ಗಂಡನನ್ನು 5 ಲಕ್ಷಕ್ಕೆ ಇಟ್ಕೊಂಡವಳಿಗೆ ಮಾರಿದ ಕಟ್ಕೊಂಡವಳು!
ಮಂಡ್ಯ, ಅ 18: ಪರಸ್ತ್ರೀ ಸಂಗವನ್ನು ಬಿಡು ಎಂದು ಎಷ್ಟು ಹೇಳಿದರೂ ಕೇಳದ ಗಂಡನಿಗೆ ಪತ್ನಿ ಪಾಠ ಕಲಿಸಿದ್ದು ಹೇಗೆ ಗೊತ್ತಾ? ಹೆಂಡತಿ ತೆಗೆದುಕೊಂಡ ನಿರ್ಧಾರ, ಗ್ರಾಮಸ್ಥರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.
ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ವಿಲಕ್ಷಣ ಘಟನೆಯಲ್ಲಿ, ಪತ್ನಿ ತನ್ನ ಪತಿಯನ್ನು, ಆತನ ಪ್ರಿಯತಮೆಗೆ ಐದು ಲಕ್ಷಕ್ಕೆ ಮಾರಿದ್ದಾಳೆ. ಮುಂದಿನ ತಿಂಗಳು, ಪ್ರಿಯತಮೆಗೆ, ಪತ್ನಿ ತನ್ನ ಗಂಡನನ್ನು ಅಧಿಕೃತವಾಗಿ ಹಸ್ತಾಂತರಿಸಲಿದ್ದಾಳೆ.
ಗ್ರಾಮದ ಮಹಿಳೆಯೊಂದಿಗೆ ಪತಿ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ. ಹಲವು ಬಾರಿ ಎಚ್ಚರಿಕೆ ನೀಡಿದರೂ, ಪತಿ, ಸರಿದಾರಿಗೆ ಬಂದಿರಲಿಲ್ಲ. ಎರಡು ದಿನಗಳ ಹಿಂದೆ, ಇಬ್ಬರೂ ಏಕಾಂತದಲ್ಲಿರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ, ಪತಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ.

ಆಗ, ಪತ್ನಿ ಮತ್ತು ಗಂಡನ ಪ್ರಿಯತಮೆಯ ನಡುವೆ ವಾಗ್ಯುದ್ದ ನಡೆದು, ಇಬ್ಬರೂ ಪಂಚಾಯತಿ ಕಟ್ಟೆಗೆ ಹೋಗಿದ್ದಾರೆ. ಇಬ್ಬರ ನಡುವೆ ರಾಜೀ ಸಂಧಾನ ಮಾಡಲು ದೊಡ್ಡವರು ವಿಫಲರಾಗಿದ್ದಾರೆ.
ನಿನ್ನ ಗಂಡ ನನ್ನ ಬಳಿ ಐದು ಲಕ್ಷ ರೂಪಾಯಿ ಸಾಲ ಮಾಡಿದ್ದಾನೆ. ಅದನ್ನು ಚುಕ್ತಾ ಮಾಡಿ ನಿನ್ನ ಗಂಡನನ್ನು ಕರೆದುಕೊಂಡು ಹೋಗು ಎಂದು ಪ್ರಿಯತಮೆ ಷರತ್ತನ್ನು ಮುಂದಿಟ್ಟಿದ್ದಾಳೆ. ಇಂತಹ ಗಂಡ ಯಾವನಿಗೆ ಬೇಕು, ನಾನು ಕೋರ್ಟ್ ಮೆಟ್ಟಲೇರುತ್ತೇನೆ ಎಂದು ಪತ್ನಿ ಹಠಕ್ಕೆ ಬಿದ್ದಿದ್ದಾಳೆ.
ಪತಿಯಿಂದ ನನಗೆ ಐದು ಲಕ್ಷ ಜೀವನಾಂಶ ಬೇಕು ಎಂದು ಪತ್ನಿ ಹೇಳಿದಾಗ, ಆ ದುಡ್ಡನ್ನು ನಾನೇ ಕೊಡುತ್ತೇನೆ. ಆದರೆ, ನಿನ್ನ ಪತಿಯನ್ನು ನನಗೆ ಬಿಟ್ಟುಕೊಡಬೇಕು ಎಂದು ಪ್ರಿಯತಮೆ ಷರತ್ತು ಹಾಕಿದ್ದಾಳೆ.
ಇದಕ್ಕೆ ಪತ್ನಿ ಒಪ್ಪಿ, ಮುಂದಿನ ತಿಂಗಳು ಐದು ಲಕ್ಷ ರೂಪಾಯಿ ನೀಡಿ, ನನ್ನ ಗಂಡನನ್ನು ಖರೀದಿಸಿಕೊಂಡು ಹೋಗು ಎಂದು ಹೇಳಿದ್ದಾಳೆ. ಪತ್ನಿಯ ನಿರ್ಧಾರ ಎಲ್ಲರನ್ನೂ ಬೆಚ್ಬಿಬೀಳಿಸಿದೆ.












Click it and Unblock the Notifications