ಸುಮಲತಾ ರಾಜ್ಯ ರಾಜಕಾರಣಕ್ಕೆ ಆರಂಭದಲ್ಲೇ ವಿಘ್ನ: ಮಂಡ್ಯ, ಮೇಲುಕೋಟೆಯಲ್ಲಿ ಸ್ಪರ್ಧಿಸಲು ರೈತ ಸಂಘದಿಂದ ವಿರೋಧ ಏಕೆ?
ಮಂಡ್ಯ, ಮೇಲುಕೋಟೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸುಮಲತಾಗೆ ರೈತ ಸಂಘ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?
ಮಂಡ್ಯ, ಫೆಬ್ರವರಿ, 03: ಸಂಸದೆ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಸ್ಪರ್ಧಿಸಲು ಆರಂಭದಲ್ಲೇ ವಿಘ್ನ ತಲೆದೂರಿದ್ದು, ಮಂಡ್ಯ ಮತ್ತು ಮೇಲುಕೋಟೆ ಕ್ಷೇತ್ರದಲ್ಲಿ ಸ್ಪರ್ಧಿಸಲು ರೈತ ಸಂಘ ಭಾರಿ ವಿರೋಧ ವ್ಯಕ್ತಪಡಿಸಿದೆ.
ಸುಮಲತಾ ವಿರುದ್ದ ತಿರುಗಿಬಿದ್ದ ರೈತಸಂಘ
ಸುಮಲತಾ ಅಂಬರೀಶ್ ಅವರು ಮಂಡ್ಯ, ಮೇಲುಕೋಟೆ ಮತ್ತು ಮದ್ದೂರು ಸೇರಿದಂತೆ ಈ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರ ಬೆಂಬಲಿಗರು ಮಂಗಳವಾರ ನಡೆಸಿದ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡಿದ್ದರು. ಆದರೆ, ಈ ಸಂಬಂಧವಾಗಿ ಸಂಸದೆ ಸುಮಲತಾ ಅಂಬರೀಶ್ ಅವರು ರಾಜ್ಯ ರಾಜಕಾರಣಕ್ಕೆ ಮರಳಿದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆಲುವಿಗೆ ರೈತಸಂಘ ಪ್ರಮುಖ ಪಾತ್ರವಹಿಸಿತ್ತು.
ಸ್ಪರ್ಧೆಗೆ ತಯಾರಾದ ರೈತಸಂಘ
ಮಂಡ್ಯ, ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘವೇ ಸ್ಪರ್ಧಿಸಲು ನಿರ್ಧರಿಸಿದ್ದು, ಮಂಡ್ಯದಿಂದ ಮಧುಚಂದನ್, ಮೇಲುಕೋಟೆಯಿಂದ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆ ಖಚಿತವಾಗಿದೆ. ಇತ್ತೀಚೇಗಷ್ಟೇ ಸರ್ವೋದಯ ಕರ್ನಾಟಕ ಪಕ್ಷವು ಇವರಿಬ್ಬರ ಹೆಸರನ್ನು ಘೋಷಣೆ ಮಾಡಿತ್ತು. ಟಿಕೆಟ್ ಘೋಷಣೆಗೂ ಮುನ್ನವೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಮಧುಚಂದನ್ ಅವರು ಕ್ಷೇತ್ರದಾದ್ಯಂತ ಸಂಚರಿಸಿ ರೈತ ಸಂಘಟನೆಯನ್ನು ಬಲಾಢ್ಯಗೊಳಿಸಿದ್ದಾರೆ. ಅಲ್ಲದೆ, ಕೀರೆಮಡಿ ಮಹಿಳಾ ಒಕ್ಕೂಟವೂ ಸಹ ಇವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಸಂಪೂರ್ಣ ಬೆಂಬಲ ನೀಡಿ ಗೆಲ್ಲಿಸಿಕೊಂಡಿರುವುದರಿಂದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳಿಗೆ ಸುಮಲತಾ ಅಂಬರೀಶ್ ಅವರು ಬೆಂಬಲ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಋಣ ತೀರಿಸುವ ಮಾತನಾಡಿದ್ದ ಸುಮಲತಾ ಅಂಬರೀಶ್, ತಮ್ಮ ಬೆಂಬಲಿಗರನ್ನು ಮುಂದೆ ಬಿಟ್ಟು, ಸಭೆ ನಡೆಸಿಸಿ ಉಲ್ಟಾ ಹೊಡೆದರಾ? ಎನ್ನುವ ಪ್ರಶ್ನೆ ರೈತ ಸಂಘದ ವಲಯದಲ್ಲಿ ಕೇಳಿಬರುತ್ತಿದೆ.
ಮಾತು ತಪ್ಪಿದರೆ ಸಮರ ಸಾರುತ್ತೇವೆ
ಮಾತು ತಪ್ಪಿದರೆ ಸಂಸದೆ ಸುಮಲತಾ ವಿರುದ್ದವೇ ಸಮರ ಸಾರುತ್ತೇವೆ. ಈಗಾಗಲೇ ಕುಸ್ತಿ ಅಖಾಡಕ್ಕೆ ಧುಮುಕಿದ್ದೇವೆ. ನಮ್ಮ ವಿರುದ್ಧ ಯಾರೇ ಬಂದರೂ ಹೋರಾಡುತ್ತೇವೆ. ಸುಮಲತಾ ಆದರೂ ಸರಿ, ಬೇರೆ ಯಾರೇ ಆದರೂ ಸರಿ. ಸ್ಪರ್ಧೆಯಿಂದೆ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮಂಡ್ಯ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ. ಮಧುಚಂದನ್ ಹೇಳಿದ್ದಾರೆ.












Click it and Unblock the Notifications