ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನ ಹೆಚ್ಚಳ: ಸಿದ್ದರಾಮಯ್ಯ ಭರವಸೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಲಿನ ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡಲಾಗುವುದೆಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹಾಗಾದರೆ ಪ್ರೋತ್ಸಾಹ ಧನವನ್ನು ಎಷ್ಟಕ್ಕೆ ಏರಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ ನೀವೆ ನೋಡಿ.
ಮಂಡ್ಯ, ಜನವರಿ, 27: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಪ್ರತೀ ಲೀಟರ್ ಹಾಲಿಗೆ 1 ರೂಪಾಯಿ ಹೆಚ್ಚಿನ ಪ್ರೋತ್ಸಾಹ ಧನ ನೀಡಲು ಆದೇಶ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಡ್ಯದಲ್ಲಿ ಘೋಷಿಸಿದರು.
ನಗರದ ಮಂಡ್ಯ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ನಮ್ಮ ಪಕ್ಷ ಪ್ರಕಟಿಸಿರುವ ಗೃಹಲಕ್ಷ್ಮಿಯವರಿಗೆ ಮಾಸಿಗ 2 ಸಾವಿರ ರೂಪಾಯಿ, ಪ್ರತೀ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ಘೋಷಣೆ ಮಾಡಿದೆ. ಇದೀಗ ನಾನು ಮಂಡ್ಯದಲ್ಲಿ ಹೈನೋದ್ಯಮ ಪ್ರೋತ್ಸಾಹಿಸಿ ರೈತರಿಗೆ ನೆರವಾಗುವ ದೃಷ್ಠಿಯಿಂದ ಈಗಿರುವ 5 ರೂಪಾಯಿ ಪ್ರೋತ್ಸಾಹದೊಂದಿಗೆ ಹೆಚ್ಚುವರಿ 1 ರೂಪಾಯಿ ಸೇರಿಸಿ 6 ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುವುದು. ಇದರಿಂದ ಹೈನುಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ 165 ಭರವಸೆಗಳಲ್ಲಿ 158 ಭರವಸೆಯನ್ನು ಈಡೇರಿಸಿದ್ದೇವೆ. ಈಗ ನಾವು ಅಧಿಕಾರಕ್ಕೆ ಬಂದರೆ ತಲಾ 10 ಕೆ.ಜಿ. ಅಕ್ಕಿ ನೀಡುವುದೂ ಸೇರಿದಂತೆ ಜನಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ. ನಮ್ಮ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು. ಬಿಜೆಪಿಯವರಂತೆ ವಚನಭ್ರಷ್ಟರಲ್ಲ ಎಂದು ಹೇಳಿದರು.

ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
ಬಿಜೆಪಿಯಲ್ಲಿ ನಿರಾಣಿ ಎಂಬ ಉದ್ಯಮಿ ಮೈಶುಗರ್ ಕಾರ್ಖಾನೆಯನ್ನು ಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಸರ್ಕಾರ ಇತ್ತೀಚೆಗೆ ಅತ್ತೂ ಕರೆದು ಕಾರ್ಖಾನೆ ಆರಂಭಿಸಿ ಕೇವಲ 90 ಸಾವಿರ ಟನ್ ಕಬ್ಬನ್ನು ಮಾತ್ರ ಅರೆದಿದ್ದಾರೆ. ವಾಸ್ತವದಲ್ಲಿ ಜಿಲ್ಲೆಯಲ್ಲಿ 3.5 ಲಕ್ಷ ಟನ್ ಕಬ್ಬು ಅರೆಯಬೇಕಿತ್ತು. ಹೀಗಿರುವಾಗ ರೈತರು ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡುವ ಅನಿವಾರ್ಯತೆ ಬಂದಿದೆ. ಇಲ್ಲದಿದ್ದರೆ ಕಬ್ಬು ಒಣಗಿ ಇಳುವರಿ ಕಳೆದುಕೊಳ್ಳುವ ಆತಂಕ ರೈತರದ್ದಾಗಿದೆ ಎಂದರು.

ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ
ಉತ್ತರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಮಾಡುತ್ತಲೇ ಇದ್ದಾರೆ ಎಂದರೆ ಕಾರ್ಖಾನೆ ಲಾಭದಾಯಕವಾಗಿಲ್ಲವೇ?. ಮೈಶುಗರ್ ಹಳ್ಳ ಹಿಡಿಸಿದರೆ ಸುಲಭವಾಗಿ ಮಾರಾಟ ಮಾಡಬಹುದು ಎಂಬ ಇರಾದೆ ಬಿಜೆಪಿ ಸರ್ಕಾರದ್ದಾಗಿದೆ ಎಂದು ಆರೋಪಿಸಿದರು. ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆಯನ್ನು ಇನ್ನಷ್ಟು ಉಜ್ವಲಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡುವುದು ಖಚಿತ ಎಂದು ಭರವಸೆ ನೀಡಿದರು.

ಕುಮಾರಸ್ವಾಮಿಗೆ ಅಧಿಕಾರ ಮಾಡಕ್ಕಾಗಲ್ಲ?
37 ಶಾಸಕರನ್ನು ಹೊಂದಿದ್ದ ಜೆಡಿಎಸ್‌ಗೆ ನಾವು 87 ಜನರಿದ್ದ ಕಾಂಗ್ರೆಸ್‌ನಿಂದ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಕಾರಣವೆಂದರೆ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಉದ್ದೇಶವಾಗಿತ್ತು. ಆದರೆ ಈ ಕುಮಾರಸ್ವಾಮಿ ವೆಸ್ಟ್ ಎಂಡ್ ಹೊಟೇಲ್‌ನಲ್ಲಿದ್ದುಕೊಂಡೇ ಆಡಳಿತ ನಡೆಸುತ್ತೇನೆ ಎಂದು ಹೊರಟರು. ಪರಿಣಾಮ ಅವರು ಹುದ್ದೆ ನಿರ್ವಹಿಸಲಾಗದೆ ಅಧಿಕಾರ ಕಳೆದುಕೊಂಡರು. ಇದಕ್ಕೆ ಸಿದ್ದರಾಮಯ್ಯ ಕಾರಣವೆಂದು ಅಪಪ್ರಚಾರ ಮಾಡಿದರು. ವಾಸ್ತವದಲ್ಲಿ ಶಾಸಕರನ್ನು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗಾಜಿನ ಮನೆಯಲ್ಲಿ ಕುಳಿತು ಅಧಿಕಾರ ನಡೆಸಲು ಹೊರಟಿದ್ದೇ ಅವರು ಅಧಿಕಾರ ಕಳೆದುಕೊಳ್ಳಲು ಕಾರಣ. ಹಾಗಾಗಿ ಕೊಟ್ಟ ಕುದುರೆಯನ್ನು ಏರಿದವ ಧೀರನೂ ಅಲ್ಲ, ವೀರನೂ ಅಲ್ಲ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ
ಇನ್ನು ಬಿಜೆಪಿಯವರು ಧರ್ಮಗಳ ನಡುವೆ ಜನರನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್‌ನವರು ಅಧಿಕಾರಕ್ಕೆ ಬರುವುದೇ ಇಲ್ಲ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಖಚಿತವೋ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಐಸಿಸಿ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ, ವಿಭಾಗೀಯ ಉಸ್ತುವಾರಿ ರೋಹಿತ್ ಜಾನ್, ಜಿಲ್ಲಾ ಉಸ್ತುವಾರಿ ಚೌದರಿ, ಕೇಂದ್ರದ ಮಾಜಿ ಸಚಿವ ಕೆ. ರೆಹಮಾನ್ ಖಾನ್, ಬಿ.ಕೆ. ಹರಿಪ್ರಸಾದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವರಾದ ಕೃಷ್ಣ ಭೈರೇಗೌಡ, ಎನ್. ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಎಂ.ಎಸ್. ಆತ್ಮಾನಂದ, ಶಾಸಕರಾದ ದಿನೇಶ್‌ಗೂಳೀಗೌಡ, ಮಧು ಜಿ. ಮಾದೇಗೌಡ, ಮಾಜಿ ಶಾಸಕರಾದ ಮಲ್ಲಾಜಮ್ಮ, ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ರಮೇಶ್ ಬಂಡಿಸಿದ್ದೇಗೌಡ, ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಸೇರಿದಂತೆ ಮತ್ತಿತರರು ಹಾಜರಿದ್ದರು.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications