Ganesh chaturthi 2023: ಮಂಡ್ಯ ಜಿಲ್ಲೆಯಲ್ಲಿ ಬೆಲ್ಲದ ಗಣಪತಿ ಮೂರ್ತಿಗಳಿಗೆ ಭಾರೀ ಡಿಮ್ಯಾಂಡ್
ಮಂಡ್ಯ, ಸೆಪ್ಟೆಂಬರ್, 17: ಮಂಡ್ಯ ಬೆಲ್ಲ ಇಂಡಿಯಾದಲ್ಲೇ ಪ್ರಸಿದ್ಧಿ ಪಡೆದಿದೆ. ಅದೇ ರೀತಿ ಬೆಲ್ಲದ ಗಣಪತಿ ಮೂರ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಮಂಡ್ಯ ಬೆಲ್ಲಕ್ಕೆ ಮತ್ತಷ್ಟು ಬೆಲೆ ಬರುವಂತೆ ಮಾಡುವುದರ ಜೊತೆಗೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪ್ರೇರೇಪಿಸುವಂತಹ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಲಾಗಿದೆ.
ವೈದಿಕ ಧರ್ಮದ ಆಚರಣೆಗಳಲ್ಲಿ ಬೆಲ್ಲ ಮಹತ್ವವನ್ನು ಪಡೆದುಕೊಂಡಿದೆ. ದೇವರಿಗೆ ಬೆಲ್ಲದ ಅಚ್ಚುಗಳನ್ನಿಟ್ಟು ಪೂಜಿಸುವುದು, ಬೆಲ್ಲದಿಂದ ಆರತಿ ಬೆಳಗುವುದು ಹಿಂದಿನಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿದೆ. ಮಂಡ್ಯ ಕೀರ್ತಿ ಕಳಸದಂತಿರುವ ಬೆಲ್ಲದಿಂದ ಗಣಪತಿಯನ್ನು ತಯಾರಿಸಿ ಗಣೇಶ ಚತುರ್ಥಿ ಆಚರಣೆಗೆ ಹೊಸತನವನ್ನು ತುಂಬುವ ಪ್ರಯತ್ನ ವಿಕಸನ ಸಂಸ್ಥೆಯದ್ದಾಗಿದೆ.

ಸುಮಾರು ಅರ್ಧ ಅಡಿಯಿಂದ ಎರಡು ಅಡಿ ಎತ್ತರದವರೆಗಿನ ಗೌರಿ-ಗಣೇಶ ಮೂರ್ತಿಗಳನ್ನು ತಯಾರಿಸಿರುವ ವಿಕಸನ ಸಂಸ್ಥೆ ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಹೊಸತನದ ಆಚರಣೆಯನ್ನು ಜನರಿಗೆ ಪರಿಚಯಿಸಿದೆ. ಈ ಮಾದರಿಯ ಮುನ್ನೂರು ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದೆ. 200 ರಿಂದ 600 ರೂಪಾಯಿವರೆಗೆ ಬೆಲ್ಲದ ಗೌರಿ ಮತ್ತು ಗಣೇಶ ವಿಗ್ರಹವನ್ನು ಮಾರಾಟ ಮಾಡಲಾಯಿತು.
ಬೆಲ್ಲಕ್ಕೆ ಹೆಸರುವಾಸಿಯಾಗಿದ್ದರೂ ಗುಣಮಟ್ಟವನ್ನು ಕಾಪಾಡಿಕೊಂಡಿಲ್ಲ. ಮಂಡ್ಯ ಬೆಲ್ಲ ಎಲ್ಲೆಡೆ ತಿರಸ್ಕೃತಗೊಳ್ಳುತ್ತಿದೆ. ಕೊಳ್ಳುವವರೂ ಮುಂದೆ ಬರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಲ್ಲಕ್ಕೆ ಕಳೆದುಹೋಗಿರುವ ಗತವೈಭವವನ್ನು ಮರುಸೃಷ್ಟಿಸುವ ಪ್ರಯತ್ನ ನಡೆಸಲಾಗುತ್ತಿದೆ. ರಾಸಾಯನಿಕ ಮುಕ್ತವಾಗಿ ಬೆಲ್ಲ ತಯಾರಿಸಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ, ಗಣೇಶ ಚತುರ್ಥಿಗೆ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ಪ್ರಗತಿ ಸಾಧಿಸುವ ಕಲೆಯನ್ನು ಪರಿಚಯಿಸಿಕೊಟ್ಟಂತಾಗಿದೆ.
ನಗರದ ವಿಕಸನ ಸಂಸ್ಥೆಯವರು ಬೆಲ್ಲದಿಂದ ತಯಾರಿಸಿರುವ ಗೌರಿ-ಗಣೇಶ ವಿಗ್ರಹಗಳಿಗೆ ಸಾರ್ವಜನಿಕರು-ಅಧಿಕಾರಿಗಳು ಫಿದಾ ಆಗಿದ್ದಾರೆ. ಯಾರೂ ಮಾಡಲಾಗದ ಆಲೋಚನೆಯನ್ನು ವಿಕಸನ ಸಂಸ್ಥೆಯವರು ಮಾಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಕಸನ ಸಂಸ್ಥೆ ತಯಾರಿಸಿದ ಬೆಲ್ಲದ ಗೌರಿ-ಗಣೇಶ ವಿಗ್ರಹಗಳನ್ನು ಜಿಲ್ಲಾಡಳಿತ ಸಚಿವರು, ಶಾಸಕರಿಗೆ ಗೌರಿ-ಗಣೇಶ ಹಬ್ಬದ ನೆನಪಿನ ಕಾಣಿಕೆಯಾಗಿ ನೀಡಿದ್ದು ವಿಶೇಷವಾಗಿತ್ತು.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಆಲೆಮನೆಗಳು ಇದ್ದು, ಬೆಲ್ಲದ ಉತ್ಪನ್ನಗಳ ಮಾರಾಟದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಸಾವಯವ ಬೆಲ್ಲದ ಮಾರಾಟ ಸೇರಿದಂತೆ ಗಣಪತಿ ಮೂರ್ತಿಯನ್ನು ಬೆಲ್ಲದಲ್ಲಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಮಾರಾಟಕ್ಕಿಂತ ಪರಿಸರ ಜಾಗೃತಿ ಮೂಡಿಸುವುದು ಮುಖ್ಯ ವಿಷಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್. ನಾಗರಾಜು ತಿಳಿಸಿದ್ದಾರೆ.
ಮಂಡ್ಯದ ಹೆಮ್ಮೆ ಬೆಲ್ಲ. ಗುಣಮಟ್ಟ ಕಳೆದುಕೊಂಡಿರುವ ಬೆಲ್ಲಕ್ಕೆ ಹೊಸತನವನ್ನು ತಂದುಕೊಡುವ ಸಲುವಾಗಿ ಗೌರಿ-ಗಣೇಶ ಹಬ್ಬಕ್ಕೆ ಬೆಲ್ಲದಿಂದ ತಯಾರಿಸಿದ ಮೂರ್ತಿಗಳನ್ನು ಪರಿಚಯಿಸಲಾಗಿತ್ತು. ಇದು 2ನೇ ವರ್ಷದಲ್ಲೂ ಬೆಲ್ಲದ ಗಣಪತಿ ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಸಾರ್ವಜನಿಕರು, ರೈತರು, ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ರಾಸಾಯನಿಕ ಮುಕ್ತವಾಗಿ ಗುಣಮಟ್ಟದ ಬೆಲ್ಲ ತಯಾರಿಕೆಗೆ ರೈತರು ಮುಂದಾಗಬೇಕು. ಗಣೇಶ ಚತುರ್ಥಿಗೆ ಬೆಲ್ಲದ ಗೌರಿ-ಗಣೇಶನನ್ನು ತಯಾರಿಸಿ ಮಾರಾಟ ಮಾಡುವುದರಿಂದ ಆರ್ಥಿಕ ಪ್ರಗತಿ ಸಾಧಿಸಬಹುದು. ಬೆಲ್ಲದ ಗೌರಿ-ಗಣೇಶ ವಿಗ್ರಹಗಳನ್ನು ಒಂದು ಬಕೆಟ್ ನೀರಿನಲ್ಲಿ ವಿಸರ್ಜಿಸಿ ಕರಗಿದ ಬಳಿಕ ನೀರನ್ನು ಗಿಡಗಳಿಗೆ ಹಾಕಬಹುದು ಎಂದು ವಿಕಸನ ಸಂಸ್ಥೆ ಅಧ್ಯಕ್ಷರಾದ ಮಹೇಶ್‌ಚಂದ್ರಗುರು ತಿಳಿಸಿದರು.












Click it and Unblock the Notifications