ನಾನು ಕುಮಾರಸ್ವಾಮಿ ಅವರಪ್ಪನ ತರ ಮಾತನಾಡುತ್ತೇನೆ: ಸಚಿವ ಚೆಲುವರಾಯಸ್ವಾಮಿ ಗುಡುಗು
ಮಂಡ್ಯ, ನವೆಂಬರ್ 21: ಕುಮಾರಸ್ವಾಮಿ ಅವರು ಎರಡು ಮೂರು ತಿಂಗಳಿನಿಂದ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ. ಅವರ ರೀತಿ ಮಾತನಾಡೋದು ಸರಿ ಅಂದರೆ ನಾನೂ ಸಹ ಅವರಪ್ಪನ ತರ ಮಾತನಾಡುತ್ತೇನೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಗುಡುಗಿದರು.
ಮಳವಳ್ಳಿ ತಾಲೂಕು ಹಲಗೂರಿನಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅವರಿಗೆ ಯಾವ ಸಚಿವರು ಕರೆ ಮಾಡಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಲಿ, ಅವರ ಬಳಿ ಇರುವ ಪೆನ್‌ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಆದರೆ ಯಾವ ಸಚಿವರು ಕರೆ ಮಾಡಿ ದಾಖಲೆ ಬಿಡುಗಡೆ ಮಾಡಬೇಡಿ ಎಂದು ಹೇಳಿದ್ದಾರೆನ್ನುತ್ತಾರೆ. ಅವರ ಬಳಿ ಇರುವುದು ಪೆನ್‌ಡ್ರೈವ್ ಅಲ್ಲ. ಪೆನ್ಸಿಲ್ ಡ್ರೈವ್. ಇರೋದು ಅಳಿಸಿ ಹೋಗಿದೆ. ಕುಮಾರಸ್ವಾಮಿ ಉಪಯೋಗಿಸುವ ಭಾಷೆ ಸರಿ ಇದೆಯೇ ಎಂದು ಪ್ರಶ್ನಿಸಿದರು.

ಮೊನ್ನೆ ಮೊನ್ನೆಯವರೆಗೆ ನಾವು ಜಾತ್ಯತೀತ ಅಂದಿದ್ದರು. ಮುಸ್ಲೀಂ, ದಲಿತ, ಹಿಂದುಳಿದವರ ಪರ ಎಂದು ಜಾತ್ಯಾತೀತ ಎಂದು ಹೆಸರಿಟ್ಟುಕೊಂಡಿದ್ದರು. ಈಗ ದತ್ತಮಾಲೆ ಹಾಕಿಕೊಳ್ಳುತ್ತೇನೆ ಅನ್ನುತ್ತಿದ್ದಾರೆ. ಯಾವುದನ್ನು ಹಾಕ್ಕೊತ್ತಾರೋ, ಯಾರ, ಯಾವ ಸಮಾಜದ ಪರ ನಿಲ್ಲುತ್ತಾರೋ ಗೊತ್ತಿಲ್ಲ ಎಂದು ಛೇಡಿಸಿದರು.
ಬಿಜೆಪಿಯವರು ಹೇಳಿದರೆ ಕುಮಾರಸ್ವಾಮಿ ಚಡ್ಡಿಯನ್ನೂ ಹಾಕಿಕೊಂಡು ಸಂತೋಷ ಪಡುತ್ತಾರೆ. ಅವರು ದತ್ತ ಮಾಲೆ ಹಾಕಿಕೊಂಡರೂ ಸಂತೋಷ, ಅದು ಅವರ ರಾಜಕಾರಣ ಮಾಡಿಕೊಳ್ಳಲಿ. ಹಿಂದೆ ಕಮಿಷನ್ ಹೊಡೆದು ಅವರಿಗೆ ಅಭ್ಯಾಸವಾಗಿದೆ. ಅದಕ್ಕೆ ಅವರು ಬೇರೆಯವರಿಗೆ ಕಮಿಷನ್ ಹೊಡೆಯುತ್ತಾರೆ ಎಂದು ಹೇಳುತ್ತಾರೆ ಎಂದು ಕುಮಾರಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ದುಡ್ಡು ಹೊಡೆಯಬಾರದು ಎಂಬ ಕಾರಣಕ್ಕೇ ರೈತರ ಖಾತೆಗೆ ನೇರವಾಗಿ ಹಣ ಹಾಕುವುದು, ರೈತರ ಪರಿಹಾರ ಹಣದಲ್ಲಿ ದುಡ್ಡು ಹೊಡಿತಾರೆ ಎಂದು ಜೆಡಿಎಸ್-ಬಿಜೆಪಿಗೆ ಟಾಂಗ್ ನೀಡಿದರು. ಎಲ್ಲವನ್ನೂ ವೀಕ್ಷಣೆ ಮಾಡಿ, ಬರ ಅಧ್ಯಯನ ನಡೆಸಿ 18 ಸಾವಿರ ಕೋಟಿ ಪರಿಹಾರ ಕೇಳಿದ್ದೇವೆ. ಎಷ್ಟು ಕೊಡುತ್ತಾರೋ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ಬಹಳ ಅನ್ಯೂನ್ಯವಾಗಿದ್ದಾರೆ. ಯಾವುದೇ ಒಂದು ಅಪಸ್ವರವೂ ಇಲ್ಲ. ಮುಖ್ಯಮಂತ್ರಿ ಅವರವರ ಇಚ್ಚೆ, ಅವರ ಅಭಿಪ್ರಾಯ ಹೇಳೋದು ಅಪರಾಧ ಅನ್ನುವುದಕ್ಕೆ ಆಗುವುದಿಲ್ಲ. ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಹೇಳುವುದರಲ್ಲಿ ತಪ್ಪೇನಿದೆ. ಯಾವತ್ತೋ ಒಂದು ಅವರು ಆಗಬಹುದೇನೋ ಎಂದು ಸತೀಶ್ ಪರ ಬ್ಯಾಟಿಂಗ್ ಬೀಸಿದರು.
ಸಧ್ಯ ಈ ಅವಧಿಯಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಕುರ್ಚಿ ಖಾಲಿ ಆದಾಗ ಮಾತ್ರ ಕ್ರೈಮ್. ಸದ್ಯ ಖಾಲಿ ಇಲ್ಲ. ಆದಾಗ ಪಕ್ಷ ಅದನ್ನು ತೀರ್ಮಾನ ಮಾಡುತ್ತೆ. ನಮ್ಮಲ್ಲಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುವ ಸಮರ್ಥರಿದ್ದಾರೆ. ಯಾವ ಸಂದರ್ಭದಲ್ಲಿ ಏನು ತೀರ್ಮಾನ ಮಾಡಬೇಕೋ ಮಾಡುತ್ತಾರೆ ಎಂದು ಹೇಳಿದರು.












Click it and Unblock the Notifications