Karnataka election 2023: ಮಂಡ್ಯ ಜಿಲ್ಲೆಯಲ್ಲಿ ಮೊದಲ ದಿನವೇ 09 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ
ಮಂಡ್ಯ, ಏಪ್ರಿಲ್, 13: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ, ನಾಮಪತ್ರ ಸಲ್ಲಿಸಲು ಇಂದು ಮೊದಲನೇ ದಿನವಾಗಿದೆ. ಆದರೆ ಮಳವಳ್ಳಿ ಮತ್ತು ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ಉಳಿದ 05 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 09 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಗಿವೆ.
09 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ
ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಮಂಜುನಾಥ ಜಿ.ಬಿ ಹಾಗೂ ಪ್ರಕಾಶ್.ಸಿ ಪಕ್ಷೇತರ ಅಭ್ಯರ್ಥಿಗಳಾಗಿ, ಮೇಲುಕೋಟೆ ಕ್ಷೇತ್ರದಿಂದ ಪಿ.ವಿ.ಸುಂದ್ರಮ್ಮ ಸರ್ವೋದಯ ಕರ್ನಾಟಕ ಪಕ್ಷ ಹಾಗೂ ಮಹೇಂದ್ರ ಕುಮಾರ್ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ, ಶ್ರೀರಂಗಪಟ್ಟಣದಲ್ಲಿ ಮೋಹನ್ ಕುಮಾರ್ಕಿರಂಗೂರು ಪಾಪು 2 ನಾಮಪತ್ರಗಳನ್ನು ಪಕ್ಷೇತರ ಅಭ್ಯರ್ಥಿಯಾಗಿ, ಅರುಣ್‌ಕುಮಾರ್.ಹೆಚ್.ಎಂ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.

ಅದೇ ರೀತಿಯಲ್ಲಿ ನಾಗಮಂಗಲ ಕ್ಷೇತ್ರದ ಯೋಗೇಶ್ ಪಕ್ಷೇತರರಾಗಿ, ಜಿ.ಎಂ.ರಮೇಶ್ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ, ಕೆ.ಆರ್. ಪೇಟೆಯಲ್ಲಿ ಕಿಶೋರ್ ಎ.ಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಒಂದೊಂದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದ್ದು, ನಾಮಪತ್ರಗಳ ಪರಿಶೀಲನೆ ಏಪ್ರಿಲ್ 21ರಂದು ನಡೆಯಲಿದೆ.
ಉಮೇದುವಾರಿಕೆಯನ್ನು ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನಾಂಕವಾಗಿದ್ದು, ಮತದಾನವು ಮೇ 10ರಂದು ಹಾಗೂ ಮತ ಎಣಿಕೆಯು ಮೇ 13ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಹೆಚ್.ಎನ್.ಗೋಪಾಲಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಎಸ್.ಎಸ್.ಎಂ
ಹಾಗೆಯೇ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಎಸ್. ಮಲ್ಲಿಕಾರ್ಜುನ್ ಬುಧವಾರ (ಏಪ್ರಿಲ್ 13) ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಉತ್ತರ ಕ್ಷೇತ್ರದ ಚುನಾವಣಾಧಿಕಾರಿ ಶ್ರೀನಿವಾಸ್ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಜೊತೆ ಆಗಮಿಸಿದ ಮಲ್ಲಿಕಾರ್ಜುನ್ ಅವರು, ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಅಧಿಕೃತವಾಗಿ ಕಣಕ್ಕಿಳಿದಿದ್ದಾರೆ.
ದಾವಣಗೆರೆ ಉತ್ತರದಲ್ಲಿ ಬಿಜೆಪಿಯಿಂದ ಲೋಕಿಕೆರೆ ನಾಗರಾಜ್ ಕಣಕ್ಕಿಳಿದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಡಲಿದೆ. ಹಾಗೆಯೇ ಆಮ್ ಆದ್ಮಿ ಪಕ್ಷದಿಂದ ಶ್ರೀಧರ್ ಪಾಟೀಲ್‌ಗೆ ಟಿಕೆಟ್ ಘೋಷಿಸಲಾಗಿದೆ. ಆದರೆ ಜೆಡಿಎಸ್ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ. ಏಪ್ರಿಲ್ 17ರ ಸೋಮವಾರದಂದು ಅಪಾರ ಬೆಂಲಿಗರೊಂದಿಗೆ ಮತ್ತೊಮ್ಮೆ ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
2018ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಎ.ರವೀಂದ್ರನಾಥ್ ವಿರುದ್ಧ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ್ ಕೇವಲ ನಾಲ್ಕೂವರೆ ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇಂದೇ ಒಳ್ಳೆಯ ದಿನ ಎಂಬ ಕಾರಣಕ್ಕೆ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ರ ಜೊತೆ ಆಗಮಿಸಿದ ಮಲ್ಲಿಕಾರ್ಜುನ್ ಅವರು ನಾಮಪತ್ರ ಸಲ್ಲಿಸುವ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್‌ಗಳಿಗೆ ತೆರಳಿ ಮತಯಾಚಿಸುತ್ತಿರುವ ಮಲ್ಲಿಕಾರ್ಜುನ್ ಅವರು ಈ ಬಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.












Click it and Unblock the Notifications