ಮಂಡ್ಯದಲ್ಲಿ ಬಾಲಕಿಗೆ ಚಾಕು ತೋರಿಸಿ ದುಷ್ಕೃತ್ಯ: ಸರ್ಕಾರಕ್ಕೆ ವಿಜಯೇಂದ್ರ ಕ್ಲಾಸ್
ಮಂಡ್ಯದಲ್ಲಿ ನಡೆದಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆ ಅತ್ಯಂತ ಹೇಯ ಹಾಗೂ ಪೈಶಾಚಿಕ ಮನಸ್ಥಿತಿಯ ವಿಕೃತರ ಅಟ್ಟಹಾಸದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಇದರ ಲಾಭ ಪಡೆಯುತ್ತಿರುವ ಸಮಾಜಘಾತುಕ ದುಷ್ಕರ್ಮಿಗಳು ಅಪ್ರಾಪ್ತರ ಮೇಲೆ ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ, ಹಾಗೂ ಹಾಡು ಹಗಲಲ್ಲೇ ದರೋಡೆಗಳು ಎಗ್ಗಿಲ್ಲದೇ ಮುಂದುವೆರೆಸಿವೆ. ಸದ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾದಿಯಾಗಿ ಜವಾಬ್ದಾರಿ ಹೊತ್ತ ಸಚಿವರೆಲ್ಲರೂ ಪವರ್ ಶೇರಿಂಗ್ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಪವರ್ ಪಾಲಿಟಿಕ್ಸ್ ರಾಜಕಾರಣದಲ್ಲಿ ಮುಳುಗಿದ್ದಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಡಳಿತ ವ್ಯವಸ್ಥೆ ಅಸ್ತಿರಗೊಳ್ಳುತ್ತಿರುವುದರ ಲಾಭ ಪಡೆಯುತ್ತಿರುವ ಅಧಿಕಾರಿಗಳಿಗೆ ಮೂಗುದಾರ ಹಾಕುವವರು ಇಲ್ಲವಾಗಿದೆ. ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಲು ಸರತೀ ಸಾಲಿನಲ್ಲಿ ನಿಂತಿದ್ದಾರೆ. ಕಾನೂನು ಸುವ್ಯವಸ್ಥೆಯ ರಕ್ಷಣೆ ದೊರೆಯದ ಅಮಾಯಕ ಜನ ಕಳ್ಳತನ, ದರೋಡೆ, ದೌರ್ಜನ್ಯ ಹಾಗೂ ಅತ್ಯಾಚಾರಗಳು ಎದುರಾಗುವ ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ದೂರಿದ್ದಾರೆ.
ಕ್ರೌರ್ಯದ ಪರಮಾವಧಿ ಮೆರೆದು ಅಪ್ರಾಪ್ತ ಬಾಲಕಿಯನ್ನು ಕೇಂದ್ರೀಕರಿಸಿಕೊಂಡಿರುವುದರ ಸಾಕ್ಷಿಯಾಗಿ ಮಂಡ್ಯದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯು ಸೇರ್ಪಡೆಗೊಂಡಿದೆ. ಈ ಕೂಡಲೇ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸರ್ಕಾರ ಕಠಿಣ ಕ್ರಮ ಜರುಗಿಸದಿದ್ದರೆ ಈ ಕಾಂಗ್ರೆಸ್ ಸರ್ಕಾರ ಸಮಾಜ ಪೀಡಕ ದುಷ್ಟರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ತೀರ್ಮಾನಕ್ಕೆ ರಾಜ್ಯದ ಜನತೆ ಬರಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಕರ್ನಾಟಕ ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿ ಜನರ ನೆರವಿಗೆ ಧಾವಿಸಲು ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಬಂದಿದೆ-ಕರ್ನಾಟಕದಲ್ಲಿ ರೇಪ್ ಹೆಚ್ಚಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ. ರಾಜ್ಯದಲ್ಲಿ ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಬಂದಿದ್ದು, ಕರ್ನಾಟಕದಾದ್ಯಂತ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದು ಸಮಾಜಘಾತುಕ ಶಕ್ತಿಗಳು ದಿನನಿತ್ಯ ತಮ್ಮ ಪೈಶಾಚಿಕ ಕೃತ್ಯಗಳನ್ನು ನಡೆಸುತ್ತಿವೆ. ಮಂಡ್ಯದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಗ್ಯಾಂಗ್ ರೇಪ್ ಅತ್ಯಂತ ಅಮಾನುಷ ಹಾಗೂ ಖಂಡನೀಯ ಎಂದಿದೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್ ಅವರ ದೈನೇಸಿ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಎಂಬುದು ಗಗನಕುಸುಮ. ನಿಮ್ಮ ದಟ್ಟ ದರಿದ್ರ ಓಲೈಕೆ ಆಡಳಿತದಲ್ಲಿ ಸ್ವಾಭಿಮಾನಿ ಕನ್ನಡಿಗರು ಇನ್ನೆಷ್ಟು ಶಿಕ್ಷೆಯನ್ನು ಅನುಭವಿಸಬೇಕು? ಎಂದು ಪ್ರಶ್ನಿಸಿದೆ.
ಕಳೆದ ಮೂರು ದಿನಗಳಲ್ಲಿ ಎರಡು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಅತ್ಯಾಚಾರ ನಡೆದಿದೆ. ರಾಯಚೂರು ಹಾಗೂ ಇಂದು ಮಂಡ್ಯದಲ್ಲಿ ನಡೆದ ಘಟನೆ ನಿಜಕ್ಕೂ ನಾಗರೀಕ ಸಮಾಜ ತಲೆ ತಗ್ಗಿಸುವಂತ ವಿಚಾರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಈ ದುಷ್ಕೃತ್ಯವೆಸಗಿದವರ ಮೇಲೆ ಕಂಡಲ್ಲಿ ಗುಂಡಿಕ್ಕುವ ಆದೇಶವನ್ನು ಸರ್ಕಾರ ನೀಡಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications