Pavithra Jayaram: ಹುಟ್ಟೂರಿನಲ್ಲಿ ನಟಿ ಪವಿತ್ರ ಜಯರಾಂ ಅಂತ್ಯಕ್ರಿಯೆ
ಆಂಧ್ರಪ್ರದೇಶದ ಕರ್ನೂಲ್ ಬಳಿ ಭಾನುವಾರ ನಡೆದ ಅಪಘಾತದಲ್ಲಿ ಮೃತಪಟ್ಟ ಪವಿತ್ರ ಜಯರಾಂ ಅವರ ಅಂತ್ಯಕ್ರಿಯೆ ಅವರ ಹುಟ್ಟೂರು ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆಯಿತು.
ಒಕ್ಕಲಿಗ ಸಂಪ್ರದಾಯದಂತೆ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು. ಪವಿತ್ರ ಅವರ ಚಿತೆಗೆ ಪುತ್ರ ಪ್ರಜ್ವಲ್ ಅಗ್ನಿಸ್ಪರ್ಶ ಮಾಡಿದರು. ಪವಿತ್ರ ಅವರನ್ನು ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಮಕ್ಕಳಾದ ಪ್ರತಿಕ್ಷಾ, ಪ್ರಜ್ವಲ್ ಸೇರಿದಂತೆ ತುಂಬು ಕುಟುಂಬವನ್ನು ನಟಿ ಅಗಲಿದ್ದಾರೆ.

ಪವಿತ್ರ ಅವರ ಅಂತಿಮ ದರ್ಶನ ಪಡೆದ ಕಿರುತೆರೆ ನಟ ಚಂದನ್‌ಗೌಡ ಮಾತನಾಡಿ, ಪವಿತ್ರ ಅವರೊಂದಿಗೆ ಕೆಲಸ ಮಾಡಿದ್ದೇನೆ. ಎಲ್ಲರೊಡನೆ ಉತ್ತಮ ಒಡನಾಟ ಹೊಂದಿದ್ದರು. ಮೊನ್ನೆಯಷ್ಟೆ ಮದರ್ಸ್ ಡೇ ಕಾರ್ಯಕ್ರಮ ಮಾಡಿದ್ದೋ. ಈಗ ಈ ಘಟನೆ ನಡೆದಿರುವುದು ನೋವು ತಂದಿದೆ. ಅಪಘಾತದಲ್ಲಿ ಯಾರದ್ದು ತಪ್ಪು ಎಂದು ಹೇಳೋಕೆ ಆಗಲ್ಲ. ಪವಿತ್ರ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.
ಘಟನೆ ಬಗ್ಗೆ ವಿವರಿಸಿದ ಚಂದು
ಪವಿತ್ರ ಅವರ ಸ್ನೇಹಿತ ಚಂದು ಮಾತನಾಡಿ, ಪವಿತ್ರ ಜೊತೆ ಒಂದೇ ಕಾರಿನಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಕಡೆಗೆ ಭಾನುವಾರ ಮುಂಜಾನೆ ಸಮಯದಲ್ಲಿ ಪ್ರಯಾಣ ಬೆಳೆಸುತ್ತಿದ್ದೆವು. ಆ ಸಂದರ್ಭ ಅಪಾರ ಮಳೆ ಸುರಿಯುತ್ತಿತ್ತು. ಮಳೆಯಿಂದ ಮೂರು ಗಂಟೆಗಳ ಕಾಲ ಟ್ರಾಫಿಕ್ ಉಂಟಾಗಿತ್ತು. ಇದರಿಂದ ಸುಸ್ತು ಆಗಿತ್ತು, ನಿದ್ರೆಯೂ ಬರುತ್ತಿತ್ತು. ಕಾರಿನಲ್ಲಿ ಪವಿತ್ರ ಅವರ ಸೋದರಿಯ ಮಗಳು, ನಾನು, ಪವಿತ್ರ ಮತ್ತು ಡ್ರೈವರ್ ಇದ್ದೆವು.
ನಮ್ಮ ಕಾರಿನ ಬಳಿ ವೇಗವಾಗಿ ಬಸ್ ಬಂತು. ಈ ವೇಳೆ ಎದರುಗಡೆಯಿಂದ ಬಂದ ಸ್ಕಾರ್ಪಿಯೋಗೆ ಕಾರು ಡಿಕ್ಕಿ ಹೊಡೆಯಿತು. ಬ್ರೇಕ್ ಹಾಕಿದ್ದರಿಂದ ಕಾರು ಬಲಗಡೆಗೆ ವಾಲಿತು. ಇದರಿಂದ ಎದುರುಗಡೆ ಇದ್ದ ಬಸ್‌ಗೆ ನಮ್ಮ ಕಾರು ಡಿಕ್ಕಿ ಹೊಡೆಯಿತು. ನನ್ನ ಕೈಗೆ ಪೆಟ್ಟಾಗಿತ್ತು, ಪವಿತ್ರ ಬಿಟ್ಟು ಬೇರೆ ಯಾರಿಗೂ ಏಟಾಗಿರಲಿಲ್ಲ. ಆ ವೇಳೆ ಪವಿತ್ರ ಉಸಿರುಗಟ್ಟಿ ಏನಾಯ್ತು ಎಂದು ಕೇಳಿದರು. ಆಗಲೇ ಪವಿತ್ರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಆಗ ನಮಗೆ ಯಾವುದೇ ಆಂಬುಲೆನ್ಸ್ ಸಿಗಲಿಲ್ಲ. ಆಂಬುಲೆನ್ಸ್ ಸಿಗದಿದದ್ದೇ ಪವಿತ್ರ ಸಾವಿಗೆ ಕಾರಣ ಎಂದು ಹೇಳಿದರು.
20 ನಿಮಿಷ ತಡವಾಗಿ ಆಂಬುಲೆನ್ಸ್ ಬಂತು. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ವೈದ್ಯರು ಬ್ರೈನ್ ಡೆಡ್ ಆಗಿದೆ ಎಂದು ತಿಳಿಸಿದರು ಎಂದು ಘಟನೆಯನ್ನು ಹಂಚಿಕೊಂಡರು.












Click it and Unblock the Notifications