ಮಂಡ್ಯ ಜಿಲ್ಲೆಯ ಕ್ಷೇತ್ರವಾರು ಮತದಾರರ, ಮತಗಟ್ಟೆಗಳ ಸಂಪೂರ್ಣ ವಿವರ
ಮಂಡ್ಯ, ಮಾರ್ಚ್ 29: ಮೇ 10ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ ತಿಳಿಸಿದರು.
ಸದಸಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬುಧವಾರ ಬೆಳಗ್ಗೆ ಚುನಾವಣಾ ಆಯೋಗ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವುದಾಗಿ ಘೋಷಣೆ ಮಾಡಿದ್ದು, ಅದರಂತೆ ಏಪ್ರಿಲ್ 13ರಂದು ಅಧಿಸೂಚನೆ ಹೊರಬೀಳಲಿದೆ. ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 24ರಂದು ನಾಮಪತ್ರ ವಾಪಸ್ಸು ಪಡೆಯಲು ಅಂತಿಮ ದಿನವಾಗಿರುತ್ತದೆ. ಮೇ. 10ರಂದು ಮತದಾನ ನಡೆದು, ಮೇ. 13ರಂದು ಮತ ಎಣಿಕೆ ನಡೆದು 15ರಂದು ಚುನಾವಣಾ ಪ್ರಕ್ರಿಯೆ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 15,15,894 ಮಂದಿ ಮತದಾರರಿದ್ದು, ಈ ಪೈಕಿ 7,50,935 ಪುರುಷರು, 7,64,823 ಮಹಿಳೆಯರು ಹಾಗೂ 136 ತೃತೀಯ ಲಿಂಗಿಗಳು ಮತದಾನ ಮಾಡಲಿದ್ದು, ಮಹಿಳಾ ಮತದಾರರೇ ಹೆಚ್ಚಿನವರಾಗಿದ್ದಾರೆ.18 ವರ್ಷ ಮೇಲ್ಪಟ್ಟವರು ಏ. 11ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ನಮೂನೆ 6ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈವರೆಗೆ 2,300 ನಮೂನೆ 6 ಅರ್ಜಿಗಳು ಬಂದಿದ್ದು, ಪರಿಶೀಲನಾ ಹಂತದಲ್ಲಿದೆ ಎಂದು ತಿಳಿಸಿದರು.
1,798 ಮತಗಟ್ಟೆ ಕೇಂದ್ರಗಳು
ಜಿಲ್ಲೆಯಾದ್ಯಂತ ಒಟ್ಟು 1,798 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಸೂಕ್ಷ್ಮ 24 ಹಾಗೂ ಅತಿ ಸೂಕ್ಷ್ಮ 319 ಮತಗಟ್ಟೆಗಳನ್ನು ತೆರೆಯಲಾಗಿದೆ. ಜೊತೆಗೆ ಮಹಿಳಾ ಮತದಾರರಿಗಾಗಿ ಪಿಂಕ್ ಬಣ್ಣದ ಸಖಿ ಮತಗಟ್ಟೆಯನ್ನು ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 2ರಂತೆ ಕೇಂದ್ರ ತೆರೆಯಲಾಗಿದೆ.

163 ವಿಶೇಷಚೇತನ ಸಿಬ್ಬಂದಿಗಳಿದ್ದು, ಒಂದು ಮತಗಟ್ಟೆ, 5 ಎಥ್ನಿಕ್ ಮತಗಟ್ಟೆ ಹಾಗೂ ಹೆಚ್ಚು ಯುವ ಮತದಾರರಿರುವ 2 ಯುವ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಮಳವಳ್ಳಿ ತಾಲೂಕಿನ ಬಸವನಹಳ್ಳಿ ಹಾಗೂ ಮುತ್ತತ್ತಿ ಎರಡು ಶ್ಯಾಡೋ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದ್ದು, ಎರಡು ಮತಗಟ್ಟೆಗಳಿಗೆ ನಿರಂತರ ಸಂಪರ್ಕ ಸಾಧಿಸಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.
ಅನಾರೋಗ್ಯದಿಂದ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗದ ಮತದಾರರು ಅಂಚೆ ಮೂಲಕ ಮತದಾನ ಮಾಡಬಹುದಾಗಿದೆ. ಅಂಥ ಮತದಾರರು ಅರ್ಜಿ ಸಲ್ಲಿಸಿದರೆ ಮನೆಗೆ ಸುಮಾರು 10ರಿಂದ 12 ಮಂದಿ ಅಧಿಕಾರಿಗಳು ಭೇಟಿ ನೀಡಿ ಮತದಾನಕ್ಕೆ ಅವಕಾಶ ನೀಡಲಿದ್ದಾರೆ. ಅಂಚೆ ಮತದಾನ ಮಾಡಿದ ನಂತರ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ.
ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37,411 ಮತದಾರರು ಹಾಗೂ 23 ಸಾವಿರ ವಿಶೇಷಚೇತನ ಮತದಾರರಿದ್ದಾರೆ. ಎಲ್ಲರಿಗೂ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ದೃಷ್ಟಿದೋಷ ಇರುವವರಿಗೆ ಕನ್ನಡಕದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಂಪೂರ್ಣ ದೃಷ್ಟಿದೋಷ ಇದ್ದ ವಿದ್ಯಾವಂತರು ಮತಯಂತ್ರ ಮೇಲೆ ಬ್ರೆûಲ್ ಲಿಪಿ ಇದ್ದು, ಅದರ ಮೂಲಕ ಮತದಾನ ಮಾಡಬಹುದಾಗಿದೆ ಎಂದು ವಿವರಿಸಿದರು.
ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ತೆರವು
ಜಿಲ್ಲೆಯಾದ್ಯಂತ ನಗರ, ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಪೂರ್ವಾನುಮತಿ ಪಡೆಯದೆ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಟಿಂಗ್ಸ್, ಫ್ಲೆಕ್ಸ್, ಪೋಸ್ಟರ್ ಮತ್ತು ಕಟೌಟ್ಸ್‌ಗಳನ್ನು ತೆರವು ಮಾಡುವ ಕಾರ್ಯ ಈಗಾಗಲೇ ಕೈಗೊಳ್ಳಲಾಗಿದೆ. ನಗರ ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಿಡಿಓಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಖಾಸಗೀ ಆಸ್ತಿ ಮತ್ತು ಕಟ್ಟಡಗಳ ಮೇಲೆ ಇರುವ ಜಾಹೀರಾತು ಫಲಕಗಳ ತೆರವಿಗೂ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರೌಡಿಗಳು ಗಡಿಪಾರು
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರೌಡಿ ಪಟ್ಟಿಯಲ್ಲಿರುವ 7 ಮಂದಿ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಇನ್ನೂ ಕೆಲವರನ್ನು ಗಡೀ ಪಾರು ಮಾಡಲು ವಿಚಾರಣೆ ಹಂತದಲ್ಲಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 690 ಶಸ್ತ್ರಾಸ್ತ್ರಗಳಿದ್ದು, ಸಂಬಂಧಿಸಿದವರಿಗೆ ಸೂಚನೆ ನೀಡಿ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಒಪ್ಪಿಸುವಂತೆ ತಾಕೀತು ಮಾಡಲಾಗಿದೆ. ಶೀಘ್ರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ತೆಗೆದುಕೊಳ್ಳಲು ಕ್ರಮ ವಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ಉಚಿತ ಉಡುಗೊರೆ ಹಂಚಲು ತಂದಿದ್ದ 1.54 ಕೋಟಿಗೂ ರೂಪಾಯಿ ಹೆಚ್ಚಿನ ವೌಲ್ಯದ ಮದ್ಯ, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 45,03,240 ರೂಪಾಯಿ ನಗದು, 3,85,382 ರೂ. ವೌಲ್ಯದ 1009 ಲೀಟರ್ ಮದ್ಯ, 35,250 ರೂ. ವೌಲ್ಯದ 3.5 ಕೆ.ಜಿ. ಗಾಂಜಾ, 1,05,75,200 ರೂ. ವೌಲ್ಯದ ಉಚಿತ ಉಡುಗೊರೆಯ 4979 ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್. ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ಜಿಲ್ಲಾ ಪಂಚಾಯತ್ ಸಿಇಓ ಶಾಂತಾ ಎಲ್. ಹುಲ್ಮನಿ ಭಾಗಿಯಾಗಿದ್ದರು.












Click it and Unblock the Notifications