ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಬಿಜೆಪಿಗೆ ಗೆಲುವು-ಕೆ. ಗೋಪಾಲಯ್ಯ
ಮಂಡ್ಯ, ಡಿಸೆಂಬರ್ 15: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವುದಕ್ಕೆ ಬಿಜೆಪಿ ಸಮರ್ಥವಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ರಾಜ್ಯಾದ್ಯಂತ ಸಂಘಟನೆ ಮಾಡುವ ಸಲುವಾಗಿ ಬಿಜೆಪಿ ಜನಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಜನಸಂಕಲ್ಪ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲಾಗುವುದು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗೆ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದೆ. ಅವುಗಳನ್ನು ಜನರಿಗೆ ತಲುಪಿಸುವುದು ಈ ಯಾತ್ರೆಯ ಉದ್ದೇಶ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈಗಾಗಲೇ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

ಒಕ್ಕಲಿಗರ ಮತ ಸೆಳೆಯಲು ಕಾಂಗ್ರೆಸ್ ಸಭೆ ವಿಚಾರವಾಗಿ ಮಾತನಾಡಿದ ಅವರು, ಎಲ್ಲಾ ಪಕ್ಷದಲ್ಲೂ ಅವರದ್ದೇ ಆದ ಸಮುದಾಯದ ಮತಗಳು ಇರುತ್ತವೆ. ಮೂರು ಪಕ್ಷದಲ್ಲಿ ಒಕ್ಕಲಿಗರಿದ್ದಾರೆ. ನಾನು ಕೂಡ ಒಕ್ಕಲಿಗ. ಒಕ್ಕಲಿಗರು ನನಗೆ ಮತ ಕೊಟ್ಟಿಲ್ವಾ..? ಅಂತಿಮವಾಗಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದನ್ನು ರಾಜ್ಯದ ಜನರು ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, ಗುಜರಾತ್ ಚುನಾವಣೆಯಲ್ಲಿ ಆದಂತೆಯೇ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಬಗ್ಗೆ ಬಿಜೆಪಿಗೆ ಸಂಪೂರ್ಣ ವಿಸ್ವಾಸ ಇದೆ. ಅವಧಿಗೂ ಮುನ್ನ ಚುನಾವಣೆ ನಡೆಯುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆಗಳೆಲ್ಲ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.












Click it and Unblock the Notifications