ಮಂಡ್ಯ; ಸರ್ವೆ ಅಧಿಕಾರಿಗಳ ರಕ್ಷಣೆಗೆ ಬಂದ್ದಿದ್ದ ಪೊಲೀಸರ ಮೇಲೆ ಹಲ್ಲೆ
ಮಂಡ್ಯ, ಮೇ 29 : ತಹಸೀಲ್ದಾರ್ ಆದೇಶದ ಮೇರೆಗೆ ನಿವೇಶನವೊಂದರ ಸರ್ವೆ ಕಾರ್ಯದ ಬಂದೋಬಸ್ತ್ ಕರ್ತವ್ಯಕ್ಕೆ ತೆರಳಿದ್ದ ಪೊಲೀಸರ ಮೇಲೆ 6 ಮಂದಿ ಮಹಿಳೆಯರು ಹಲ್ಲೆ ನಡೆಸಿರುವ ಘಟನೆ ಮದ್ದೂರಿನ ಹೊರ ವಲಯದ ವೈದ್ಯನಾಥಪುರ ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ಮಹಿಳಾ ಪೊಲೀಸ್ ಪೇದೆಗಳಾದ ಗೌರಮ್ಮ, ಪೂಜಾ, ಶೃತಿ, ಸುಜಾತ, ಗಗನ್ ಹಾಗೂ ಸಂಜಯ್ ಗಾಯಗೊಂಡಿದ್ದು, ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ವೈದ್ಯನಾಥಪುರ ರಸ್ತೆಯಲ್ಲಿರುವ ಸರ್ವೆ ನಂ. 922 ನಿವೇಶನದ ಬಗ್ಗೆ ಸಚಿನ್ ಹಾಗೂ ದಿ. ಕಾಳೀರೇಗೌಡ ಎಂಬುವವರ ಮಕ್ಕಳ ನಡುವೆ ವಿವಾದವಿತ್ತು. ಈ ಬಗ್ಗೆ ತಹಶೀಲ್ದಾರ್ ಟಿ. ಎನ್. ನರಸಿಂಹಮೂರ್ತಿ ವಿವಾದಿತ ಜಮೀನು ಸರ್ವೆ ಕಾರ್ಯ ನಡೆಸಿ ವರದಿ ನೀಡುವಂತೆ ಸರ್ವೆ ಇಲಾಖೆಯ ಪೂಜಾಶ್ರೀ ಎಂಬುವರಿಗೆ ಆದೇಶ ನೀಡಿದ್ದರು.

ಸರ್ವೆ ಅಧಿಕಾರಿ ಪೂಜಾಶ್ರೀ ತಹಶೀಲ್ದಾರ್ ಆದೇಶದನ್ವಯ ಕಳೆದ ಕೆಲ ದಿನಗಳ ಹಿಂದೆ ಜಮೀನಿನ ಅಳತೆ ಮಾಡಲು ಸ್ಥಳಕ್ಕೆ ಹೋದಾಗ ದಿ. ಕಾಳೀರೇಗೌಡರ 6 ಮಂದಿ ಹೆಣ್ಣು ಮಕ್ಕಳು ಸರ್ವೆಗೆ ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸರ್ವೆ ಅಕಾರಿ ಪೂಜಾಶ್ರೀ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸರ್ವೆ ಕಾರ್ಯ ನಡೆಸುತ್ತಿದ್ದಾಗ ಮತ್ತೆ ಮಹಿಳೆಯರು ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿ ಮಾತಿನ ಚಕಮಕಿ ನಡೆಸಿದ್ದಾರೆ.
ಇದರಿಂದ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿದೆ. ಪೂಜಾಶ್ರೀ ರಕ್ಷಣೆಗೆ ಹೋದ ಮದ್ದೂರು, ಬೆಸಗರಹಳ್ಳಿ ಠಾಣೆಯ ನಾಲ್ವರು ಮಹಿಳಾ ಪೊಲೀಸ್ ಸಿಬ್ಬಂದಿಗಳ ಮೇಲೆ ಆ ಮಹಿಳೆಯರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಎಳೆದಾಡಿದ್ದಾರೆ. ಈ ಬಗ್ಗೆ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ತಾಯಿಯ ಅಗಲಿಕೆ ತಾಳಲಾರದೆ ಆತ್ಮಹತ್ಯೆ; ತಾಯಿಯ ಅಗಲಿಕೆಯ ನೋವಿನಿಂದ ಖಿನ್ನತೆಗೆ ಒಳಗಾಗಿದ್ದ ಪುತ್ರನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಮಾರಂಗೆರೆ ಗ್ರಾಮದಲ್ಲಿ ಶನಿವಾರ ಜರುಗಿದೆ.
ಗ್ರಾಮದ ಲೇ. ಸಿದ್ದರಾಮು ಪುತ್ರ ಧನ್ಯಕುಮಾರ್ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಗ್ರಾಮದ ಕೆರೆ ಬಳಿ ಮದ್ಯಕ್ಕೆ ವಿಷ ಬೆರೆಸಿಕೊಂಡು ಸೇವಿಸಿ ಅಸ್ವಸ್ಥನಾಗಿದ್ದ ಧನ್ಯಕುಮಾರ್‌ನನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಧನ್ಯಕುಮಾರ್ ತಾಯಿ ಕಳೆದ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ಬಳಿಕ ಆತ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಧನ್ಯಕುಮಾರ್ ದಿನನಿತ್ಯ ಕುಡಿತದ ಚಟಕ್ಕೆ ದಾಸನಾಗಿ ಅನಾರೋಗ್ಯಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಕೊಪ್ಪ ಪಿಎಸ್‌ಐ ಶಿವಮಲ್ಲು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರು ಡಿಕ್ಕಿ, ಪಾದಚಾರಿ ಸಾವು; ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಪಾದಚಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಟಿ.ಕಾಗೇಪುರ ಗ್ರಾಮದ ನಟರಾಜು(63) ಎಂಬುವವರು ನಿಧನರಾದವರು. ಮೇ.21ರ ರಾತ್ರಿ ಬುಗತಗಹಳ್ಳಿ ಬಳಿಯ ಕಲ್ಯಾಣ ಮಂಟಪದಲ್ಲಿ ಸಂಬಂಧಿಕರ ಮದುವೆಗೆ ಹೋಗಿ ನಡೆದುಕೊಂಡು ಮನೆಗೆ ವಾಪಾಸ್ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಟರಾಜುರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ಒಪ್ಪಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications