ತೆರಿಗೆ ಸಂಗ್ರಹದಲ್ಲಿ ರಾಜ್ಯವೇ ಮೊದಲು; ವಾಪಸ್ಸು ಪಡೆಯುವಲ್ಲಿ ಕೊನೆಯ ಸ್ಥಾನ: ಕೃಷ್ಣ ಬೈರೇಗೌಡ
ಕೇಂದ್ರಕ್ಕೆ ತೆರಿಗೆ ಹಣ ಸಂಗ್ರಹಿಸಿಕೊಡುವಲ್ಲಿ ದೇಶದಲ್ಲೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ತೆರಿಗೆ ಪಾಲಿನ ಹಣವನ್ನು ವಾಪಸ್ ಪಡೆಯುವಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೂ ಕರ್ನಾಟಕದ ಮೇಲೆ ಕೇಂದ್ರ ಕೆಂಗಣ್ಣು ಬೀರುತ್ತಲೇ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು.
ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಜಾಗೃತ ಕರ್ನಾಟಕ ಸಂಘಟನೆಗಳ ವತಿಯಿಂದ ಮಂಡ್ಯ ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕಕ್ಕಾದ ತೆರಿಗೆ ಪಾಲಿನ ವಂಚನೆ-ರೈತರ ಗಾಯದ ಮೇಲೆ ಬರೆ ವಿಚಾರಗೋಷ್ಠಿಯಲ್ಲಿ ಪ್ರಧಾನ ಭಾಷಣ ಮಾಡಿದರು.

ಜಿಎಸ್‌ಟಿ ಪರಿಹಾರ ನಿಲ್ಲಿಸಿದ್ದರಿಂದ ವಾರ್ಷಿಕ 31,066 ಕೋಟಿ ರು., 15ನೇ ಹಣಕಾಸು ಆಯೋಗ ಮಾಡಿದ ತೆರಿಗೆ ಪಾಲಿನ ಕಡಿತದಿಂದ ರಾಜ್ಯಕ್ಕೆ 12,967 ಕೋಟಿ, ಸೆಸ್ ಮತ್ತು ಸರ್‌ಚಾರ್ಜ್‌ಗಳಿಂದ ಆಗುತ್ತಿರುವ ನಷ್ಟ 8,060 ಕೋಟಿ ರು. ಆಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ 1.85 ಲಕ್ಷ ಕೋಟಿ ರು. ವಂಚನೆಯಾಗಿದೆ ಎಂದು ವಿವರಿಸಿದರು.
ಕೇಂದ್ರ ಹಣಕಾಸು ಆಯೋಗ 2020-21ನೇ ಸಾಲಿನಲ್ಲಿ ರಾಜ್ಯಗಳಿಗೆ ನೀಡುವ ತೆರಿಗೆ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗಬೇಕೇ ವಿನಃ ಕಡಿಮೆಯಾಗಬಾರದು. ಈ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಆದ ಕಾರಣ ಆ ವರ್ಷ ₹5495 ಕೋಟಿ ಹಣ ರಾಜ್ಯಕ್ಕೆ ನೀಡುವಂತೆ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಆದರೆ, ಕೇಂದ್ರಸರ್ಕಾರ ಹಣಕಾಸು ಆಯೋಗ ಮಾಡಿರುವ ಶಿಫಾರಸನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಆಯೋಗ ನೀಡಿರುವ ವಿಶೇಷ ಅನುದಾನದ ಶಿಫಾರಸನ್ನು ವಾಪಸ್ ಪಡೆಯುವಂತೆ ಸಂಸತ್‌ನಲ್ಲಿ ಮಂಡಿಸಿರುವ ವರದಿಯಲ್ಲಿ ತಿಳಿಸಿದ್ದಾರೆ ಎಂದರು.
ಸುಳ್ಳು ಹೇಳುತ್ತಿರುವ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗದ ಶಿಫಾರಸನ್ನು ಯಥಾವತ್ತಾಗಿ ಜಾರಿ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಯಾಕಿಷ್ಟು ದ್ವೇಷ, ರಾಜ್ಯದ ಜನರಿಗೆ ಅನ್ಯಾಯ ಏಕೆ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಇದು ವಿರೋಧವಲ್ಲವೇ. ರಾಜ್ಯಕ್ಕೆ ಬರಬೇಕಾದ ಹಣವನ್ನು ಕೊಡುವುದಿಲ್ಲ ಎಂದರೆ ದೊಡ್ಡ ವಂಚನೆಯಲ್ಲವೇ. ಇದರಿಂದ ₹1,85,468 ಕೋಟಿ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಹಣ ನೀಡುತ್ತಿದೆಯಾದರೂ ಈ ಯೋಜನೆಗಳಿಗೆ ನೀಡುವ ಹಣದಲ್ಲಿ ಕೇಂದ್ರ ಸರ್ಕಾರಕ್ಕಿಂತ ರಾಜ್ಯಸರ್ಕಾರದ ಪಾಲೇ ದೊಡ್ಡದಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ ಕೇಂದ್ರ ₹ 8870 ಕೋಟಿ ನೀಡಿದರೆ ರಾಜ್ಯಸರ್ಕಾರ ₹ 9734 ಕೋಟಿ, ಪಿಎಂ ಆವಾಸ್ (ರೂರಲ್) ಯೋಜನೆಗೆ ಕೇಂದ್ರದ ಪಾಲು ₹528 ಕೋಟಿ ಇದ್ದರೆ ರಾಜ್ಯದ ಪಾಲು ₹7484 ಕೋಟಿ, ಪಿಎಂ ಆವಾಸ್ (ಅರ್ಬನ್) ಯೋಜನೆಗೆ ಕೇಂದ್ರ ₹2536 ಕೋಟಿ ನೀಡಿದರೆ ರಾಜ್ಯಸರ್ಕಾರ ₹4272 ಕೋಟಿ ನೀಡುತ್ತಿದೆ. ಜಲಜೀವನ್ ಮಿಷನ್‌ಗೆ ಕೇಂದ್ರ ₹11,189 ಕೋಟಿ ಕೊಟ್ಟರೆ ರಾಜ್ಯಸರ್ಕಾರ ₹15,464 ಕೋಟಿ ನೀಡಿದೆ. ಪಿಎಂ ಜನ ಆರೋಗ್ಯ ಯೋಜನೆಗೆ ಕೇಂದ್ರ ₹ 278 ಕೋಟಿ ಕೊಟ್ಟರೆ ರಾಜ್ಯಸರ್ಕಾರ ₹984 ಕೋಟಿ ನೀಡುತ್ತಿದೆ. ಇಲ್ಲಿ ಹೆಸರಿಗೆ ಮಾತ್ರ ಕೇಂದ್ರದ ಯೋಜನೆ. ಆದರೆ, ಆ ಯೋಜನೆಗಳಿಗೆ ಹೆಚ್ಚಿನ ಹಣಕಾಸು ಒದಗಿಸುತ್ತಿರುವುದು ರಾಜ್ಯಸರ್ಕಾರ ಎಂದು ಅಂಕಿ-ಅಂಶಗಳ ಸಮೇತ ತೆರೆದಿಟ್ಟರು.
ಕರ್ನಾಟಕದ ಬಳಿ ಹಣವಿಲ್ಲದಿರುವುದರಿಂದ ಕೇಂದ್ರಸರ್ಕಾರವನ್ನು ದೂರುತ್ತಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಒಂದು ರಾಜ್ಯ ₹100 ತೆರಿಗೆ ಪಾವತಿಸಿದರೆ ಕೇಂದ್ರ ವಾಪಸ್ ಎಷ್ಟು ಪಡೆಯುತ್ತಿವೆ ಎನ್ನುವುದನ್ನು ಅವಲೋಕನ ಮಾಡಿದರೆ, ರಾಜಸ್ತಾನ ₹154, ಮಧ್ಯಪ್ರದೇಶ ₹ 279, ಹರಿಯಾಣ ₹180, ಉತ್ತರ ಪ್ರದೇಶ ₹333, ಬಿಹಾರ ₹922, ಪಡೆದರೆ ಕರ್ನಾಟಕ ಮಾತ್ರ ₹13.9 ಮಾತ್ರ ಪಡೆಯುತ್ತಿದೆ. ಈ ಹಣದಲ್ಲಿ ಕನಿಷ್ಠ ₹30 ಕೊಡಿ ಎಂದರೂ ಕೊಡುತ್ತಿಲ್ಲ ಎಂದರು.
ಕರ್ನಾಟಕ ಚಿನ್ನದ ಮೊಟ್ಟೆ ಇಡುವ ಕೋಳಿ. ಕೇಂದ್ರಕ್ಕೂ ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತಾ ಸ್ವಂತ ಬಲದ ಮೇಲೆ ಸರ್ಕಾರ ನಡೆಸುತ್ತಿದ್ದೇವೆ. ನಾವೇ ನಿಜವಾದ ದೇಶಪ್ರೇಮಿಗಳು. ನಾವು ದೇಶ ಒಡೆಯುವವರಲ್ಲ, ದೇಶ ಕಟ್ಟುವವರು. ನಮ್ಮ ತೆರಿಗೆ ಹಕ್ಕನ್ನು ಪ್ರತಿಪಾದಿಸಿದರೆ ಅದನ್ನು ದಮನ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇಶದ್ರೋಹಿಗಳೆಂಬ ಪಟ್ಟ ಕಟ್ಟಲು ಹೊರಟಿದೆ. ಅನ್ಯಾಯವಾಗಿದ್ದರೆ ಕುಳಿತು ಮಾತುಕತೆಯ ಮೂಲಕ ಅದನ್ನು ಸರಿಪಡಿಸುವ ಸೌಜನ್ಯ ತೋರುತ್ತಿಲ್ಲ. ಒಕ್ಕೂಟ ವ್ಯವಸ್ಥೆಗೆ ಬಿಜೆಪಿ ತೀವ್ರ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.












Click it and Unblock the Notifications