ಪಾಂಡವಪುರದಲ್ಲಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಮಂಡ್ಯ, ಅಕ್ಟೋಬರ್.10: ತೋಟಗಾರಿಕೆ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಕಚೇರಿ ಟೆರೇಸ್‌ನಲ್ಲಿ ವಿಷಪೂರಿತ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಂಡವಪುರದಲ್ಲಿ ನಡೆದಿದೆ.
ಪಟ್ಟಣದ ಸುಬ್ರಹ್ಮಣ್ಯ ಬೀದಿಯ ನಿವಾಸಿ ರವೀಂದ್ರನಾಥ್ ರಾವ್ ಅವರ ಪುತ್ರಿ ಬಿ.ಎಂ.ಚೈತ್ರ(35) ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಬಿ.ಎಂ.ಚೈತ್ರ ಕಳೆದ 7 ವರ್ಷಗಳಿಂದ ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಚೈತ್ರ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿ 8 ವರ್ಷದಿಂದ ಚೈತ್ರ ಪತಿಯಿಂದ ದೂರವಿದ್ದರು. ಪ್ರಸ್ತುತ ಚೈತ್ರ ಅವರ ತಾಯಿ, ತಮ್ಮನೊಂದಿಗೆ ವಾಸಮಾಡುತ್ತಿದ್ದಳು ಎನ್ನಲಾಗಿದೆ.

ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರ ಎಲ್ಲರ ವಿಶ್ವಾಸಗಳಿಸಿದ್ದರು. ಹಾಗಾಗಿ ಇಲಾಖೆ ಮುಖ್ಯ ಗೇಟ್ ಹಾಗೂ ಕಚೇರಿ ಬೀಗ ಇವರ ಬಳಿಯೇ ಇತ್ತು ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಮನೆಯಿಂದ ಕಚೇರಿಗೆ ಹೋಗಿಬರುವುದಾಗಿ ಹೇಳಿ ಹೋದ ಚೈತ್ರ ರಾತ್ರಿಯಾದರೂ ಮನೆಗೆ ವಾಪಸ್ಸಾಗಲಿಲ್ಲ.
ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ ಸಹ ಪತ್ತೆಯಾಗಲಿಲ್ಲ. ಮಂಗಳವಾರ ಬೆಳಗ್ಗೆ ಕಚೇರಿಗೆ ಬಂದ ಸಿಬ್ಬಂದಿ ಕಚೇರಿಯ ಟೆರೇಸ್ ಮೇಲೆ ಹೋದಂತಹ ಸಂದರ್ಭದಲ್ಲಿ ಚೈತ್ರ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಚೈತ್ರ ಸಾವಿಗೆ ನಿಖರವಾದ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಮೃತ ಚೈತ್ರ ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು ಪತ್ತೆಯಾಗಿದ್ದು, ಅದರಲ್ಲಿ ನನ್ನ ತಮ್ಮ ಜಯಂತ್‌ಗೆ ನಾನು ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಬ್ಯಾಂಕ್‌ನಲ್ಲಿ ಲೋನ್ ಕೊಡಿಸಲು ಸಾಧ್ಯವಾಗಲಿಲ್ಲ. ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾಳೆ.
ವಿಷಯ ತಿಳಿಯುತ್ತಿದ್ದಂತೆಯೆ ಪಟ್ಟಣದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವವನ್ನು ಒಪ್ಪಿಸಿದ್ದಾರೆ, ಈ ಸಂಬಂಧ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications