ಹೇಮಾವತಿ ಒಡಲು ಬಗೆಯುತ್ತಿರುವ ಮರಳು ದಂಧೆಕೋರರು!
ಮಂಡ್ಯ, ಜೂನ್ 13; ಹೇಮಾವತಿ ನದಿ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಉಕ್ಕಿ ಹರಿಯುವುದರೊಂದಿಗೆ ದಡದಲ್ಲಿ ಮರಳನ್ನು ತಂದು ಹಾಕಿದೆ. ಇದೀಗ ಈ ಮರಳು ಕೆ. ಆರ್. ಪೇಟೆ ತಾಲೂಕಿನ ಹಲವು ಗ್ರಾಮಗಳ ಜನರ ನಿದ್ದೆಗೆಡಿಸಿದೆ.
ಮರಳಿಗೆ ಚಿನ್ನದ ಬೆಲೆಯಿದ್ದು, ಬೇಡಿಕೆಯೂ ಹೆಚ್ಚಿರುವುದರಿಂದ ನದಿದಡದಲ್ಲಿ ರಾಶಿ ಬಿದ್ದಿರುವ ಮರಳನ್ನು ದೋಚಲು ಈಗಾಗಲೇ ಮರಳು ದಂಧೆಕೋರರು ಕೈಚಳಕ ಆರಂಭಿಸಿದ್ದಾರೆ. ಒಂದಷ್ಟು ಲೋಡ್ ಮರಳುಗಳು ನದಿದಡದಿಂದ ಮಾಯವಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿರುವುದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಕೆ. ಆರ್. ಪೇಟೆ ತಾಲೂಕಿನ ಬಂಡಿಹೊಳೆ, ಸೋಮನಾಥಪುರ, ಕಟ್ಟಹಳ್ಳಿ, ಕಟ್ಟೇಕ್ಯಾತನಹಳ್ಳಿ, ಯಗಚಗುಪ್ಪೆ, ಕೂಡಲಕುಪ್ಪೆ, ಪಿಡಿಜಿಕೊಪ್ಪಲು, ಮಂದಗೆರೆ, ಗದ್ದೇಹೊಸೂರು ಗ್ರಾಮಗಳ ಮೂಲಕ ಹೇಮಾವತಿ ನದಿ ಹರಿಯುತ್ತಿದ್ದು, ಕಳೆದ ಬಾರಿ ನದಿಯಲ್ಲಿ ಪ್ರವಾಹ ಬಂದಿತ್ತು.

ಹೀಗಾಗಿ ಮರಳು ನದಿಯಲ್ಲಿ ಹರಿದು ಬಂದಿತ್ತು. ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿರುವುದರಿಂದ ನದಿಯ ಒಡಲಿನಲ್ಲಿ ಹಾಗೂ ದಡದಲ್ಲಿರುವ ಮರಳು ಕಾಣಿಸುತ್ತಿದ್ದು, ಇದನ್ನು ಲೂಟಿ ಹೊಡೆಯುವುದರಲ್ಲಿ ದಂಧೆಕೋರರು ನಿರತರಾಗಿದ್ದಾರೆ.
ಬೂಕನಕೆರೆ ಹೋಬಳಿ ಮತ್ತು ಅಕ್ಕಿಹೆಬ್ಬಾಳು ಹೋಬಳಿಗೆ ಸಂಪರ್ಕ ಕಲ್ಪಿಸುವ ಹೇಮಾವತಿ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸಿರುವ ಕಟ್ಟೇಕ್ಯಾತನಹಳ್ಳಿ ಅಣೆಕಟ್ಟೆ ಹಾಗೂ ಸೇತುವೆಯ ಅಕ್ಕಪಕ್ಕದಲ್ಲಿ ಹಗಲು ರಾತ್ರಿಯೆನ್ನದೆ, ಮರುಳನ್ನು ಟಪ್ಪರ್‌ಗಳು, ಟ್ರ್ಯಾಕ್ಟರ್ ಗಳಲ್ಲಿ ಸಾಗಾಟ ಮಾಡಲಾಗುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದರ ಹಿಂದೆ ಪ್ರಭಾವಿಗಳ ಕೈವಾಡವೂ ಇದೆ ಎನ್ನಲಾಗುತ್ತಿದೆ. ನದಿ ದಡದಲ್ಲಿ ಜೆಸಿಬಿ, ಹಿಟಾಚಿ ಯಂತ್ರಗಳು ಸದ್ದು ಮಾಡುತ್ತಿದ್ದು, ಟ್ರಾಕ್ಟರ್‌ಗಳು ಹಾಗೂ ಟಿಪ್ಪರ್‌ಗಳಲ್ಲಿ ಮರಳು ಸಾಗಾಣಿಕೆಯೂ ಎಗ್ಗಿಲ್ಲದಂತೆ ನಡೆಯುತ್ತಿದೆ.

ಮರಳನ್ನು ಹೊತ್ತು ಹಗಲು ರಾತ್ರಿ ಎನ್ನದೇ ಭಾರೀ ಶಬ್ಧ ಮಾಡುತ್ತಾ ಟಿಪ್ಪರ್, ಟ್ಯಾಕ್ಟರ್ ಗಳು ಸಾಗುತ್ತಿದ್ದು, ಇದರಿಂದ ಗ್ರಾಮದ ರಸ್ತೆಗಳು ಹಾಳಾಗುತ್ತಿದ್ದು, ಜನರಿಗೆ ನಿದ್ದೆ ಇಲ್ಲದಂತಾಗಿದೆ. ಇನ್ನೊಂದೆಡೆ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಹಳ್ಳಿ-ಕಟ್ಟೇಕ್ಯಾತನಹಳ್ಳಿ ಸೇತುವೆಯ ಪಿಲ್ಲರ್‌ಗಳ ಪಕ್ಕದಲ್ಲಿಯೇ ಮರಳು ತೆಗೆಯುತ್ತಿದ್ದಾರೆ.
ಸೇತುವೆಯ ಭದ್ರತೆಗೆ ಅಪಾಯ ಎದುರಾಗಲಿದ್ದು, ಸೇತುವೆಗೆ ಹಾನಿಯಾದರೆ ಮುಂದೇನು ಗತಿ ಎಂಬ ಭಯವೂ ಜನರನ್ನು ಕಾಡಲು ಆರಂಭಿಸಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದೆ ಹೋದರೆ ಹೇಮಾವತಿ ನದಿ ಒಡಲು ಬರಿದಾಗುವುದರಲ್ಲಿ ಸಂಶಯವಿಲ್ಲ.












Click it and Unblock the Notifications