ಕಾವೇರಿ ವಿವಾದ: ಸಿಎಂ, ಡಿಸಿಎಂ ನರಸತ್ತ ಹೇಡಿಗಳಾಗಿದ್ದಾರೆ, ಆದ್ದರಿಂದ ಅ.10ಕ್ಕೆ ಕರ್ನಾಟಕ-ತಮಿಳುನಾಡು ಗಡಿ ಬಂದ್: ವಾಟಾಳ್
ಮದ್ದೂರು, ಅಕ್ಟೋಬರ್, 05: ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 10ರಂದು ಕರ್ನಾಟಕ-ತಮಿಳುನಾಡು ಗಡಿ ಬಂದ್ ಮಾಡಿ ಚಳವಳಿ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಗುರುವಾರ ಹೇಳಿದರು.
ಪಟ್ಟಣದ ಸಂಜಯ ಚಿತ್ರಮಂದಿರದ ಬಳಿ ತಮಿಳುನಾಡಿಗೆ ಕಾವೇರಿ ಕೊಳ್ಳದಿಂದ ನೀರು ಬಿಡದಂತೆ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರಿನಿಂದ ಕೆ.ಆರ್.ಎಸ್. ಮುತ್ತಿಗೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸದೇ ಹೋದರೆ, ರೈತರು ಮತ್ತು ಕನ್ನಡಪರ ಹೋರಾಟಗಾರರು ಕರ್ನಾಟಕ-ತಮಿಳುನಾಡು ಸಂಪರ್ಕಿಸುವ ಹೊಸೂರು, ಚಾಮರಾಜನಗರ ಹಾಗೂ ಕನಕಪುರ ಗಡೀ ಭಾಗಗಳಲ್ಲಿ ಅಕ್ಟೋಬರ್ 10ರಂದು ಬಂದ್ ಮಾಡುವ ಮೂಲಕ ಚಳವಳಿ ನಡೆಸುತ್ತೇವೆ. ಈ ವಿಚಾರವಾಗಿ ನಾವು ಜೈಲಿಗೆ ಹೋಗಲೂ ಸಿದ್ಧ ಎಂದು ಘೋಷಿಸಿದರು.

ಕಾವೇರಿ ವಿಚಾರದಲ್ಲಿ ತಮಿಳುನಾಡು ರಾಜಕಾರಣಿಗಳು ಕರ್ನಾಟಕದ ವಿರುದ್ಧ ದ್ವೇಷಾಸೂಯೆ ಸಾಧಿಸುತ್ತಿದ್ದಾರೆ. ಬ್ಲಾಕ್ ಮೇಲ್ ಮಾಡುವುದನ್ನು ಬಿಡಬೇಕು. ಇಲ್ಲವಾದಲ್ಲಿ ಕನ್ನಡಿಗರಿಂದ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆ.ಆರ್.ಎಸ್. ಜಲಾಶಯ ಮುತ್ತಿಗೆ ಕಾರ್ಯಕ್ರಮಕ್ಕೆ ರೈತರು ಮತ್ತು ಕನ್ನಡ ಸಂಘಟನೆಗಳ ಹೋರಾಟಗಾರರು ಬೆಂಬಲ ನೀಡುತ್ತಿರುವುದು ನಮ್ಮ ಹೋರಾಟಕ್ಕೆ ಸ್ಫೂರ್ತಿ ತಂದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವರುಗಳು ನರಸತ್ತ ಹೇಡಿಗಳಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ನೀರಿನ ವಿಚಾರದಲ್ಲಿ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಕುತ್ತಿಗೆವರೆಗೆ ಮಣ್ಣು ಮುಚ್ಚಿಕೊಂಡು ವಿನೂತನ ಪ್ರತಿಭಟನೆ
ಮತ್ತೊಂದೆಡೆ ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ಅವರು ಹೊಲದ ಗುಂಡಿಯಲ್ಲಿ ಕುತ್ತಿಗೆ ತನಕ ಮಣ್ಣು ಮುಚ್ಚಿಕೊಂಡು ವಿನೂತವಾಗಿ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ಮಾಡಿ ಧಿಕ್ಕಾರ ಕೂಗಿದ್ದೆವು. ಆದರೆ ಈಗ ಅವರಿಗೆ ಜಯವಾಗಲಿ ಎನ್ನುತ್ತಿದ್ದೇವೆ. ಜೊತೆಗೆ ಡಿ.ಕೆ.ಶಿವಕುಮಾರ್ ಅವರಿಗೂ ಜಯವಾಗಲಿ ಎನ್ನುತ್ತೇವೆ. ಅವರು ಈ ರಾಜ್ಯದಲ್ಲಿ ಸುಖ ಸಂತೋಷದಿಂದ ಚೆನ್ನಾಗಿ ಬಾಳಲಿ ಎಂದರು.
ತಮಿಳುನಾಡಿಗೆ ನೀರು ಬಿಟ್ಟ ಸಿದ್ದರಾಮಯ್ಯ ಅವರಿಗೆ ಜಯವಾಗಲಿ, ಮಂಡ್ಯ ಜಿಲ್ಲೆಯ ಆರು ಶಾಸಕರಿಗೆ ಜಯವಾಗಲಿ ಎನ್ನುತ್ತೇವೆ. ಇಲ್ಲಿವರೆಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗುತ್ತಿದ್ದೆವು. ರೈತ ಪರವಾಗಿ ಹೋರಾಟ ಎಂದಿಗೂ ಜೀವಂತವಾಗಿರುತ್ತದೆ. ನಿಮ್ಮ ಸರ್ಕಾರವನ್ನು ಹೊಗಳಿದ್ದೇವೆ. ಇನ್ನಾದರೂ ನೀರು ನಿಲ್ಲಿಸಬೇಕು ಎಂದರು.
ಬೆಳೆ ಉಳಿಸಿಕೊಡಿ, ರೈತರನ್ನು ಜೀವ ಸಮೇತ ಹೂಳುಹಾಕಿ ಸಮಾಧಿ ಕಟ್ಟುತ್ತಿದ್ದೀರಾ ಇದು ಸರಿಯಲ್ಲ. ಇನ್ನು ಮುಂದೆಯಾದರೂ ರೈತರ ಪರವಾಗಿ ನಿಲ್ಲಬೇಕು. ಆ ಮೂಲಕ ತಮಿಳುನಾಡಿಗೆ ನೀರು ಹರಿಯುತ್ತಿರುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಮುಖಂಡರಾದ ಲಕ್ಷ್ಮಣ್, ಜಯಸ್ವಾಮಿ, ಮಹದೇವಯ್ಯ, ಪುಟ್ಟರಾಜು, ಶಶಿಕುಮಾರ್ ಆರಾಧ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications