ಮಂಡ್ಯದಲ್ಲಿ ಕಳುವಾಗಿದ್ದ 758 ಮೊಬೈಲ್‌ಗಳ ಪೈಕಿ 130 ಪತ್ತೆ, ಕಾರ್ಯಾಚರಣೆ ಹೇಗಿತ್ತು?, ಇಲ್ಲಿದೆ ವಿವರ
ಮಂಡ್ಯ, ಮೇ, 19: ಜಿಲ್ಲೆಯಲ್ಲಿ ಕಳುವಾಗಿದ್ದ 759 ಮೊಬೈಲ್‌ಗಳ ಪೈಕಿ 130 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟೆಲಿಕಾಂ ಕಾಯ್ದೆಯಡಿ 2022ರ ಸೆಪ್ಟಂಬರ್ 6ರಂದು ಸೆಂಟ್ರಲ್ ಎಕ್ಯೂಪ್‌ಮೆಂಟ್ ಐಡೆಂಟಿಟಿ ರಿಜಿಸ್ಟ್ರರ್ (ಸಿಇಐಆರ್) ತಂತ್ರಾಂಶದ ಸಹಾಯದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕಳವು ಅಥವಾ ಕಾಣೆಯಾಗಿದ್ದ ಸುಮಾರು 23 ಲಕ್ಷ ರೂಪಾಯಿ ವೌಲ್ಯದ ವಿವಿಧ ಮಾದರಿಯ 130 ಮೊಬೈಲ್‌ಗಳನ್ನು ಸದರಿ ತಂತ್ರಾಂಶದಿಂದ ನಮ್ಮ ಸೈಬರ್‌ಕ್ರೈಂ ಪೊಲೀಸರು ವಶಪಡಿಸಿಕೊಂಡು ವಾರಸುದಾರರಿಗೆ ಹಿಂತಿರುಗಿಸುತ್ತಿದ್ದಾರೆ ಎಂದು ತಿಳಿಸಿದರು.

ಇನ್ನು ಮುಂದೆ ಯಾರೇ ಮೊಬೈಲ್ ಕಳೆದುಕೊಂಡಲ್ಲಿ ಮೊಬೈಲ್‌ಗೆ ಸಂಬಂಧಿಸಿದ ದಾಖಲಾತಿ, ಪೊಲೀಸ್ ದೂರಿನ ಪ್ರತಿ ಪಡೆದು ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಆನ್‌ಲೈನ್ ದೂರು ದಾಖಲಿಸಬಹುದು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಮಂಡ್ಯದ ಸಿಇಎನ್ ಅಪರಾಧ ಪೊಲೀಸರು ಹಾಗೂ ಸಿಬ್ಬಂದಿಯವರ ಕ್ರಿಯಾಶೀಲ ಕಾರ್ಯಾಚರಣೆಯನ್ನು ಶ್ಲಾಘಿಸಿದರು.
ಅಪರ ಪೊಲೀಸ್ ಅಧೀಕ್ಷಕ ಸಿ.ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸರಾದ ಎನ್. ಜೈಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಎಂ.ರಾಘವೇಂದ್ರ ಕಠಾರಿ, ರಸೂಲ್‌ಸಾಬ್ ಗೌಂಡಿ, ಎ.ಎಂ.ರಾಜೇ ಅರಸ್, ಎಸ್. ಗರೀಶ್, ಎಚ್.ಆರ್. ಸುಮನ್ ತಂಡವನ್ನು ರಚಿಸಿ ಈ ಕಳುವಾದ ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು.
ಕಳುವಾಗಿದ್ದ 295 ಮೊಬೈಲ್‌ಗಳ ಪತ್ತೆ
ಅಲ್ಲದೆ ವಿವಿಧಡೆ ಕಳ್ಳತನವಾಗಿದ್ದ ಸುಮಾರು 295 ಮೊಬೈಲ್‌ಗಳನ್ನು ಹೊಸ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವಲ್ಲಿ ಗದಗ ಜಿಲ್ಲಾ ಪೊಲೀಸರು ಕೂಡ ಇತ್ತೀಚೆಗಷ್ಟೇ ಯಶಸ್ವಿಯಾಗಿದ್ದರು. ಪತ್ತೆಹಚ್ಚಿದ ಮೊಬೈಲ್‌ಗಳನ್ನು ಸೋಮವಾರ ಪುನಃ ಆಯಾ ಮಾಲೀಕರಿಗೆ ಒಪ್ಪಿಸಿದರು. ಕಳೆದುಕೊಂಡಿದ್ದ ಮೊಬೈಲ್‌ಗಳು ಮತ್ತೆ ತಮ್ಮ ಕೈಸೇರುತ್ತಿದ್ದಂತೆಯೇ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ಮಾಲೀಕರು ಧನ್ಯವಾದ ಹೇಳಿದ್ದರು.
ಜಿಲ್ಲೆಯ 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧಡೆ ಈ ಮೊಬೈಲ್‌ಗಳು ಕಳ್ಳತನವಾಗಿದ್ದವು. "ಕೇಂದ್ರ ಸರ್ಕಾರದ ಸಿ.ಇ.ಐ.ಆರ್ ಮತ್ತು ಮೋಬಿಫೈ" ಆ್ಯಪ್‌ಗಳ ಮೂಲಕ ಕ್ಷಿಪ್ರವಾಗಿ ಪತ್ತೆ ಮಾಡಲಾಯಿತು. ಪತ್ತೆಯಾದ ಮೊಬೈಲ್‌ಗಳ ಮೌಲ್ಯ ಸುಮಾರು 4,097,461 ರೂ. ಎಂದು ಅಂದಾಜು ಮಾಡಲಾಗಿದೆ.
ಸಾವಿರಾರು ರೂಪಾಯಿ ಬೆಲೆ ತೆತ್ತು ಮೊಬೈಲ್ ಖರೀದಿ ಮಾಡಿದ್ದ ಸಾರ್ವಜನಿಕರು, ಅವುಗಳ ಜೊತೆಗೆ ಮೌಲ್ಯವಾದ ದಾಖಲೆ, ದತ್ತಾಂಶಗಳನ್ನು ಕೂಡ ಕಳೆದುಕೊಂಡಿದ್ದರು. ಹಲವರು ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಠಾಣೆಗೂ ಅಲೆದಾಡಿದ್ದರು. ಕೊನೆಗೆ ಸಿಗದೇ ಇದ್ದುದರಿಂದ ಮೊಬೈಲ್‌ಗಳ ಮೇಲಿನ ಆಸೆಯನ್ನು ಕೈಬಿಟ್ಟಿದ್ದರು.
ಇತ್ತೀಚೆಗೆ ಪರಿಚಯ ಮಾಡಲಾಗಿರುವ ಕೇಂದ್ರ ಸರ್ಕಾರದ ಸಿ.ಇ.ಐ.ಆರ್ ಮತ್ತು ಮೋಬಿಫೈ ನೂತನ ತಂತ್ರಜ್ಞಾನದ ಮೂಲಕ ಅವುಗಳನ್ನು ಮತ್ತೆ ಪತ್ತೆ ಮಾಡಿದ್ದಲ್ಲದೆ ಮಾಲೀಕರಿಗೂ ಒಪ್ಪಿಸಲಾಯಿತು. ಸಾಮಾನ್ಯರು ಸೇರಿದಂತೆ ವೈದ್ಯರು, ಲಾಯರ್, ಪತ್ರಕರ್ತರು ಸಹ ಮೊಬೈಲ್ ಕಳೆದುಕೊಂಡು ಚಿಂತೆಗೀಡಾಗಿದ್ದರು.
ಸದ್ಯ ಪುನಃ ಮೊಬೈಲ್ ತಮ್ಮ ಕೈ ಸೇರಿದ್ದಕ್ಕೆ ಪೊಲೀಸರಿಗೆ ಧನ್ಯವಾದ ತಿಳಿಸಿದರು. ಖದೀಮರು ಜಾತ್ರೆ, ಸಂತೆ, ಬಸ್ ನಿಲ್ದಾಣ ಹೀಗೆ ವಿವಿಧ ಜನನಿಬಿಡ ಪ್ರದೇಶದಲ್ಲಿ ಅತೀ ಕಡಿಮೆ ಹಣಕ್ಕೆ ಅಂಗಡಿಗಳಲ್ಲಿ ಮೊಬೈಲ್‌ಗಳನ್ನು ಮಾರಿ ಪರಾರಿಯಾಗಿದ್ದರು ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿತ್ತು.












Click it and Unblock the Notifications