HD Kumaraswamy: ಮೇಲುಕೋಟೆಯಲ್ಲಿ ಮಂಡಿಗಾಲಿನಲ್ಲಿ 400 ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಎಚ್‌ಡಿಕೆ ಅಭಿಮಾನಿ
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಗೆದ್ದು ಕೇಂದ್ರದ ಸಚಿವರಾದರೆ ಮಂಡಿ ಸೇವೆ ಮಾಡುವುದಾಗಿ ಹರಕೆ ಹೊತ್ತಿದ್ದ ಅಭಿಮಾನಿಯೋರ್ವ ಮೇಲುಕೋಟೆಯಲ್ಲಿ ಮಂಡಿಸೇವೆ ಮೂಲಕ ಬೆಟ್ಟವನ್ನೇರಿ ಶ್ರೀ ಯೋಗಾನರಸಿಂಹಸ್ವಾಮಿಗೆ ಹರಕೆ ಸಲ್ಲಿಸಿದ್ದಾನೆ.
ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಶಂಕರ್ ಅವರ ಪುತ್ರ ಸಿ.ಎಸ್. ಲೋಕೇಶ್ ಎಂಬಾತನೇ ಮಂಡಿ ಸೇವೆ ಮಾಡಿ ದೇವರಿಗೆ ಹರಕೆ ತೀರಿಸಿದ್ದಾನೆ. ಬೆಟ್ಟದ ಸುಮಾರು 400ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಮಂಡಿಗಾಲುಗಳಿಂದ ಹತ್ತಿ ಗಮನ ಸೆಳೆದಿದ್ದಾನೆ.

ಚುನಾವಣೆ ಪೂರ್ವದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲ್ಲಲಿ, ಹಾಗೆಯೇ ಕೇಂದ್ರ ಸಚಿವರೂ ಆಗಲೆಂದು ಮೇಲುಕೋಟೆಯ ಶ್ರೀಯೋಗಾನರಸಿಂಹಸ್ವಾಮಿ ದೇವರಿಗೆ ಹರಕೆ ಹೊತ್ತಿದ್ದರು.
ಅದರಂತೆ ಚುನಾವಣೆಯಲ್ಲಿ ದಾಖಲೆಯ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರೀಗ ಕೇಂದ್ರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರೂ ಆಗಿದ್ದಾರೆ. ನೂತನ ಕೇಂದ್ರ ಸಚಿವರು ನಾಳೆ ಶನಿವಾರ ಮಂಡ್ಯಕ್ಕೆ ಆಗಮಿಸಿ, ತಮ್ಮ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಲೊಕೇಶ್ ಅವರು ಮುಂಜಾನೆಯೇ ಸ್ನೇಹಿತ ಚಂದನ್‌ಜಾಕ್ ಅವರೊಂದಿಗೆ ಮಂಡ್ಯದಿಂದ ಮೇಲುಕೋಟೆಗೆ ಬೈಕ್‌ನಲ್ಲಿ ತೆರಳಿ, ಯೋಗಾನರಸಿಂಹಸ್ವಾಮಿ ಬೆಟ್ಟವನ್ನು ಮಂಡಿಗಾಲುಗಳಿಂದಲೇ ಹತ್ತಿ, ಹರಕೆ ತೀರಿಸಿದ್ದಾರೆ. ಹಾಗೆಯೇ ಎಚ್‌ಡಿಕೆ ಅವರ ಆರೋಗ್ಯ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಕಲ್ಪ-ಅರ್ಚನೆ ಮಾಡಿಸಿದ್ದಾರೆ.
ಫೋಟೋ ಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಲೋಕೇಶ್ ಕಾರ್ಯಕ್ರಮವೊಂದಕ್ಕಾಗಿ ಮೇಲುಕೋಟೆಗೆ ಆಗಮಿಸಿದ್ದ ವೇಳೆ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಗೆಲುವಿನ ಬಗ್ಗೆ ಸೇನಹಿತರೊಂದಿಗೆ ಮಾತನಾಡುವಾಗ ಕುಮಾರಣ್ಣ ಗೆದ್ದರೆ ಏನು ಮಾಡುತ್ತೀಯಾ ಎಂದು ಸ್ನೇಹಿತರು ಪ್ರಶ್ನಿಸಿದ್ದರು. ಅವರು ಗೆದ್ದರೆ ಮೇಲುಕೋಟೆಗೆ ಬಂದು ಮಂಡಿಸೇವೆ ಮೂಲಕ ಬೆಟ್ಟ ಹತ್ತಿ ದೇವರಿಗೆ ಪೂಜೆ ಸಲ್ಲಿಸುವುದಾಗಿ ತಿಳಿಸಿದ್ದು, ಅದರಂತೆ ಕುಮಾರಣ್ಣ ಗೆದ್ದು ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ಮಂಡಿಸೇವೆ ಮಾಡಿ ಹರಕೆ ತೀರಿಸಿದ್ದೇವೆ ಎಂದು ಅಭಿಮಾನಿ ಲೋಕೇಶ್ ತಿಳಿಸಿದ್ದಾರೆ.












Click it and Unblock the Notifications