ಕದಲೂರು ಉದಯ್‌ಗೆ ಕಾಂಗ್ರೆಸ್ ಮಣೆ: ಟಿಕೆಟ್ ನಿರೀಕ್ಷೆಯಲ್ಲಿದ್ದ ಗುರುಚರಣ್ ಮುಂದಿನ ನಡೆಯೇನು?
ಮಂಡ್ಯ, ಏಪ್ರಿಲ್ 17: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚುನಾವಣೆಗೆ 6 ತಿಂಗಳು ಮುನ್ನವೇ ಮದ್ದೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಗುರುಚರಣ್ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದರೂ ಅಂತಿಮವಾಗಿ ಉದ್ಯಮಿ ಕದಲೂರು ಉದಯ್ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಎಸ್.ಎಂ. ಕೃಷ್ಣ ಕುಟುಂಬದ ತೀವ್ರ ಲಾಬಿಯ ನಡುವೆಯೂ ಉದ್ಯಮಿ, ಸಮಾಜ ಸೇವಕ ಕದಲೂರು ಉದಯ್ ಕೈ ಸೇರಿದ್ದು ವಿಶೇಷವಾಗಿದೆ.

ಕಳೆದ ಹಲವು ವರ್ಷಗಳಿಂದಲೂ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಹಿಡಿತವನ್ನು ಸಾಧಿಸಿಕೊಂಡು ಬಂದಿದ್ದ ಎಸ್.ಎಂ. ಕೃಷ್ಣ ಕುಟುಂಬ ಈ ಬಾರಿ ಶತಾಯ ಗತಾಯ ಗುರುಚರಣ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲೇಬೇಕೆಂಬ ಹಟಕ್ಕೆ ಬಿದ್ದಿತ್ತು. ಹತ್ತಿರದ ಸಂಬಂಧಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಸ್ವತಃ ಎಸ್.ಎಂ.ಕೃಷ್ಣ ಅವರೇ ಒತ್ತಡ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಮದ್ದೂರು ಕ್ಷೇತ್ರದ ಟಿಕೆಟ್ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು.
ಕಳೆದ ಕೆಲವು ತಿಂಗಳಿಂದಷ್ಟೇ ಮದ್ದೂರು ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಹೆಸರು ಗಳಿಸಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದ ಕದಲೂರು ಉದಯ್ ಪಕ್ಷೇತರವಾಗಿದ್ದುಕೊಂಡೇ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿದ್ದರು. ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದಿದ್ದರೂ ಸ್ವಸಾಮರ್ಥ್ಯದ ಹೋರಾಟದ ಮೂಲಕ ಉದಯ್ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ದೂರಿನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ಗುರುಚರಣ್
ಚುನಾವಣೆಗೂ ಮುನ್ನವೇ ಎಸ್. ಗುರುಚರಣ್ ಅವರೇ ಮದ್ದೂರು ಕ್ಷೇತ್ರದ ಅಭ್ಯರ್ಥಿ ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದ್ದರಿಂದ, ಗುರುಚರಣ್ ಅಂದಿನಿಂದಲೂ ಕ್ಷೇತ್ರಾದ್ಯಂತ ಪ್ರಚಾರ ಕೈಗೊಂಡು, ಹಳ್ಳಿ ಹಳ್ಳಿಗೂ ಹೋಗಿ ಮತ ಯಾಚಿಸಿದ್ದರು. ಅಲ್ಲದೇ, ಕ್ಷೇತ್ರದ ಹಾಲು ಉತ್ಪಾದಕರಿಗೆ ಹಾಲಿನ ಕ್ಯಾನ್‌ಗಳನ್ನು ವಿತರಿಸಿ, ತನಗೆ ಮತ ಹಾಕುವಂತೆ ಮನವಿ ಮಾಡಿದ್ದರು.
ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಮತ ಯಾಚಿಸುತ್ತಿದ್ದ ಗುರುಚರಣ್ ಟಿಕೆಟ್‌ನಲ್ಲಿ ಯಾವುದೇ ಗೊಂದಲ ಇಲ್ಲ. ನನಗೆ ವರಿಷ್ಠರು ಟಿಕೆಟ್ ನೀಡಲಿದ್ದು, ತನ್ನನ್ನು ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡಿದ್ದರು. ಆದರೆ, ಕೊನೆಯ ಹಂತದಲ್ಲಿ ಗುರುಚರಣ್‌ಗೆ ಟಿಕೆಟ್ ಕೈ ತಪ್ಪಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಉದಯ್
ಕೆಲವು ತಿಂಗಳಿಂದಷ್ಟೇ ಮದ್ದೂರು ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಉದಯ್ ಇತ್ತೀಚೆಗಷ್ಟೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ 'ಕೈ' ಹಿಡಿದಿದ್ದರು. ನಂತರ ಕಾಂಗ್ರೆಸ್ ಪರ ಪ್ರಚಾರ ಕೈಗೊಂಡಿದ್ದ ಉದಯ್, ನಾನು ರಾಜಕೀಯ ಮಾಡಲು ಕಾಂಗ್ರೆಸ್ ಪಕ್ಷ ಸೇರಿಲ್ಲ. ಟಿಕೆಟ್ ಆಕಾಂಕ್ಷಿಯೂ ಅಲ್ಲ ಎಂದು ತಿಳಿಸಿದ್ದರು. ಆದರೆ, 2ನೇ ಪಟ್ಟಿಯಲ್ಲಿ ಉದಯ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿರುವುದು ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈ ಬಗ್ಗೆ ಮದ್ದೂರು ಕಾಂಗ್ರೆಸ್ ಅಭ್ಯರ್ಥಿ ಉದಯ್ ಮಾತನಾಡಿದ್ದು, ನಾನು ಟಿಕೆಟ್‌ಗಾಗಿ ವರಿಷ್ಠರ ಮೇಲೆ ಯಾವುದೇ ಒತ್ತಡ ಹಾಕಿರಲಿಲ್ಲ. ನಾನು ಯಾವುದೇ ರಾಜಕೀಯ ಕುಟುಂಬದಿಂದ ಬಂದವನಲ್ಲ, ಸಾಮಾನ್ಯ ಕುಟುಂಬದಿಂದ ಬಂದವನಾಗಿದ್ದು, ನನ್ನ ಸಮಾಜಸೇವೆ, ಚಟುವಟಿಕೆ ನೋಡಿ ಕೆಪಿಸಿಸಿ ಅಧ್ಯಕ್ಷರು ಟಿಕೆಟ್ ನೀಡಿದ್ದಾರೆ. ಈ ಬಾರಿ ಮದ್ದೂರು ಕ್ಷೇತ್ರದಲ್ಲಿ ಗೆದ್ದು ಪಕ್ಷವನ್ನು ಬೆಳೆಸಲು ಮತ್ತು ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಇನ್ನು ಟಿಕೆಟ್ ಕೈ ತಪ್ಪಿರುವ ಬಗ್ಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಗುರುಚರಣ್ ಮಾತನಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನನಗೆ ಟಿಕೆಟ್ ಘೋಷಣೆ ಮಾಡಿದ್ದು ನಿಜ. ಆದರೆ, ಇಂದು ಅನಿರೀಕ್ಷಿತವಾಗಿ ಕದಲೂರು ಉದಯ್ ಅವರಿಗೆ ನೀಡಿರುವುದು ನನಗೂ ಅಚ್ಚರಿಯಾಗಿದೆ. ನನ್ನ ಅಭಿಮಾನಿಗಳು ಹಾಗೂ ಕಾರ್ಯಕತರ ಜೊತೆ ಚರ್ಚಿಸಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ.
2008ರಿಂದಲೂ ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ತೀವ್ರ ಹೋರಾಟ ನಡೆಸುತ್ತಿದ್ದು, ಈ ಬಾರಿಯಾದರೂ ಕದಲೂರು ಉದಯ್ ಅವರ ಮೂಲಕ ಗೆಲ್ಲುವುದೇ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications