Mandya JDS MLA: ಟಿಕೆಟ್ ಕೈ ತಪ್ಪಿದ ಬೆನ್ನಲ್ಲೆ ಜೆಡಿಎಸ್ ತೊರೆದ ಮಂಡ್ಯ ಶಾಸಕ ಎಂ ಶ್ರೀನಿವಾಸ್
ಮಂಡ್ಯ, ಏಪ್ರಿಲ್ 20: ಜೆಡಿಎಸ್ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಶ್ರೀನಿವಾಸ್ ಅವರು ಜೆಡಿಎಸ್ ಸದಸ್ಯತ್ವ ತೊರೆದು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಜೆಡಿಎಸ್ ಮೊದಲ ಪಟ್ಟಿಯಲ್ಲೇ ಟಿಕೆಟ್ ಪಡೆದಿದ್ದ ಶಾಸಕ ಎಂ ಶ್ರೀನಿವಾಸ್ ಅವರು ಪ್ರಚಾರವನ್ನು ಕೈಗೊಂಡಿದ್ದರು, ಆದರೆ ಜೆಡಿಎಸ್ ಮೂರನೇ ಪಟ್ಟಿಯಲ್ಲಿ ಅವರಿಗೆ ನೀಡಿದ್ದ ಟಿಕೆಟನ್ನು ಮನ್ಮುಲ್ ಅಧ್ಯಕ್ಷ ಬಿಆರ್ ರಾಮಚಂದ್ರುಗೆ ನೀಡಿದ ಹಿನ್ನೆಲೆಯಲ್ಲಿ ಎಂ ಶ್ರೀನಿವಾಸ್ ಅವರು ಜೆಡಿಎಸ್ ತೊರೆದರು ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ನನಗೆ ಮೊದಲು ಟಿಕೆಟ್ ನೀಡಿ ನಂತರ ಪಕ್ಷದಿಂದ ಬೇರೆಯವರಿಗೆ ಟಿಕೆಟ್ ನೀಡಲಾಗಿದೆ ಎಂದ ಅವರು ಬುಧವಾರ ಬೆಂಬಲಿಗರ ಸಭೆ ನಡೆಸಿದರು. ಪಕ್ಷ ಹಣಕ್ಕೆ ಮಂಡ್ಯ ವಿಧಾನಸಭಾ ಟಿಕೆಟ್ ಮಾರಿಕೊಂಡಿದೆ. ನನಗೆ ಟಿಕೆಟ್ ಕೈತಪ್ಪಲು ಜಿಲ್ಲೆಯ ಇತರ ಜೆಡಿಎಸ್ ಶಾಸಕರೇ ಕಾರಣ. ನನ್ನ ಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ವ್ಯಕ್ತಿಗೆ ಟಿಕೆಟ್ ನೀಡಿದ್ದಾರೆ. ಹೀಗಾಗಿ ನಾನು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದೇನೆ. ಜೆಡಿಎಸ್ ವರಿಷ್ಠರ ಈ ಕ್ರಮದ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಬುಧವಾರ ಜೆಡಿಎಸ್‌ನಿಂದ ಮೂರನೇ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಸೇರಿದಂತೆ ಬರೋಬ್ಬರಿ 12 ಕ್ಷೇತ್ರಗಳ ಟಿಕೆಟ್‌ನ್ನು ಜೆಡಿಎಸ್ ವರಿಷ್ಠರು ಬದಲಾವಣೆ ಮಾಡಿದ್ದರು. ಅಲ್ಲದೆ 7 ವಿಧಾನಸಭಾ ಕ್ಷೇತ್ರದಲ್ಲಿ ನಂಜನಗೂಡಿನಲ್ಲಿ ದಿವಂಗತ ಆರ್ ಧ್ರುವನಾರಾಯಣ್ ಅವರ ಮಗ ದರ್ಶನ್ ಧ್ರುವನಾರಾಯಣ್ (ಕಾಂಗ್ರೆಸ್) ಸೇರಿದಂತೆ ಎಡಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ಘೋಷಿಸಿದ್ದರು.

ಮೊದಲ ಪಟ್ಟಿಯಲ್ಲಿ ಜೆಡಿಎಸ್ ಎಂ ಶ್ರೀನಿವಾಸ್‌ಗೆ ಟಿಕೆಟ್ ನೀಡಿದ್ದರು. ಆದರೆ ಮೂರನೇ ಪಟ್ಟಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ವಿಜಯಾನಂದ, ಬಿಆರ್ ರಾಮಚಂದ್ರು ಹಾಗೂ ಯೋಗೇಶ್ ಈ ಮೂವರಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ನೀಡಲಿತ್ತು, ಇದಕ್ಕೂ ಮೊದಲು ಎಂ ಶ್ರೀನಿವಾಸ್ ಅವರಿಗೆ ಟಿಕೆಟ್ ಕೈತಪ್ಪುತ್ತದೆ ಎಂದು ಗೊತ್ತಾಗಿತ್ತು ಎನ್ನಲಾಗಿದೆ. ಅದಕ್ಕಾಗಿಯೇ ಅವರು ತಮ್ಮ ಅಳಿಯನಾದ ಯೋಗೇಶ್‌ಗೆ ಟಿಕೆಟ್ ನೀಡುವಂತೆ ಜೆಡಿಎಸ್ ವರಿಷ್ಠರಿಗೆ ಮನವಿ ಮಾಡಿದ್ದರು ಎನ್ನಲಾಗಿತ್ತು. ಆದರೆ ವರಿಷ್ಠರು ಅದಕ್ಕೆ ಮನ್ನಣೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಬಳಿಕ ನಡೆದ ಬೆಳವಣಿಗೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಕಣಕ್ಕೆ ಇಳಿಯುತ್ತಾರೆ ಎಂದು ಹೇಳಲಾಗಿತ್ತು, ಇದಕ್ಕೆ ಕಾರಣ ಸಂಸದೆ ಸುಮಲತಾ ಬೆಂಬಲಿತ ಬಿಜೆಪಿ ಅಭ್ಯರ್ಥಿಯನ್ನು ಮಣಿಸಲೇಬೇಕು ಎಂಬುದು ಅವರ ನಿಲುವಾಗಿತ್ತು. ಹಾಗೆ ನೋಡಿದರೆ ಮಂಡ್ಯ ಯಾವಾಗಲು ಜೆಡಿಎಸ್‌ನ ಭದ್ರಕೋಟೆಯೇ ಆಗಿತ್ತು. ಆದರೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಹಿಂದೆ ಶಾಸಕ ಎಂ ಶ್ರೀನಿವಾಸ್ ಅವರು ಪ್ರಾಂಶುಪಾಲರೊಬ್ಬರಿಗೆ ಕೆನ್ನೆಗೆ ಬಾರಿಸಿದ್ದರು. ಈ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲೂ ವೈರಲ್ ಆಗಿತ್ತು, ಇಲ್ಲಿಂದ ಕೂಡ ಅವರ ಹೆಸರು ಕೆಡುತ್ತಾ ಬಂದಿತ್ತು.












Click it and Unblock the Notifications