ಎಚ್‌ಡಿಕೆಯವರ ನಿಲಕ್ಷ್ಯವೇ ನನ್ನ ರಾಜೀನಾಮೆಗೆ ಕಾರಣ : ನಾರಾಯಣ ಗೌಡ
ಬೆಂಗಳೂರು, ಆಗಸ್ಟ್ 3: ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ನಮ್ಮನ್ನು ನಿರ್ಲಕ್ಷಿಸಿದ್ದಕ್ಕೆ ರಾಜೀನಾಮೆ ನೀಡಿದ್ದು ಎಂದು ಕೆಆರ್ ಪೇಟೆ ಅನರ್ಹ ಶಾಸಕ ನಾರಾಯಣಗೌಡ ಹೇಳಿದ್ದಾರೆ.
ಯಾವುದೋ ಅಧಿಕಾರ, ಹುದ್ದೆಗಾಗಿ ರಾಜೀನಾಮೆ ನೀಡಿಲ್ಲ, ಒಬ್ಬ ಶಾಸಕನಾಗಿ ಕೆಲಸ ಮಾಡಲು ಬಿಡಲಿಲ್ಲ, ಅವರು ನಿರ್ಲಕ್ಷಿಸಿದ್ದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.
ಸದನದ ಪ್ರಾರಂಭಕ್ಕೂ ಮುನ್ನವೇ ನಾವು ರಾಜೀನಾಮೆ ನೀಡಿದೆವು. ಆದರೂ ಅನರ್ಹಗೊಳಿಸಿದ್ದಾರೆ. ಸ್ಪೀಕರ್ ರಮೇಶ್ಕುಮಾರ್ ಅವರ ತೀರ್ಮಾನ ತುಂಬಾ ನೋವು ತಂದಿದೆ. ಆದರೂ ನಮಗೆ ಸುಪ್ರೀಂಕೋರ್ಟ್ ಮೇಲೆ ವಿಶ್ವಾಸವಿದ್ದು, ನಮ್ಮ ಪರವಾದ ತೀರ್ಪು ಬರುವ ನಂಬಿಕೆ ಇದೆ ಎಂದು ಹೇಳಿದರು.

ನಾವು ಯಾವ ಪಕ್ಷಕ್ಕೆ ಹೋಗಬೇಕೆಂದು ಇನ್ನೂ ತೀರ್ಮಾನಿಸಿಲ್ಲ. ನಮ್ಮ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕ್ಷೇತ್ರದಲ್ಲಿರುವ ಕೆಲವರ ಮಾತು ಕೇಳಿ ಈ ರೀತಿ ಮಾಡಿದ್ದಾರೆ.
ಗೌಡರ ಮನೆಯಲ್ಲೊಂದು ಸಿಂಡಿಕೇಟ್ ಇದೆ. ಆ ಸಿಂಡಿಕೇಟ್ನ್ನು ದೇವೇಗೌಡರ ಕುಟುಂಬ ಬೆಳೆಸಿದೆ. ನಾನು ಒಬ್ಬ ಶಾಸಕ ಹೋದರೆ ಕನಿಷ್ಠ ಒಂದು ಟೀ ಕೂಡ ಕೊಡಲ್ಲ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೆ.ಆರ್.ಪೇಟೆಯಲ್ಲಿ ಅವರು ಯಾರನ್ನು ಬೇಕಾದರೂ ನಿಲ್ಲಿಸಲಿ, ಅವರು ತುಂಬಾ ದೊಡ್ಡವರು. ಅಭ್ಯರ್ಥಿ ಹಾಕುವ ಬಗ್ಗೆ ನಾನು ಮಾತನಾಡಲ್ಲ. ನಾನೊಬ್ಬ ಒಕ್ಕಲಿಗ, ಮಹಾರಾಷ್ಟ್ರದಲ್ಲಿ ಉದ್ಯಮ ನಡೆಸುತ್ತೇನೆ. ಒಬ್ಬ ಒಕ್ಕಲಿಗನನ್ನೇ ಅವರು ಬೆಳೆಸಲಿಲ್ಲ. ಕಿಡಿಗೇಡಿಗಳ ಗುಂಪಿನ ಮಾತು ಕೇಳಿ ನೋವು ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications