Breaking: ಶಿವಮೊಗ್ಗದ ಹರ್ಷ ಹತ್ಯೆ ಆರೋಪಿಗಳ ಸುಳಿವು ಲಭ್ಯ
ಬೆಂಗಳೂರು, ಫೆಬ್ರವರಿ 21: ಶಿವಮೊಗ್ಗದಲ್ಲಿ ಭಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸುಳಿವುಗಳನ್ನು ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹರ್ಷ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಪೊಲೀಸರ ತನಿಖೆ ವೇಳೆ ಸಾಕಷ್ಟು ಸುಳಿವುಗಳನ್ನು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ.
Koo Appನಿನ್ನೆ ರಾತ್ರಿ ನಮ್ಮ ಸಂಘಟನೆಯ ಕಾರ್ಯಕರ್ತ ಹರ್ಷ ಅವರನ್ನು ಹತ್ಯೆಗೈದಿರುವವರ ಬಗ್ಗೆ ಸುಳಿವು ಸಿಕ್ಕಿದ್ದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ @BJP4Karnataka ಸರ್ಕಾರ ಬದ್ಧವಾಗಿದೆ. ಈ ಸಂದರ್ಭದಲ್ಲಿ ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳದೇ ಶಾಂತಿಯುತವಾಗಿ ವರ್ತಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. - Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 21 Feb 2022
ಶಿವಮೊಗ್ಗದ ಘಟನೆ ಬೆನ್ನಲ್ಲೇ ಮುಂದೆ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಆರೋಪಿಗಳು ಯಾರೇ ಆಗಿದ್ದರೂ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯನವರ ಮಾತು ಯಾವಾಗಲೂ ತರ್ಕಬದ್ಧವಾಗಿ ಇರುವುದಿಲ್ಲ. ಅವರು ತರ್ಕವನ್ನು ಬಿಟ್ಟು ಮಾತನಾಡುತ್ತಾರೆ ಎಂದರು.
ಏನಿದು ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ?:
ಶಿವಮೊಗ್ಗ ನಗರದ ಎನ್.ಟಿ. ರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಸಮೀಪದ ಭಾರತೀ ಕಾಲೋನಿಯಲ್ಲಿ ಭಾನುವಾರ ರಾತ್ರಿ ಯುವಕರ ಗುಂಪೊಂದು ಭಜರಂಗ ದಳ ಕಾರ್ಯಕರ್ತ ಹರ್ಷನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ನಡೆಸಿದ ಹಲ್ಲೆಯಿಂದಾಗಿ ಹೊಟ್ಟೆ, ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಹರ್ಷನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ 22 ವರ್ಷದ ಹರ್ಷ ಮೃತಪಟ್ಟಿದ್ದಾನೆ.
ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣ:
ಕಳೆದ ಐದು ವರ್ಷಗಳಿಂದ ಭಜರಂಗ ದಳದಲ್ಲಿ ಗುರುತಿಸಿಕೊಂಡಿದ್ದ ಹರ್ಷ ಹತ್ಯೆಗೆ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ರಾತ್ರೋರಾತ್ರಿ ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದಾದ್ಯಂತ ಅಂಗಡಿ, ಹೋಟೆಲ್ ಬಂದ್ ಮಾಡಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಫೆಬ್ರವರಿ 23 ರಾತ್ರಿ 9 ಗಂಟೆವರೆಗೂ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ಜನರು ಗುಂಪುಗೂಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications