ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಗಿಯೊಂದಿಗೆ ಕೈತಪ್ಪಿ ಹೋದ ಚಿನ್ನಾಭರಣ ಮರಳಿ ಬಂದಿದ್ದೇಗೆ?

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಅಕ್ಟೋಬರ್ 29; ಇನ್ನೂ ಕೂಡ ಪ್ರಾಮಾಣಿಕತೆ, ನಂಬಿಕೆ, ವಿಶ್ವಾಸ ನಮ್ಮಲ್ಲಿ ಸತ್ತಿಲ್ಲ ಅದು ಜೀವಂತವಾಗಿದೆ ಎಂಬುದಕ್ಕೆ ಜಿಲ್ಲೆಯ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಸರಾಳು ಗ್ರಾಮದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಹಳ್ಳಿ ಪ್ರದೇಶದ ಮಹಿಳೆಯರು ಇವತ್ತಿಗೂ ಹಣ, ಒಡವೆಗಳನ್ನು ಅಡುಗೆ ಮನೆಯ ಸಾಂಬಾರ ಪದಾರ್ಥಗಳ ಡಬ್ಬಗಳಲ್ಲಿ ಇಡುವುದು ಮೊದಲಿನಿಂದಲೂ ನಡೆದು ಬಂದಿದ್ದು, ಈಗಲೂ ಅದು ಕೆಲವು ಕಡೆಗಳಲ್ಲಿ ಮುಂದುವರೆದಿದೆ.

ಸದ್ಯಕ್ಕೆ ಮನೆಯವರಿಂದ ಮತ್ತು ಕಳ್ಳರಿಂದ ರಕ್ಷಿಸಲು ಇದೊಂದು ಸುರಕ್ಷಿತ ಸ್ಥಳ ಎಂಬ ನಂಬಿಕೆಯೋ ಅಥವಾ ಹಿಂದಿನ ಕಾಲದಲ್ಲಿ ಬಡತನ ಹೆಚ್ಚಾಗಿದ್ದರಿಂದ ಮನೆಯಲ್ಲಿ ಭದ್ರವಾಗಿಡಲು ಬೇರೆಲ್ಲೂ ಸ್ಥಳಗಳಿಲ್ಲದ ಕಾರಣದಿಂದ ಮಹಿಳೆಯರು ಕಂಡುಕೊಂಡ ಉಪಾಯ ಬದಲಾದ ಕಾಲದಲ್ಲಿಯೂ ಮುಂದುವರೆಯುತ್ತಿದೆ.

Jewellery Missing With Ragi Return To Home

ಅದು ಏನೇ ಇರಲಿ ಮನೆಯೊಡತಿ ಸುಭದ್ರವಾಗಿರಲಿ ಎಂದಿಟ್ಟ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಸರ ಕೈತಪ್ಪಿ ಹೋದರೂ ಮತ್ತೆ ಮರಳಿ ಕೈಸೇರಿರುವುದು ಈಗ ಭಾರೀ ಸುದ್ದಿಗೆ ಕಾರಣವಾಗಿದೆ. ಇಲ್ಲಿ ಕೈತಪ್ಪಿ ಹೋಗಿದ್ದ ಚಿನ್ನಾಭರಣ ಮರಳಿ ಕೈಸೇರಿದೆ ಎಂದರೆ ಆ ವ್ಯಕ್ತಿಯ ದೊಡ್ಡಗುಣಕ್ಕೆ ಮತ್ತು ಪ್ರಾಮಾಣಿಕತೆಗೆ ನಾವು ಸೆಲ್ಯೂಟ್ ಹೊಡೆಯಬೇಕಿದೆ. ಹಾಗಾದರೆ ಆಗಿದ್ದೇನು?.

ಜಿಲ್ಲೆಯ ನಾಗಮಂಗಲ ತಾಲೂಕಿನ ಬಸರಾಳು ಗ್ರಾಮದ ಕಲ್ಲೇಗೌಡರು ರೈತರಾಗಿದ್ದು, ತಾವು ಬೆಳೆದ ರಾಗಿಯನ್ನು ಮೂಟೆಕಟ್ಟಿ ಮಾರಾಟಕ್ಕೆಂದು ಮನೆಯಲ್ಲಿಟ್ಟಿದ್ದರು. ಈ ನಡುವೆ ಪತ್ನಿ ಲಕ್ಕಮ್ಮ ಅವರು ಮಗನೊಂದಿಗೆ ಬೆಂಗಳೂರಿಗೆ ಹೋಗುವ ಸಂದರ್ಭ ಬಂದಿದ್ದರಿಂದ ಮನೆಯಲ್ಲಿ ಯಾರೂ ಇಲ್ಲದ ಕಾರಣ ಕಳ್ಳರು ಕನ್ನ ಹಾಕಿಬಿಟ್ಟರೆ ಎಂಬ ಭಯ ಕಾಡಿದೆ. ಇದಕ್ಕೆ ಕಾರಣವೂ ಇತ್ತು. ಪಕ್ಕದ ಕಲ್ಲಿನಾಥಪುರ ಗ್ರಾಮದಲ್ಲಿ ಇತ್ತೀಚೆಗೆ ಮನೆಯಲ್ಲಿ ಕಳ್ಳತವಾಗಿತ್ತು. ಹೀಗಾಗಿ ಅವರು ತಾವು ತಮ್ಮ ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣವನ್ನು ತೆಗೆದು ಅದನ್ನು ಒಂದು ಪರ್ಸ್‍ನಲ್ಲಿ ಹಾಕಿ ಬಳಿಕ ಮನೆಯಲ್ಲಿದ್ದ ರಾಗಿಮೂಟೆಯೊಳಗೆ ಇಟ್ಟು ಬೆಂಗಳೂರಿಗೆ ಹೋಗಿದ್ದಾರೆ.

ಇತ್ತ ಮನೆಯಲ್ಲಿದ್ದ ಕಲ್ಲೇಗೌಡರಿಗೆ ಪತ್ನಿ ಲಕ್ಕಮ್ಮ ಅವರು ರಾಗಿಮೂಟೆಯಲ್ಲಿ ಚಿನ್ನಾಭರಣ ಬಚ್ಚಿಟ್ಟಿರುವ ವಿಚಾರವೇ ಗೊತ್ತಿರಲಿಲ್ಲ. ಅವರಿಗೆ ತಾವು ಬೆಳೆದ ರಾಗಿಯನ್ನು ಮಾರುವ ಬಗ್ಗೆ ಓಡಾಟ ನಡೆಸಿದ್ದರು. ಅದರಂತೆ ರಾಗಿ ವ್ಯಾಪಾರಿಗಳು ಬಂದು ಕಲ್ಲೇಗೌಡರ ಮನೆಗೆ ಬಂದು ರಾಗಿ ಮೂಟೆಯನ್ನು ಕೊಂಡೊಯ್ದಿದ್ದರು. ಹೀಗೆ ಕೊಂಡೊಯ್ದ ರಾಗಿಯನ್ನು ಅವರು ಬಸರಾಳಿನ ಬೋರೆಗೌಡ ಮತ್ತು ತಿಮ್ಮೇಗೌಡ ಎಂಬವರ ಶ್ರೀನಿವಾಸ ರೈಸ್ ಮಿಲ್‍ಗೆ ಮಾರಾಟ ಮಾಡಿದ್ದರು.

ಶ್ರೀನಿವಾಸ ರೈಸ್ ಮಿಲ್‌ನ ರಾಗಿಗೆ ಬೇರೆಡೆಯಿಂದ ಬೇಡಿಕೆಯಿದ್ದು, ಎಲ್ಲಿಂದ ಬೇಡಿಕೆ ಬರುತ್ತದೆಯೋ ಅಲ್ಲಿಗೆ ಗುಣಮಟ್ಟದ ರಾಗಿಯನ್ನು ಕಳುಹಿಸಿಕೊಡುವುದು ಹಿಂದಿನಿಂದಲೂ ನಡೆದು ಬಂದಿದ್ದು, ಅದರಂತೆ ಇತ್ತೀಚೆಗೆ ಬೆಂಗಳೂರಿನಿಂದ ಉತ್ತಮ ಗುಣಮಟ್ಟದ ರಾಗಿಯನ್ನು ಕಳುಹಿಸಿಕೊಡುವಂತೆ ಬೇಡಿಕೆ ಸಲ್ಲಿಸಿದ್ದರು.

ಅದರಂತೆ ಮಿಲ್‍ ಮಾಲೀಕರು ತಮಗೆ ವ್ಯಾಪಾರಿಗಳು ತಂದುಕೊಟ್ಟ ರಾಗಿಯ ಮೂಟೆಯನ್ನು ಸುರಿದು ಪರಿಶೀಲಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಂದರ್ಭ ಮೂಟೆಯೊಂದರಲ್ಲಿದ್ದ ರಾಗಿಯನ್ನು ಸುರಿದು ಪರಿಶೀಲಿಸುವಾಗ ಮೂಟೆ ಒಳಗಿನಿಂದ ಪರ್ಸ್‍ ಬಿದ್ದಿದೆ. ಅದನ್ನು ತೆಗೆದು ನೋಡಿದಾಗ ಅದವರಲ್ಲಿ ಚಿನ್ನಾಭರಣ ಇರುವುದು ಪತ್ತೆಯಾಗಿದೆ.

ಅಚ್ಚರಿಗೊಂಡ ಅವರು ಪರ್ಸ್ ನ ಮೇಲಿದ್ದ ಚಿನ್ನದ ಅಂಗಡಿಯ ಹೆಸರನ್ನು ನೋಡಿ ಆ ಅಂಗಡಿಗೆ ಹೋಗಿ ಚಿನ್ನಾಭರಣವನ್ನು ತೋರಿಸಿ ವಾರಸುದಾರರ ಪತ್ತೆ ಹಚ್ಚುವ ಕೆಲಸ ಮಾಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ಕಲ್ಲೇಗೌಡರ ಬಗ್ಗೆ ಮಾಹಿತಿ ನೀಡಿದ್ದಾನೆ.

ಅದರಂತೆ ಬೋರೆಗೌಡರು ನೇರವಾಗಿ ಕಲ್ಲೇಗೌಡರ ಮನೆಗೆ ಬಂದು ಚಿನ್ನಾಭರಣವನ್ನು ಹಿಂತಿರುಗಿಸಿದ್ದಾರೆ. ಇತ್ತ ಚಿನ್ನಾಭರಣವನ್ನು ರಾಗಿಮೂಟೆಯೊಳಗಿಟ್ಟು ಕಳೆದುಕೊಂಡು ಚಿಂತೆಯಲ್ಲಿದ್ದ ಲಕ್ಕಮ್ಮ ಸಂತೋಷದ ಕಣ್ಣೀರಿಟ್ಟಿದ್ದಲ್ಲದೆ, ತಮ್ಮ ಒಡವೆಯನ್ನು ಮನೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಬೋರೆಗೌಡರನ್ನು ಮನಪೂರ್ವಕವಾಗಿ ಒಳ್ಳೆಯದು ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.

English summary
Jewellery missing from Mandya with Ragi crop return to home. Rice mill owner found jewellery and return it to farmer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X