KRS Dam: ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ, 2025ರ ಮುಂಗಾರು ವಿಳಂಬವಾದರೂ ಚಿಂತೆ ಬಿಡಿ
ಮಂಡ್ಯ, ನವೆಂಬರ್ 11: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯ ಮಂಡ್ಯ ಜನರ ಜೀವನಾಡಿ ಮಾತ್ರವಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರು, ಕಾವೇರಿ ನದಿ ನೀರು ಹಂಚಿಕೆ ತೀರ್ಪಿನ ಅನ್ವಯ ತಮಿಳುನಾಡಿಗೆ ನೀರು ಹರಿಸಲು ಸಹ ಪ್ರಮುಖವಾದ ಡ್ಯಾಂ ಆಗಿದೆ. ಕುಡಿಯುವ ನೀರು, ಕೃಷಿಗೆ ನೀರು ಒದಗಿಸಲು ಪ್ರಮುಖ ಅಣೆಕಟ್ಟು. ಈ ಬಾರಿ ಡ್ಯಾಂ ಭರ್ತಿಯಾಗಿದ್ದು, ಕಾವೇರಿ ವಿವಾದದ ಕಾವು ಏರುವ ಸಾಧ್ಯತೆ ಇಲ್ಲ. ಇದರ ನಡುವೆಯೇ ಸಮಾಧಾನ ನೀಡುವ ಸುದ್ದಿಯೊಂದು ಈಗ ಸಿಕ್ಕಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ಮಾಹಿತಿಯಂತೆ ಸೆಪ್ಟೆಂಬರ್ 11 ರಿಂದ ನವೆಂಬರ್ 10ರ ತನಕ ಕೆಆರ್‌ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಒಂದೇ ರೀತಿಯಾಗಿದೆ. ಡ್ಯಾಂ ಗರಿಷ್ಟ ಮಟ್ಟ 124.80 ಅಡಿಗಳು. 60 ದಿನಗಳ ಕಾಲ ನೀರಿನ ಮಟ್ಟ ಕುಸಿಯದಿರುವುದು ರೈತರಿಗೆ ಸಂತಸ ತಂದಿದೆ.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಪ್ರಕಾರ ಭರ್ತಿಯಾಗಿದ್ದ ಕೆಆರ್‌ಎಸ್ ಡ್ಯಾಂಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 29ರಂದು ಬಾಗಿನ ಅರ್ಪಣೆ ಮಾಡಿದ್ದರು. ಬಳಿಕವೂ ಕಾವೇರಿ ನದಿ ಪಾತ್ರದಲ್ಲಿ ಮಳೆ ಮುಂದುವರೆದಿದ್ದು, ಡ್ಯಾಂಗೆ ನಿರಂತರವಾಗಿ ಒಳಹರಿವು ಇರುವ ಕಾರಣ ಡ್ಯಾಂ ನೀರಿನ ಮಟ್ಟದಲ್ಲಿ ಇಳಿಕೆಯಾಗಿಲ್ಲ.
ಮುಂಗಾರು ವಿಳಂಬವಾದರೂ ಚಿಂತೆ ಇಲ್ಲ: "ನಾವು ಶೇ 100ರಷ್ಟು ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಪ್ರವಾಹದ ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ 123.50 ಅಡಿಗಳಿಗೆ ನೀರಿನ ಮಟ್ಟವನ್ನು ಕಾಪಾಡುತ್ತೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಈ ವರ್ಷ 209 ಟಿಎಂಟಿಸಿ ಅಡಿ ನೀರು ಕೆಆರ್‌ಎಸ್ ಡ್ಯಾಂಗೆ ಹರಿದು ಬಂದಿದೆ. 170 ಟಿಎಂಸಿ ಅಡಿ ನೀರನ್ನು ಹೊರಗೆ ಹರಿಸಲಾಗಿದೆ. ಡ್ಯಾಂನಲ್ಲಿ ಒಟ್ಟು 49.425 ಟಿಎಂಸಿ ಅಡಿ ನೀರನ್ನು ಸಂಗ್ರಹ ಮಾಡಬಹುದಾಗಿದೆ. ಸದ್ಯದ ಮಾಹಿತಿಯಂತೆ ಒಳಹರಿವು 5,944 ಕ್ಯುಸೆಕ್ ಮತ್ತು ಹೊರ ಹರಿವು 5,733 ಕ್ಯೂಸೆಕ್ ಆಗಿದೆ.
ಕೆಆರ್‌ಎಸ್ ಡ್ಯಾಂನ ಈಗಿರುವ ನೀರಿನ ಮಟ್ಟದ ಅನ್ವಯ ಈ ಬಾರಿ ಬೇಸಿಗೆಯಲ್ಲಿ ಮಂಡ್ಯ, ಬೆಂಗಳೂರು, ಮೈಸೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗುವುದಿಲ್ಲ. ಅಲ್ಲದೇ 2025ರ ಮುಂಗಾರು ವಿಳಂಬವಾದರೂ ಸಹ ಜನರು ಆತಂಕ ಪಡಬೇಕಿಲ್ಲ.
2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿರಲಿಲ್ಲ. ರೈತರ ಬೆಳೆಗಳಿಗೆ ನೀರು ಹರಿಸಿರಲಿಲ್ಲ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ನೀರನ್ನು ಕಾಯ್ದಿರಿಸಲಾಗಿತ್ತು. ತಮಿಳುನಾಡಿಗೆ ಡ್ಯಾಂ ಮೂಲಕ ನೀರು ಹರಿಸಲಾಗಿತ್ತು. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಉಂಟಾಗುವ ಆತಂಕ ಎದುರಾಗಿತ್ತು.
ಆದರೆ ಜೂನ್‌ನಲ್ಲಿ ಆರಂಭವಾದ ಮುಂಗಾರು ಮಳೆ ಜುಲೈ, ಆಗಸ್ಟ್, ಸೆಪ್ಟೆಂಬರ್‌ನಲ್ಲಿಯೂ ಅಬ್ಬರಿಸಿತ್ತು. ಪರಿಣಾಮ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಡ್ಯಾಂ ಭರ್ತಿಯಾಗಿತ್ತು. ಕೆಲವು ದಿನ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ಹೊರಗೆ ಹರಿಸುವಷ್ಟು ಡ್ಯಾಂಗೆ ಒಳಹರಿವು ದಾಖಲಾಗಿತ್ತು.
ಕೆಎಆರ್‌ಎಸ್ ಡ್ಯಾಂ ಭರ್ತಿಯಾಗಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಈ ಬಾರಿ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುವುದಿಲ್ಲ. ಮಂಡ್ಯ, ಮೈಸೂರು, ಬೆಂಗಳೂರು ನಗರಕ್ಕೂ ಕುಡಿಯುವ ನೀರಿನ ಸಮಸ್ಯೆ ಇಲ್ಲ.












Click it and Unblock the Notifications