ಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ: ಕೆಎಸ್‌ಆರ್‌ಟಿಸಿ ಬಸ್ ಮೇಲೆ ಕಲ್ಲು ತೂರಾಟ
ಮಂಡ್ಯ, ಆಗಸ್ಟ್ 30: ಕುಡಿದ ಮನಲಿನಲ್ಲಿ ಯುವಕರು ಸರ್ಕಾರಿ ಬಸ್‌ಗೆ ಕಲ್ಲು ತೂರಾಟ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೊಪ್ಪ ವೃತ್ತದ ಬಳಿ ನಡೆದಿದೆ. ಕುಡಿದ ಮತ್ತಿನಲ್ಲಿ ಮೈಮರೆತು ಮನಬಂದಂತೆ ವರ್ತಿಸಿ ಸರ್ಕಾರಿ ವಸ್ತುಗಳನ್ನು ಹಾನಿ ಮಾಡಿದ ಆರೋಪದ ಮೇಲೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಂಠ ಪೂರ್ತಿ ಕುಡಿದ ಯುವಕರ ತಂಡವೊಂದು ಮದ್ದೂರು ಪಟ್ಟಣದ ಕೊಪ್ಪ ವೃತ್ತದ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಲು ಮುಂದಾಗಿದ್ದಾರೆ. ಈ ವೇಳೆ ಯುವಕರ ವರ್ತನೆ ಗಮನಿಸಿದ ಬಸ್ ನಿರ್ವಾಹಕ ಯುವಕರನ್ನು ಬಸ್ ಹತ್ತಿಸಿಕೊಳ್ಳಲು ನಿರಾಕರಿಸಿದ್ದು, ಕೂಡಲೇ ರೈಟ್ ಹೇಳಿ ಚಾಲಕನನ್ನು ಅಲ್ಲಿಂದ ಹೊರಡುವಂತೆ ತಿಳಿಸಿದ್ದಾರೆ.

ಚಾಲಕ ಬಸ್ ಚಲಾಯಿಸಿದ್ದು ಯುವಕರ ಗುಂಪನ್ನು ಹತ್ತಿಸಿಕೊಳ್ಳದೇ ಬಸ್ ಮುಂದಕ್ಕೆ ಚಲಿಸಿದೆ. ಇದರಿಂದ ಕೋಪಗೊಂಡ ಯುವಕರು ಹಿಂದಿನಿಂದ ಮುಂದೆ ಹೋಗುತ್ತಿದ್ದ ಬಸ್‌ಗೆ ಕಲ್ಲು ತೂರಾಟ ನಡೆಸಿದ್ದಾರೆ. ಮನಬಂದಂತೆ ವರ್ತಿಸಿರುವ ಯುವಕರು ಕೈಗೆ ಸಿಕ್ಕಿದ್ದಿನ್ನು ಬಸ್‌ಗೆ ಎಸೆದಿದ್ದಾರೆ. ಇದರಿಂದ ಬಸ್‌ನ ಗ್ಲಾಸ್ ಪುಡಿ..ಪುಡಿಯಾಗಿದ್ದು, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಯುವಕರ ಪುಂಡಾಟ ಕಂಡ ಬಸ್ ಚಾಲಕ ಹಾಗೂ ನಿರ್ವಾಹಕ ತಕ್ಷಣ ಬಸ್ ನಿಲ್ಲಿಸಿ ಯುವಕರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ನಾಲ್ವರು ಯುವಕರು ಸ್ಥಳದಿಂದ ಪರಾರಿಯಾಗಿದ್ದು, ಓರ್ವ ಯುವಕನನ್ನು ಪ್ರಯಾಣಿಕರ ಸಹಾಯದಿಂದ ಹಿಡಿದು ಪೊಲೀಸರಿಗೊಪ್ಪಿಸಲಾಗಿದೆ. ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಕ್ಕಿಬಿದ್ದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪರಾರಿಯಾದ ಉಳಿದ ನಾಲ್ವರು ಯುವಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೈಸೂರಿನಲ್ಲಿ ಉಡ ಮಾರಾಟಕ್ಕೆ ಯತ್ನ: ವ್ಯಕ್ತಿ ಬಂಧನ

ಮೈಸೂರು: ಉಡ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಹುಣಸೂರು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಕ್ಕಹುಣಸೂರಿನಲ್ಲಿ ವ್ಯಕ್ತಿಯೊಬ್ಬ ಉಡ ಹಿಡಿದು ಮಾರಾಟ ಮಾಡಲು ಯತ್ನಿಸಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅರಣ್ಯಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿ ಉಡವನ್ನು ರಕ್ಷಿಸಿದ್ದಾರೆ. ಹುಣಸೂರು ತಾಲೂಕಿನ ಪಕ್ಷಿರಾಜಪುರದ ನಿವಾಸಿ ದೇವಕಾರಿ (54) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ದೇವಕಾರಿ ಉಡ ಮಾರಲು ಹೋಗಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.












Click it and Unblock the Notifications