ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ರೈತರ ವಿರೋಧ
ಬೆಂಗಳೂರು, ಫೆಬ್ರವರಿ 18 : 'ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯ ಸರ್ಕಾರ ಸರ್ವ ಪಕ್ಷ ಹಾಗೂ ರೈತ ಮುಖಂಡರ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದೊಯ್ಯಬೇಕು' ಎಂದು ಮಂಡ್ಯ ಸಂಸದ ಸಿ.ಎಸ್. ಪುಟ್ಟರಾಜು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಂಸದ ಹಾಗೂ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರ ಅಧ್ಯಕ್ಷತೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಂಸದ ಸಿ.ಎಸ್.ಪುಟ್ಟರಾಜು ಅವರು, 'ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸಮಾಧಾನಕರ ತೀರ್ಪನ್ನು ನೀಡಿದೆ. ಆದರೆ, 6 ವಾರಗಳಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಆದೇಶಿಸಿರುವುದು ರಾಜ್ಯಕ್ಕೆ ಮಾರಕವಾಗಲಿದೆ' ಎಂದರು.

'ರಾಜ್ಯಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಕರೆದು ಕಾವೇರಿ ನೀರು ನಿರ್ವಹಣಾ ಮಂಡಳಿ ರಾಜ್ಯಕ್ಕೆ ಮಾರಕವಾಗದಂತೆ ಎಚ್ಚರ ವಹಿಸಬೇಕಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಸಂಸದರೆಲ್ಲರನ್ನೂ ಒಗ್ಗೂಡಿಸಿಕೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಿದೆ' ಎಂದು ಹೇಳಿದರು.
'ನೀರು ನಿರ್ವಹಣಾ ಮಂಡಳಿ ರಚನೆಯಾದರೂ ಮೇಲುಸ್ತುವಾರಿ ಸಮಿತಿಯ ರೀತಿ ಕಾರ್ಯನಿರ್ವಹಿಸುವುದಕ್ಕಷ್ಟೇ ಸೀಮಿತವಾಗಿರುವಂತೆ ಎಚ್ಚರ ವಹಿಸಬೇಕು. ಮಂಡಳಿ ರಾಜ್ಯಕ್ಕೆ ಮಾರಕವಾಗದಂತೆ ನೋಡಿಕೊಳ್ಳಬೇಕಿದೆ' ಎಂದು ತಿಳಿಸಿದರು.
ಮೇಕೆದಾಟು ಯೋಜನೆ : ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶೀಘ್ರವೇ ಮೇಕೆದಾಟು ಯೋಜನೆಯನ್ನು ಆರಂಭಿಸಬೇಕೆಂದು ರೈತ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಯಿತು.
ಸುಪ್ರೀಂಕೋರ್ಟ್ ತೀರ್ಪು ಸಮಾಧಾನ ತಂದಿದೆ. ಈ ತೀರ್ಪಿನಿಂದಾಗಿ ರಾಜ್ಯಕ್ಕೆ 14.75 ಟಿ.ಎಂ.ಸಿ. ನೀರು ಉಳಿತಾಯವಾಗಿದ್ದು, ಇದು ಕಾವೇರಿ ಕಣಿವೆಯ ರೈತ ಪರ ಹೋರಾಟಗಾರರ ಬಹುದಿನಗಳಿಂದ ನಡೆಸುತ್ತಿರುವ ಚಳವಳಿಗೆ ಸಿಕ್ಕ ಗೆಲುವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳು ಎದುರಾಗದಿರಲು ಮೇಕೆದಾಟು ಯೋಜನೆಯೇ ಶಾಶ್ವತ ಪರಿಹಾರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಮಂಡ್ಯ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕೆರೆ ಮತ್ತು ಕಾಲುವೆಗಳ ಹೂಳು ತೆಗೆಸುವ ಮತ್ತು ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯಕ್ರಮವನ್ನು ಸರ್ಕಾರ ಶೀಘ್ರವೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಕಾವೇರಿ ಹೋರಾಟದಲ್ಲಿ ಭಾಗಿಯಾದವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಹೋರಾಟಗಾರರು ಇನ್ನೂ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸ್ಫಂದಿಸುತ್ತಿಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿ ನಿರ್ಣಯಗಳು
* ಕಾವೇರಿ ಹೋರಾಟಗರರ ಮೇಲಿನ ಮೊಕದ್ದಮೆಯನ್ನು ವಾಪಸ್ ಪಡೆಯಬೇಕು * ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಯಾಗದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು












Click it and Unblock the Notifications