ಕಾವೇರಿ ಹೋರಾಟಕ್ಕೆ ವಿದ್ಯಾರ್ಥಿಗಳ ಸಾಥ್: ಸಂಸದೆ ಸುಮಲತಾ ಸೇರಿ ಜನಪ್ರತಿನಿಧಿಗಳಿಗೆ ತರಾಟೆ
ಮಂಡ್ಯ, ನವೆಂಬರ್ 02: ತಮಿಳುನಾಡಿಗೆ ನಿರಂತರ ನೀರು ಹರಿಸುವಂತೆ ಮತ್ತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರ ಹಾಗೂ ಕರ್ನಾಟಕದ ಹಿತ ಕಾಪಾಡುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ 59ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಕೂಡ ಚಳವಳಿ ಮುಂದುವರಿದಿದ್ದು, ರೈತ ಪರ ಹೋರಾಟಕ್ಕೆ ವಿದ್ಯಾರ್ಥಿಗಳು ಬೆಂಬಲ ನೀಡಿದ್ದಾರೆ. ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.

ಕಾವೇರಿ ಹೋರಾಟಗಾರರ ಜೊತೆಗೂಡಿದ ವಿದ್ಯಾರ್ಥಿಗಳು ಬೆಂಗಳೂರು ಮೈಸೂರು ಹೆದ್ದಾರಿಗೆ ಇಳಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಮೇಘನಾ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಆದ ಒಪ್ಪಂದ ಸ್ವಾತಂತ್ರ ನಂತರ ಮುಂದುವರೆದಿದೆ. ಇದುವರೆಗೆ ನಮ್ಮನ್ನ ಹಲವು ಸರ್ಕಾರಗಳು ಆಳ್ವಿಕೆ ಮಾಡಿವೆ ಆದರೆ ನ್ಯಾಯ ದೊರಕಿಸಿಕೊಡುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದು ಹಲವು ಭರವಸೆಗಳನ್ನು ನೀಡಿ ರೈತರ ಹಿತ ಕಾಪಾಡುವುದಾಗಿ ಹೇಳಿದ್ದಾರೆ. ಆದರೆ ಅವರು ವಿಧಾನ ಸೌಧ ತಲುಪುತ್ತಿದ್ದಂತೆ ಆಡಳಿತದಲ್ಲಿ ತಲ್ಲಿನರಾಗಿ ಇದನ್ನು ಮರೆತು ಬಿಡುತ್ತಾರೆ. ಚುನಾಯಿತ ಜನಪ್ರತಿನಿಧಿಗಳು ಕಾವೇರಿ ವಿಚಾರವಾಗಿ ದನಿ ಎತ್ತಬೇಕಾಗಿದೆ ಎಂದರು.
ನೀರು ಪ್ರಕೃತಿದತ್ತ ಕೊಡುಗೆ, ನೀರು ಇದ್ದಾಗ ತಾನೇ ತಾನಾಗಿ ಹರಿದು ಹೋಗಿದೆ, ಆದರೆ ತಮಿಳುನಾಡು ಸಂಕಷ್ಟಕಾಲದಲ್ಲಿ ನೀರಿಗಾಗಿ ಹಠಮಾರಿ ಧೋರಣೆ ತಾಳುತ್ತಿರುವುದು ಸರಿಯಲ್ಲ ಎಂದರು.
ಸಂಸದೆ ಸುಮಲತಾ ಅಂಬರೀಶ್ ಕಾವೇರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಂಡ್ಯ ಜಿಲ್ಲೆಯನ್ನು ಮತ ಪಡೆದು ಚುನಾಯಿತರಾಗಲು, ಮಗನ ಬೀಗರ ಊಟ ಮಾಡಲು ಬಳಕೆ ಮಾಡಿಕೊಂಡಂತಿದೆ. ಇನ್ನು ಮುಂದಾದರೂ ರೈತರ ಸಮಸ್ಯೆಯನ್ನ ಆಲಿಸಲು ಮುಂದಾಗಬೇಕು. ಸಂಸದರನ್ನು ಪ್ರಶ್ನಿಸುವುದು ಮತದಾರರ ಹಕ್ಕು, ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂದಿನ ಆರು ತಿಂಗಳು ಜನರ ಜೊತೆ ಬೆರೆತು ಅವಕಾಶ ಸದ್ಬಳಕೆ ಮಾಡಿಕೊಳ್ಳಿ, ಇಲ್ಲದಿದ್ದರ 2024ರ ಚುನಾವಣೆಯಲ್ಲಿ ಬದಲಾವಣೆ ಸಮಯ ಬರಬಹುದು, ಆ ಸಂದರ್ಭದಲ್ಲಿ ಮತದಾರರು ಬದಲಾವಣೆ ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.
ಮಾಂಡವ್ಯ ಸಂಸ್ಥೆಯ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲ ಭವಾನಿ ಶಂಕರ್ ಉಪನ್ಯಾಸಕರಾದ ಚೈತ್ರ, ಚಂದ್ರಕುಮಾರ್, ವಿದ್ಯಾರ್ಥಿ ಕಿಶನ್ ಹೋರಾಟ ಬೆಂಬಲಿಸಿ ಮಾತನಾಡಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ ಬೋರಯ್ಯ, ಅಂಬುಜಮ್ಮ ಕನ್ನಡ ಸೇನೆ ಮಂಜುನಾಥ್, ನಾರಾಯಣ್, ರೈತ ಸಂಘದ ಇಂಡವಾಳು ಚಂದ್ರಶೇಖರ್, ಮುದ್ದೇಗೌಡ ಪ್ರತಿಭಟನೆ ನೇತೃತ್ವ ವಹಿಸಿದ್ದರು.











Click it and Unblock the Notifications