ಮಂಡ್ಯ : 5ರೂ.ಗೆ ಚಿಕಿತ್ಸೆ ನೀಡುವ ಶಂಕರೇಗೌಡರು ಚುನಾವಣೆಗೆ ಸ್ಪರ್ಧೆ
ಮಂಡ್ಯ, ಏಪ್ರಿಲ್ 22 : ಮಂಡ್ಯದ ಪ್ರಸಿದ್ಧ ವೈದ್ಯ ಡಾ.ಶಂಕರೇಗೌಡ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸೋಮವಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಮಂಡ್ಯ ಜಿಲ್ಲೆಯ ಶಿವನಹಳ್ಳಿ ತಾಲೂಕಿನ ಡಾ.ಶಂಕರೇಗೌಡ ಅವರು ಕೇವಲ 5 ರೂ. ಪಡೆದು ಜನರಿಗೆ ಚಿಕಿತ್ಸೆ ನೀಡುತ್ತಾರೆ. ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಂಕರೇಗೌಡ ಅವರು ಪ್ರಸಿದ್ಧಿ ಪಡೆದಿದ್ದಾರೆ.
ಶಂಕರೇಗೌಡ ಅವರು ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರು ಜೆಡಿಎಸ್ ಪಕ್ಷದ ಟಿಕಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದ ಹಿನ್ನಲೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಶಂಕರೇಗೌಡ ಅವರು ಏಪ್ರಿಲ್ 24ರ ಸೋಮವಾರ ಬೆಳಗ್ಗೆ 10.30ಕ್ಕೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ. 'ನನ್ನ 36 ವರ್ಷದ ಸೇವೆಗೆ ಆಶೀರ್ವದಿಸಿ' ಎಂದು ಶಂಕರೇಗೌಡ ಅವರು ಜನರಿಗೆ ಮನವಿ ಮಾಡಿದ್ದಾರೆ.
ಎಂಬಿಬಿಎಸ್, ಎಂಡಿ ವ್ಯಾಸಂಗ ಮಾಡಿರುವ ಡಾ.ಶಂಕರೇಗೌಡ ಅವರು ಚರ್ಮರೋಗ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ್ದಾರೆ. ಶಿವನಹಳ್ಳಿ ತಾಲೂಕಿನವರಾದ ಇವರು, ಬೆಳಗ್ಗೆ ತಮ್ಮ ಗ್ರಾಮದಲ್ಲಿ ಮಧ್ಯಾಹ್ನ ಮಂಡ್ಯದ ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳನ್ನು ಭೇಟಿ ಮಾಡುತ್ತಾರೆ. ಚಿಕಿತ್ಸಾ ಶುಲ್ಕ ಕೇವಲ 5 ರೂ..ಗಳು.
ಕೃಷಿ ಕುಟುಂಬಕ್ಕೆ ಸೇರಿದ ಶಂಕರೇ ಗೌಡರು 6 ಎಕರೆ ಜಮೀನು ಹೊಂದಿದ್ದು, ಕೃಷಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಜನ ಸೇವೆಯನ್ನು ಮಾಡಲು ರಾಜಕೀಯ ಉತ್ತಮ ಮಾರ್ಗ ಎಂದು ತಿಳಿದಿರುವ ಗೌಡರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
2018ರ ಚುನಾವಣೆಗೆ ಬಸವೇಗೌಡ ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ನಿಂದ ಎಂ.ಶ್ರೀನಿವಾಸ್ ಅವರು ಅಭ್ಯರ್ಥಿ. ಕಾಂಗ್ರೆಸ್ ಪಕ್ಷದಿಂದ ಅಂಬರೀಶ್ ಸ್ಪರ್ಧೆ ಮಾಡುವುರೋ? ಇಲ್ಲವೋ? ಎಂಬುದು ಇನ್ನೂ ಖಚಿತವಾಗಿಲ್ಲ.












Click it and Unblock the Notifications