ಮಂಡ್ಯದಲ್ಲಿ ಬೆಟ್ಟಿಂಗ್ ಬಲು ಜೋರು; ವಾಹನ, ಜಾನುವಾರು ಪಣಕಿಟ್ಟ ಜನ!
ಮಂಡ್ಯ, ಮೇ 08: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಅಲ್ಲಿಯ ತನಕ ಜನರು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಮಂಡ್ಯ ಸಹ ಒಂದು. ಏಪ್ರಿಲ್ 26ರಂದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮುಗಿದಿದೆ. ಈಗ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಜೋರಾಗಿದೆ.

ಅರಳಿಕಟ್ಟೆ, ಹೋಟೆಲ್, ಹೊಲ ಹೀಗೆ ಎಲ್ಲಾ ಕಡೆ ಮಂಡ್ಯದ ಚುನಾವಣಾ ಸೋಲು, ಗೆಲುವು ಲೆಕ್ಕಾಚಾರ ನಡೆಯುತ್ತಿದೆ. ಮಂಡ್ಯದಲ್ಲಿ ಈ ಬಾರಿ ಮತದಾನ ಪ್ರಮಾಣ ಶೇ 81ರ ಸನಿಹದಲ್ಲಿದ್ದು, ಇದು ಯಾರಿಗೆ ಸಹಾಯಕವಾಗಲಿದೆ? ಎಂಬುದು ಜನರ ಚರ್ಚೆಯ ವಸ್ತು.
ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್. ಆದರೆ ಅವರು ಬಿಜೆಪಿ ಸೇರಿದ್ದು, ಈ ಬಾರಿ ಚುನಾವಣೆಗೆ ಸ್ಪರ್ಧಿಸಿಲ್ಲ. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಎಚ್. ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪ್ರಮುಖವಾಗಿ ಕಣದಲ್ಲಿದ್ದಾರೆ. ಮಂಡ್ಯ ಚುನಾವಣಾ ಕಣದಲ್ಲಿ 14 ಅಭ್ಯರ್ಥಿಗಳಿದ್ದು, ಎಲ್ಲರ ಭವಿಷ್ಯ ಮತಯಂತ್ರದಲ್ಲಿ ಅಡಗಿದೆ.
ಬೆಟ್ಟಿಂಗ್ ಭರಾಟೆ ಜೋರು: ಮಂಡ್ಯದಲ್ಲಿ ಈ ಬಾರಿ ಗೆಲುವು ಯಾರಿಗೆ? ಎಂದು ಜನರು ಚರ್ಚೆ ಮಾಡುವುದು ಮಾತ್ರವಲ್ಲ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ತಮ್ಮ ನೆಚ್ಚಿನ ಅಭ್ಯರ್ಥಿ ಗೆಲ್ಲುತ್ತಾನೆ ಎಂದು ಸವಾಲೊಡ್ಡಿರುವ ಜನರು ವಾಹನ, ಜಾನವಾರುಗಳನ್ನು ಪಣಕ್ಕಿಟ್ಟಿದ್ದಾರೆ.
ಹಳೆ ಮೈಸೂರು ಭಾಗದ ಪ್ರಮುಖ ಕ್ಷೇತ್ರವಾದ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಚನ್ನಪಟ್ಟಣದ ಹಾಲಿ ಶಾಸಕ ಎಚ್. ಡಿ. ಕುಮಾರಸ್ವಾಮಿ ಸ್ವತಃ ಕಣಕ್ಕಿಳಿಯುವ ಮೂಲಕ ಕಾಂಗ್ರೆಸ್ ನಾಯಕರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದರು.
ಮಂಡ್ಯದಲ್ಲಿ ಒಕ್ಕಲಿಗ, ದಲಿತ, ಲಿಂಗಾಯತ, ಕುರುಬ, ಮುಸ್ಲಿಂ ಹೀಗೆ ವಿವಿಧ ಸಮುದಾಯಗಳ ಮತಗಳು ನಿರ್ಣಾಯಕ. ಜೆಡಿಎಸ್ ಪಕ್ಷದ ಮೇಲೆ ಮಂಡ್ಯದ ಜನರಿಗೆ ಅಪಾರವಾದ ಪ್ರೀತಿ ಇದೆ. ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯೇ ಕಣಕ್ಕಿಳಿದಿರುವುದು ಚುನಾವಣಾ ಕುತೂಹಲವನ್ನು ಹೆಚ್ಚಿಸಿದೆ.
ಕಾಂಗ್ರೆಸ್ ಮತ್ತು ಎನ್‌ಡಿಎ ಮೈತ್ರಿ ಅಭ್ಯರ್ಥಿ ನಡುವೆ ಗೆಲುವು ಯಾರಿಗೆ?. ಎಷ್ಟು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ? ಎಂದು ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಚುನಾವಣಾ ಫಲಿತಾಂಶ ಘೋಷಣೆಗೆ ಇನ್ನೂ ಬಹಳ ಸಮಯವಿದೆ. ಆದರೆ ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಎಚ್. ಡಿ. ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ. ಮಂಡ್ಯದಲ್ಲಿ ಕಣಕ್ಕಿಳಿದಿರುವ ಇಬ್ಬರು ಅಭ್ಯರ್ಥಿಗಳು ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಜನರು ಯಾರಿಗೆ ಬೆಂಬಲ ನೀಡಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌ನ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಸಹ ಪ್ರಭಾವಿ ಅಭ್ಯರ್ಥಿಯೇ. ರಾಜ್ಯದ ಸರ್ಕಾರವೇ ಅವರ ಹಿಂದೆ ನಿಂತು ಈ ಬಾರಿ ಮಂಡ್ಯದಲ್ಲಿ ಗೆಲ್ಲಬೇಕು ಎಂದು ಕೆಲಸ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅಭ್ಯರ್ಥಿ ಪರವಾಗಿ ಪ್ರಚಾರವನ್ನು ಮಾಡಿದ್ದಾರೆ.
2019ರ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿದ್ದರು. ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬಿಜೆಪಿ ಬೆಂಬಲ ನೀಡಿತ್ತು. ಆದರೆ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಸಹ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು.
ಈ ಸೋಲಿನ ನೋವನ್ನು ಎಚ್. ಡಿ. ಕುಮಾರಸ್ವಾಮಿ ಇನ್ನೂ ಮರೆತಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಬಿಜೆಪಿಯ ಬೆಂಬಲವಿದ್ದರೂ ಸಹ ಪುತ್ರನ ಬದಲು ತಾವೇ ಕಣಕ್ಕಿಳಿದು, ಗೆದ್ದು ಕಳೆದ ಚುನಾವಣೆಯ ಸೋಲಿನ ನೋವು ಮರೆಯುವ ಲೆಕ್ಕಾಚಾರದಲ್ಲಿದ್ದಾರೆ.












Click it and Unblock the Notifications