Mandya: ಹಣ ಪಡೆದು ಕಾಂಗ್ರೆಸ್ ಟಿಕೆಟ್ ನೀಡಿದೆ; ಸಂಸದೆ ಸುಮಲತಾ ಆರೋಪ
ಮಂಡ್ಯ: ಚುನಾವಣೆಯಲ್ಲಿ ಟಿಕೆಟ್ ನೀಡಲು ಕಾಂಗ್ರೆಸ್‌ನಲ್ಲಿ ಹಣ ಪಡೆಯುವ ಸಂಸ್ಕೃತಿ ಇದೆ ಎಂದು ಮಂಡ್ಯ ಸಂಸದೆ ಸುಮಲತಾ ಆರೋಪ ಮಾಡಿದ್ದಾರೆ. ಪಕ್ಷದ ಸದಸ್ಯತ್ವ ಪಡೆಯದವರನ್ನು ಮಂಡ್ಯ ಅಭ್ಯರ್ಥಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೂದನೂರ ಉತ್ಸವ ಸರ್ಕಾರಿ ಹಣದಲ್ಲಿ ನಡೆದಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಎಂದು ಪರಿಚಯ ಮಾಡುತ್ತಾರೆ, ಸರ್ಕಾರಿ ಹಣ ಬಳಸಿ ನಿಮ್ಮ ಅಭ್ಯರ್ಥಿ ಪರಿಚಯಿಸುತ್ತೀರಾ? ಹಾಗಾದರೆ ನೀವು ಹೇಗೆ ಎಲೆಕ್ಷನ್ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ದುಡ್ಡಿರುವವರಿಗೆ ಮಾತ್ರ ಮಣೆ ಹಾಕುತ್ತಾರೆ, ಮಂಡ್ಯ ಜನ ದಡ್ಡರಲ್ಲ, ಯಾವ ಕಾರಣಕ್ಕೆ ಅಭ್ಯರ್ಥಿ ಮಾಡುತ್ತಿದ್ದಾರೆ ಅನ್ನೋದು ಗೊತ್ತಿದೆ. ದುಡ್ಡಿನಿಂದ ಮಂಡ್ಯ ಜನರನ್ನ ಕೊಂಡುಕೊಳ್ಳಲು ಆಗಲ್ಲ ಎಂದು ಹೇಳಿದರು.
ಬಿಜೆಪಿಯಿಂದ ಟಿಕೆಟ್ ಸಿಗುತ್ತೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಂತಹ ನಾಯಕ ಸಿಕ್ಕಿರುವುದು ದೇಶದ ಸೌಭಾಗ್ಯ, ಬಿಜೆಪಿ ಪಕ್ಷದಿಂದ ನಾನು ಸಂಸದೆ ಆದರೆ ಅವರ ಕೈ ಬಲಪಿಡಿಸಿದಂತಾಗುತ್ತದೆ, ಟಿಕೆಟ್ ಸಿಗುತ್ತದೆ ಎಂಬುವ ವಿಶ್ವಾಸ ನನಗಿದೆ ಎಂದು ಹೇಳಿದರು.
ಅಗತ್ಯವಿದ್ದಾಗಲೆಲ್ಲಾ ನಾನು ಮಂಡ್ಯಕ್ಕೆ ಬಂದಿರುವುದು ನಿಜ, ಪಾರ್ಲಿಮೆಂಟ್ ಇದ್ದಾಗ ಮಂಡ್ಯಕ್ಕೆ ಬಂದಿಲ್ಲ. ಲೋಕಸಭಾ ಅವಧಿ ಮುಗೀತ ಬರುತ್ತಿದೆ. ಈಗ ಸಂಸದರ ನಿಧಿ ಬಳಸಿ ಕೆಲಸ ಆರಂಭಿಸಲಿಲ್ಲ ಎಂದರೆ ನೀತಿ ಸಂಹಿತೆ ಬರಲಿದೆ. ಆ ಕಾರಣಕ್ಕಾಗಿ ಹೆಚ್ಚು ಮಂಡ್ಯಕ್ಕೆ ಭೇಟಿ ಮಾಡಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಮೈತ್ರಿ ಟಿಕೆಟ್ ವಿಚಾರದಲ್ಲಿ ಬಿಜೆಪಿ ಪಕ್ಷವು ಘೋಷಣೆ ಮಾಡುವವರೆಗೂ ಯಾವುದೂ ಫೈನಲ್ ಆಗುವುದಿಲ್ಲ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ಎಂಬುದು ಅದು ನನ್ನ ವೈಯಕ್ತಿಕ ವಿಚಾರ. ಆದರೆ ಪಕ್ಷದಿಂದ ಬರುವುದೆ ಅಧಿಕೃತ ಘೋಷಣೆಯಾಗಲಿದೆ. ಸಂಸದೆಯಾಗಿ ಸುಮಲತಾ ಕಾರ್ಯವೈಖರಿ ನೋಡಿ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ವಿಶ್ವಾಸವೂ ಇದೆ ಎಂದರು.
ಕಳೆದ ಎಂಪಿಗಳು ಹಾಗೂ ನನ್ನ ಕೆಲಸಕ್ಕೂ ವ್ಯತ್ಯಾಸವಿದೆ, ನರೇಂದ್ರ ಮೋದಿ ಅವರ ವಿಷನ್, ಅವರು ಕೆಲಸ ಮಾಡುವ ರೀತಿ, ಅವರ ಅಭಿವೃದ್ಧಿ ಮಂತ್ರ, ಪ್ರಧಾನ ಸೇವಕ ಎಂದು ಮೋದಿ ಅವರೆ ಹೇಳಿಕೊಳ್ಳುತ್ತಾರೆ, ಬಿಜೆಪಿ ಪಕ್ಷದಿಂದ ಎಂಪಿ ಆದರೆ ಮೋದಿ ಅವರ ಕೈ ಬಲಪಡಿಸಿದಂತಾಗುತ್ತದೆ ಎಂದರು.
ಬಿಜೆಪಿಗೆ ಸೇರದ ಬಗ್ಗೆ ಹೇಳಿದ್ದೇನು?
ಬಿಜೆಪಿ ಪಕ್ಷಕ್ಕೆ ಸೇರದಿರುವುದು ಟೆಕ್ನಿಕಲ್ ಕಾರಣಕ್ಕಾಗಿ. ಈ ಅವಧಿ ಮುಗಿದ ಮೇಲೆ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ, ಈ ವಿಚಾರ ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ, ಸ್ಮಾರ್ಟ್ ಸಿಟಿ ಮಾಡುವ ವಿಚಾರದಲ್ಲಿ ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದಿದ್ದೇನೆ. ಇಂತಿಷ್ಟು ಜನಸಂಖ್ಯೆ ಇರಬೇಕು ಎಂಬುದು ಇದೆ. ಸ್ಮಾರ್ಟ್ ಸಿಟಿಗೆ ಬೇಕಾದ ಮಾನದಂಡಗಳು ನಮ್ಮಲ್ಲಿಲ್ಲ ಎಂದರು.
ಹನಕೆರೆ ಅಂಡರ್ ಪಾಸ್ ಅಪ್ರೂವಲ್ ಆಗಿದೆ. ಸಚಿವರಿಂದ ಸಹಿ ಬಾಕಿ ಇದೆ ಅಷ್ಟೇ. ಮಂಡ್ಯ ಶಾಸಕರು ಬಹಳಷ್ಟು ಉತ್ಸುಕರಾಗಿದ್ದಾರೆ. ಆರಂಭವಾಗುವ ಕಾಮಗಾರಿಗೂ ಕ್ರೆಡಿಟ್ ತಗೋಬೇಕು ಅಂತಿದ್ದಾರೆ. ಹನಕೆರೆ ಅಂಡರ್ ಪಾಸ್ ವಿಚಾರದಲ್ಲಿ ಸಾಕಷ್ಟು ಸಭೆ ಮಾಡಿದ್ದೀನಿ, ಸ್ಲಂ ಬೋರ್ಡ್ ವಿಚಾರದಲ್ಲಿ ನನ್ನ ಶ್ರಮವಿತ್ತು. ಹಕ್ಕು ಪತ್ರ ಕೊಡಿಸುವಲ್ಲಿ ಶ್ರಮಿಸಿದ್ದೆ. ಈಗ ಬಂದು ಉದ್ಘಾಟನೆ ಅಂತಾರೆ. ಆಗಿರುವ ಕೆಲಸಗಳನ್ನು ನಾನೆ ಮಾಡಿದ್ದೇನೆ ಎನ್ನಬೇಡಿ? ಹಸಿ ಸುಳ್ಳನ್ನ ಜನರ ಮುಂದಿಡಬೇಡಿ. ನೀವು ಬಂದ 6 ತಿಂಗಳಲ್ಲಿ ಎಲ್ಲಾ ಕೆಲಸ ಮಾಡಿಬಿಟ್ಟರಾ ಎಂದು ಪ್ರಶ್ನಿಸಿದರು.












Click it and Unblock the Notifications