಿತವಾಗಿದ್ದು ಕಳೆದ ಒಂದೂವರೆ ವರ್ಷಗಳ ಹಿಂದೆ ನಾವು ಬಸ್ತಿಹೊಸಕೋಟೆಗೆ ಆಕಸ್ಮಿಕವಾಗಿ ಬಂದು ಕ್ಷೇತ್ರವನ್ನು ದರ್ಶನ ಮಾಡಿದಾಗ ಪಾಳುಬಿದ್ಧ ಹಂಪೆಯಂತಿರುವ ಭಗ್ನವಾದ ತೀರ್ಥಂಕರರ ಶಿಲಾಮೂರ್ತಿಗಳು, ಮುರುಕಲು ಮಂಟಪಗಳು ನಮ್ಮ ಕಣ್ಣಿಗೆ ಬಿದ್ದವು.

ಸಮಗ್ರ ಅಭಿವೃದ್ಧಿಗೆ ಸಹಕಾರ ಅಗತ್ಯ

ಜೈನಧರ್ಮ ಬಂಧುಗಳು ಹಾಗೂ ಸಾರ್ವಜನಿಕರ ದೃಷ್ಠಿಗೆ ಬೀಳದೇ ಕಗ್ಗತ್ತಲಿನಲ್ಲಿದ್ದ ಈ ಕ್ಷೇತ್ರಕ್ಕೆ ಕಾಯಕಲ್ಪ ನೀಡಲೇಬೇಕೆಂದು ಸಂಕಲ್ಪ ಮಾಡಿದೆವು. ನಂತರ ಸದ್ಧರ್ಮ ಬಂಧುಗಳನ್ನು ಒಗ್ಗೂಡಿಸಿ ಸಾವಿರಾರು ವರ್ಷಗಳ ನಂತರ ಕ್ಷೇತ್ರವನ್ನು ಮತ್ತೆ ಎಲ್ಲರ ಸಹಕಾರದಿಂದ ಪವಿತ್ರ ತೀರ್ಥಕ್ಷೇತ್ರವನ್ನಾಗಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಜೈನಧರ್ಮದ ಬಂಧುಗಳು ಸೇರಿದಂತೆ ಸಮಾಜದ ಎಲ್ಲಾ ಜನರೂ ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣವಾದ ಸಹಕಾರ ಹಸ್ತವನ್ನು ಚಾಚಬೇಕು ಎಂದು ಮನವಿ ಮಾಡಿದರು.

ಮೂಡಬಿದರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಮ ಸ್ವಾಮೀಜಿ ಮಾತನಾಡಿ ತೆರೆಯ ಮರೆಯಲ್ಲಿದ್ದ ಬಾಹುಬಲಿಯ ಶಿಲಾಮೂರ್ತಿಯನ್ನು ಕೃಷ್ಣರಾಜಸಾಗರದ ಹಿನ್ನೀರಿಗೆ ಹೊಂದಿಕೊಂಡಂತೆ 10ಅಡಿ ಎತ್ತರದ ವಿಶಾಲವಾದ ಜಗುಲಿಯ ಮೇಲೆ ಪೂರ್ವಾಭಿಮುಖವಾಗಿ ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಭಿನ್ನಗೊಂಡು ಹಾನಿಗೊಳಗಾಗಿದ್ದ ತೀರ್ಥಂಕರರ ಶಿಲಾಮೂರ್ತಿಗಳನ್ನು ನೂತನವಾಗಿ ಪುನರ್‌ ನಿರ್ಮಿಸಿ ವಿಶೇಷವಾದ ಪೂಜೆ ಪುರಸ್ಕಾರಗಳನ್ನು ನಡೆಸಿ ಅಭಿಷೇಕ ಮಾಡಿ ಪುನರ್ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಭಕ್ತರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಈ ಕ್ಷೇತ್ರವು ಪವಿತ್ರ ತೀರ್ಥಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತದೆ. ಕೆಆರ್‌ಎಸ್ ಮುಳುಗಡೆ ಪ್ರದೇಶದಲ್ಲಿರುವ ಈ ಪವಿತ್ರ ಕ್ಷೇತ್ರವನ್ನು ಜೋಪಾನವಾಗಿ ಕಾಪಾಡಿಕೊಂಡು ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+