ನಾಗಮಂಗಲದಲ್ಲಿ ಎರಡು ಡಯಾಗ್ನೋಸ್ಟಿಕ್ ಸೆಂಟರ್‌ಗೆ ಬೀಗ
ಮಂಡ್ಯ, ಡಿಸೆಂಬರ್ 20: ಸ್ಕ್ಯಾನಿಂಗ್ ಯಂತ್ರದಲ್ಲಿನ ಮಾಹಿತಿಗಳನ್ನು ಅಳಿಸಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಲಕ್ಷ್ಮಿ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್‌ನ ಸ್ಕ್ಯಾನಿಂಗ್ ಕೊಠಡಿಗಳನ್ನು ಪಾಂಡವಪುರ ಉಪವಿಭಾಗಾಧಿಕಾರಿ ಎಲ್.ನಂದೀಶ್ ನೇತೃತ್ವದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಪಟ್ಟಣದ ಲಕ್ಷ್ಮಿ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಮಂಗಳವಾರ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಸ್ಕ್ಯಾನಿಂಗ್ ದಾಖಲಾತಿ ಪುಸ್ತಕ ಮತ್ತು ಸ್ಕ್ಯಾನಿಂಗ್ ಯಂತ್ರದಲ್ಲಿರುವ ಮಾಹಿತಿಗಳು ಹೊಂದಾಣಿಕೆಯಾಗದಿರುವುದು ಕಂಡುಬಂದಿದೆ.

ಅಲ್ಲದೆ ಲಕ್ಷ್ಮಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ 2 ವರ್ಷಗಳ ಸ್ಕ್ಯಾನಿಂಗ್ ಮಾಹಿತಿಯನ್ನು ಅಳಿಸಿರುವುದು ಮತ್ತು ಕಾವೇರಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ 3ತಿಂಗಳ ಸ್ಕ್ಯಾನಿಂಗ್ ಮಾಹಿತಿಯನ್ನು ಅಳಿಸಿರುವುದು ಬೆಳಕಿಗೆ ಬಂದಿದೆ.
ಇದರಿಂದ ಅನುಮಾನಗೊಂಡು ಸೂಕ್ತ ದಾಖಲಾತಿ ಹಾಜರುಪಡಿಸುವಂತೆ ಎರಡೂ ಡಯಾಗ್ನೋಸ್ಟಿಕ್ ಸೆಂಟರ್‌ಗಳ ವೈದ್ಯರು ಮತ್ತು ಸಿಬ್ಬಂದಿಗಳಿಗೆ ತಿಳಿಸಿದರಾದರೂ ಅಗತ್ಯ ದಾಖಲಾತಿ ಒದಗಿಸಲಿಲ್ಲ. ಕಾನೂನು ಉಲ್ಲಂಘಸಿರುವ ಆರೋಪದಡಿಯಲ್ಲಿ ಎರಡೂ ಸ್ಕ್ಯಾನಿಂಗ್ ಕೊಠಡಿಗಳನ್ನು ಸೀಲ್ ಮಾಡಿ ನೋಟಿಸ್ ಜಾರಿ ಮಾಡಲಾಗಿದೆ. ನೋಟೀಸ್‌ಗೆ ಅವರು ನೀಡುವ ಉತ್ತರದ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ವಹಿಸಲಾಗುವುದೆಂದು ಉಪವಿಭಾಗಾಧಿಕಾರಿ ಎಲ್. ನಂದೀಶ್ ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಹಿರಿಯ ಆರೋಗ್ಯ ಪರಿವೀಕ್ಷಕರಾದ ಸಿದ್ದಲಿಂಗಪ್ಪ ಮತ್ತು ಚಿಕ್ಕಸ್ವಾಮಿ ಇದ್ದರು.












Click it and Unblock the Notifications