ಕಾವೇರಿ ಕಣಿವೆಯ ಡ್ಯಾಂಗಳಲ್ಲಿ ನೀರಿನ ಮಟ್ಟ ಎಷ್ಟಿದೆ?
ಮಂಡ್ಯ, ಮೇ 07: ಕಳೆದ ಬಾರಿಯ ಮಳೆ ಕೊರತೆ, ಬಿರು ಬೇಸಿಗೆಯ ಪರಿಣಾಮ ಕರ್ನಾಟಕದ ಎಲ್ಲಾ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಅದರಲ್ಲೂ ಕಾವೇರಿ ಕಣಿಯ ಡ್ಯಾಂಗಳು ಖಾಲಿ ಖಾಲಿಯಾಗಿದ್ದು, ಬೇಗ ಮಳೆ ಬರಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.
ಕಾವೇರಿ ಕಣಿವೆಯ ಎಲ್ಲಾ 4 ಜಲಾಶಯಗಳು ಪ್ರಮುಖವಾದವು. ಅದರಲ್ಲಿಯೂ ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಕುಡಿಯುವ ನೀರು, ಕೃಷಿ ಉದ್ದೇಶದಿಂದ ಬಹಳ ಪ್ರಾಮುಖ್ಯತೆ ಪಡೆದಿದೆ.

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಆದರೆ ಅದರ ನೀರು ಡ್ಯಾಂಗಳಿಗೆ ಸೇರುವುದಿಲ್ಲ. ಜೂನ್‌ನಲ್ಲಿ ಆರಂಭವಾಗುವ ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದು ಬೇಗ ಡ್ಯಾಂಗಳಿಗೆ ನೀರು ಹರಿದು ಬರಲಿ ಎಂದು ಜನರು ಕಾದು ಕುಳಿತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಹಳೆ ಮೈಸೂರು ಮತ್ತು ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಕಾವೇರಿ ಕಣಿವೆಯ 4 ಜಲಾಶಯಗಳಲ್ಲಿ ಶೇ 27ರಷ್ಟು ನೀರಿನ ಸಂಗ್ರಹ ಮಾತ್ರವಿದೆ. ಕಾವೇರಿ ಕಣಿವೆಯಲ್ಲಿ ಹಾರಂಗಿ, ಹೇಮಾವತಿ, ಕೆಆರ್‌ಎಸ್, ಕಬಿನಿ ಜಲಾಶಯಗಳಿವೆ.
ಯಾವ ಡ್ಯಾಂನಲ್ಲಿ ಎಷ್ಟು ನೀರಿದೆ?; ಹಾರಂಗಿ ಜಲಾಶಯದ ಒಟ್ಟು ಟಿಎಂಸಿ ಅಡಿ ಸಾಮರ್ಥ್ಯ 8.50. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಎಂಡಿಸಿ) ಮಾಹಿತಿ ಪ್ರಕಾರ ಸದ್ಯ ಡ್ಯಾಂನಲ್ಲಿ 3.01 ಟಿಎಂಸಿ ಅಡಿ ನೀರಿನ ಸಂಗ್ರವಿದೆ.
ಹೇಮಾವತಿ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 37.10 ಟಿಎಂಸಿ ಅಡಿ. ಮೇ 6ರ ಮಾಹಿತಿಯಂತೆ ಡ್ಯಾಂನಲ್ಲಿರುವ ನೀರಿನ ಸಂಗ್ರಹ 9.31 ಟಿಎಂಸಿ ಅಡಿ. ಕಳೆದ ವರ್ಷ ಇದೇ ಸಮಯದಲ್ಲಿ ಡ್ಯಾಂನಲ್ಲಿ 17.66 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.
ಕೆಆರ್‌ಎಸ್ ಜಲಾಶಯದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 49.45 ಟಿಎಂಸಿ ಅಡಿ. ಸದ್ಯ ಡ್ಯಾಂನಲ್ಲಿ ಇರುವ ನೀರಿನ ಸಂಗ್ರಹ 10.95 ಟಿಎಂಸಿ ಅಡಿ. ಕಳೆದ ವರ್ಷ ಇದೇ ದಿನ ಡ್ಯಾಂನಲ್ಲಿ 13.36 ಅಡಿ ಟಿಎಂಸಿ ನೀರಿನ ಸಂಗ್ರಹವಿತ್ತು.
ಕಬಿನಿ ಡ್ಯಾಂನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಅಡಿ. ಸದ್ಯ ಡ್ಯಾಂನಲ್ಲಿ 6.82 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ಸಮಯದಲ್ಲಿ 4.82 ಟಿಎಂಸಿ ನೀರು ಇತ್ತು.
ಹಾರಂಗಿ ಜಲಾಶಯದ ಒಳಹರಿವು 231 ಕ್ಯುಸೆಕ್. ಹೇಮಾವತಿ ಡ್ಯಾಂನ ಒಳಹರಿವು 8 ಕ್ಯುಸೆಕ್, ಕೆಆರ್‌ಎಸ್ ಜಲಾಶಯದ ಒಳಹರಿವು 117 ಕ್ಯುಸೆಕ್ ಮತ್ತು ಕಬಿನಿ ಜಲಾಶಯದ ಒಳಹರಿವು 47 ಕ್ಯುಸೆಕ್ ಆಗಿದೆ.
ಕಾವೇರಿ ಕಣಿವೆಯ 4 ಜಲಾಶಯಗಳನ್ನು ಸೇರಿಸಿ ಒಟ್ಟು 30 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. ಇವುಗಳಲ್ಲಿ 10 ರಿಂದ 12 ಟಿಎಂಸಿ ಅಡಿ ನೀರು ಡೆಡ್ ಸ್ಟೋರೇಜ್ ಆಗಿದೆ. ಸದ್ಯ ಅಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು, ಮಂಡ್ಯ, ಮೈಸೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ.
ಕಳೆದ ವಾರದಿಂದ ಕಾವೇರಿ ಕಣಿವೆ ಜಲಾನಯನ ಪ್ರದೇಶಗಳಲ್ಲಿ ಹಿಂಗಾರು ಮಳೆಯಾಗುತ್ತಿದೆ. ಆದರೆ ಡ್ಯಾಂಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುವಷ್ಟು ನೀರು ಹರಿದು ಬಂದಿಲ್ಲ. ಕೊಡಗಿನಲ್ಲಿ ಬರಿದಾಗಿರುವ ಕಾವೇರಿ ನದಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2023ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿತ್ತು. ಆದ ಕಾರಣ ಡ್ಯಾಂಗಳು ಭರ್ತಿಯಾಗಿರಲಿಲ್ಲ. ಈ ನಡುವೆ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಕೆಆರ್‌ಎಸ್‌ನ ನೀರಿನ ಮಟ್ಟದಲ್ಲಿ ಗಣನೀಯ ಕುಸಿತ ಕಂಡುಬಂದಿತು.












Click it and Unblock the Notifications