ಬಗೆದಷ್ಟು ಬಯಲಾಗುತ್ತಿದೆ ಮಂಡ್ಯ ಭ್ರೂಣ ಹತ್ಯೆ ಕೇಸ್: ಮತ್ತೆ ಮೂವರ ಬಂಧನ
ಮಂಡ್ಯ, ಸೆಪ್ಟೆಂಬರ್ 10: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಕಿಂಗ್ಪಿನ್ ಅಭಿಷೇಕ್ ಬಂಧನದ ಬೆನ್ನಲ್ಲೇ ಈ ಕರಾಳ ದಂಧೆಯ ಅನೇಕ ವಿಚಾರಗಳು ಬಯಲಾಗುತ್ತಲೇ ಇದೆ. ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ನವೀನ್, ಹರಳಹಳ್ಳಿಯ ಜಬ್ಬರ್ ಅಲಿಯಾಸ್ ಬಾಬು, ಕೆ.ಆರ್.ನಗರದ ಶಂಕರ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಬರೋಬ್ಬರಿ 15 ಜನರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮೂವರು ಆರೋಪಿಗಳು ಸೇರಿ ಒಟ್ಟು ಬಂಧಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಪ್ರಮುಖ ಆರೋಪಿ, ಕಿಂಗ್ಪಿನ್ ಅಭಿಷೇಕ್ ಬಂಧನವಾಗುತ್ತಿದ್ದಂತೆ ಪೊಲೀಸರ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್.ನಗರದ ಶಂಕರ ಜಿ.ಎನ್ ಡಿಪ್ಲೊಮಾ ಇನ್ ರೇಡಿಯಾಲಜಿ ಮಾಡಿ ಸ್ಕ್ಯಾನಿಂಗ್ ಸೆಂಟರ್ ಇಟ್ಟುಕೊಂಡಿದ್ದ. ಸದ್ಯ ಆರೋಪಿಗಳನ್ನು ಬಂಧಿಸಿ 2 ಸ್ಕ್ಯಾನಿಂಗ್ ಯಂತ್ರ ಹಾಗೂ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಜಾಲ ನಡೆಸುತ್ತಿದ್ದ ಆರೋಪಿಗಳು ವೈದ್ಯರೊಬ್ಬರಿಂದ 5 ಸ್ಕ್ಯಾನಿಂಗ್ ಮೆಷಿನ್ ಖರೀದಿಸಿ, ತಾವೇ ಸ್ಕ್ಯಾನಿಂಗ್ ಮಾಡಿ ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದರು.

ಅಲ್ಲದೇ ಒಂದು ಹೆಣ್ಣು ಭ್ರೂಣ ಹತ್ಯೆಗೆ 25 ಸಾವಿರದಿಂದ 1 ಲಕ್ಷವರೆಗೆ ಹಣ ಪಡೆಯುತ್ತಿದ್ದರು. ಬಳಿಕ ಹೆಣ್ಣು ಭ್ರೂಣ ಪತ್ತೆಯಾದರೆ ಮಾತ್ರೆ ಬಳಸಿ ಭ್ರೂಣ ಹತ್ಯೆ ಮಾಡಿ ಮೆಡಿಕಲ್ ವೇಸ್ಟ್ ಜೊತೆಗೆ ಭ್ರೂಣವನ್ನೂ ಕೂಡ ಯಾರಿಗೂ ತಿಳಿಯದಂತೆ ಎಸೆಯುತ್ತಿದ್ದರು ಎನ್ನಲಾಗಿದೆ.
ಆಲೆಮನೆ, ಪಾಂಡವಪುರ ಹೆಲ್ತ್ ಕ್ವಾಟರ್ಸ್ ಪ್ರಕರಣ ಸೇರಿದಂತೆ ಮೇಲುಕೋಟೆ, ಬೆಳ್ಳೂರು ಠಾಣೆಗಳಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು ತನಿಖೆಯನ್ನು ಮತ್ತಷ್ಟು ಮುಂದುವರಿಸಿದ್ದಾರೆ. ಇನ್ನು ಈ ಹಿಂದೆ ಬಂಧಿತ ಆರೋಪಿಗಳಿಂದ 3 ಕಾರು, ಮೊಬೈಲ್ ಸೇರಿ 23 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.












Click it and Unblock the Notifications