ತಲಕಾವೇರಿಯ ಗಾಳಿಯಂತ್ರದ ಹಿಂದಿರುವ ದುರಂತ ಕಥೆ ಏನು..?
ಮಡಿಕೇರಿ, ಮಾರ್ಚ್ 09: ಸುಮಾರು ಮೂವತ್ತಾರು ವರ್ಷಗಳಿಂದ ಕೊಡಗಿನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ ಬಾಪುರೆ ಬೆಟ್ಟದ ಮೇಲೆ ಒಂದೊಂದೇ ಅವಶೇಷಗಳನ್ನು ಕಳೆದುಕೊಂಡು ತುಕ್ಕು ಹಿಡಿಯುತ್ತಾ ನಿಂತಿರುವ ಗಾಳಿಯಂತ್ರಗಳು ಕೋಟ್ಯಂತರ ರೂ. ಗಾಳಿಪಾಲಾಗಿ ಹೋಗಿದ್ದಕ್ಕೊಂದು ನಿದರ್ಶನವಾಗಿದೆ. ಬಹುಶಃ ಈ ಗಾಳಿಯಂತ್ರಗಳನ್ನು ತಲಕಾವೇರಿಗೆ ಹೋದವರು ನೋಡಿರುತ್ತಾರೆ. ಆದರೆ ಅದರ ಹಿಂದಿನ ಕಥೆಗಳು ಮಾತ್ರ ಹೆಚ್ಚಿನವರಿಗೆ ಗೊತ್ತೇ ಇಲ್ಲ ಎನ್ನಬೇಕು.
ಇವತ್ತು ಗಾಳಿಯಂತ್ರಗಳು ಹಲವು ಪ್ರದೇಶಗಳಲ್ಲಿ ಕಾಣಬಹುದಲ್ಲದೆ, ಅವುಗಳಿಂದ ವಿದ್ಯುತ್ ಉತ್ಪಾದನೆಯೂ ಆಗುತ್ತಿದೆ. ಆದರೆ ಸುಮಾರು 36 ವರ್ಷಗಳ ಹಿಂದೆಯೇ ಗಾಳಿಯಿಂದ ವಿದ್ಯುತ್ ತಯಾರು ಮಾಡುವ ಯೋಜನೆಯನ್ನು ಕೊಡಗಿನಲ್ಲಿ ಹಮ್ಮಿಕೊಂಡು ಅದರಲ್ಲಿ ವಿಫಲವಾಗಿ ಕೈಕಟ್ಟಿ ಕುಳಿತಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ಇವತ್ತು ಯೋಜನೆ ವಿಫಲವಾಗಿ ಕೋಟ್ಯಂತರ ರೂಪಾಯಿ ಗಾಳಿಪಾಲಾಗಿದ್ದಕ್ಕೆ ತುಕ್ಕು ಹಿಡಿದ ಗಾಳಿಯಂತ್ರಗಳು ಸಾಕ್ಷಿಯಾಗಿವೆ.

ಯಾರಾದರೂ ಕುತೂಹಲಗೊಂಡು ಅತ್ತ ಹೋದರೆ ಅವಶೇಷ ಕಳೆದುಕೊಂಡು ಬೋರಲಾಗಿ ನಿಂತಿರುವ ಗಾಳಿಯಂತ್ರಗಳು ದುರಂತದ ಕಥೆಯನ್ನು ಹೇಳುತ್ತವೆ. ಹಾಗಾದರೆ ಏನಿದು ಗಾಳಿಯಂತ್ರಗಳ ದುರಂತಕಥೆ ಎಂಬ ಪ್ರಶ್ನೆಗಳು ಪ್ರತಿಯೊಬ್ಬರ ಮನದಲ್ಲಿ ಹುಟ್ಟಬಹುದು. ಆದರೆ ಅದಕ್ಕೆ ಉತ್ತರ ಸಿಗಬೇಕಾದರೆ ನಾವು ಎಂಬತ್ತರ ದಶಕದತ್ತ ಹೋಗ ಬೇಕು.
ಕಾರಂತರ ಭಾಷಣದಿಂದ ಸ್ಪೂರ್ತಿ
1987ರಲ್ಲಿ ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿಯ ನಿಸರ್ಗ ನಶಿಸಿ ಹೋಗುತ್ತಿರುವ ಬಗ್ಗೆ ಕಳವಳಗೊಂಡ ಪರಿಸರ ಪ್ರೇಮಿಗಳು ನಿಸರ್ಗ ಉಳಿಸುವ ನಿಟ್ಟಿನಲ್ಲಿ ಅಪ್ಪಿಕೋ ಚಳವಳಿಯನ್ನು ಆರಂಭಿಸಿದರು. ಆ ಚಳವಳಿಗೆ ಪರಿಸರವಾದಿ ಲೇಖಕ ದಿ. ಡಾ.ಶಿವರಾಮಕಾರಂತರು ಆಗಮಿಸಿ ಮಾತನಾಡುತ್ತಾ ಕೊಡಗಿನ ನಿಸರ್ಗದಿಂದ ಅಂದರೆ ಪವನಶಕ್ತಿಯಿಂದ ಸುಲಭವಾಗಿ ವಿದ್ಯುತ್ ತಯಾರಿಸಬಹುದು ಎಂಬ ಸಲಹೆಯನ್ನು ನೀಡಿದರಲ್ಲದೆ, ಈಗಾಗಲೇ ಡೆನ್ಮಾರ್ಕ್ನಲ್ಲಿ ಗಾಳಿಯಂತ್ರದ ಮೂಲಕ ವಿದ್ಯುತ್ ತಯಾರಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದರು.

ಇದು ಅವತ್ತಿನ ಸರ್ಕಾರದ ಗಮನಸೆಳೆದಿತ್ತು. ಹೀಗಾಗಿ 1988ರ ಫೆಬ್ರವರಿಯಲ್ಲಿ ತಲಕಾವೇರಿಯಲ್ಲಿ ಗಾಳಿಯಂತ್ರವನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿ ಈ ಬಗ್ಗೆ ಸೂಕ್ತ ಸಲಹೆಯನ್ನು 'ನ್ಯಾಷನಲ್ ಏರೋನ್ಯಾಟಿಕ್ ಲ್ಯಾಬ್'ನ ಅಧಿಕಾರಿ ಪ್ರೊಫೆಸರ್ ತಿವಾರಿ ಎಂಬುವರಿಂದ ಕೋರಿತು. ಪ್ರೊ. ತಿವಾರಿಯವರು ತಲಕಾವೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲ್ಲಿನ ಬೆಟ್ಟಗಳ ಮೇಲೆ 'ಮೈಕ್ರೋಪ್ರೊಸೆಸರ್'ಎಂಬ ಉಪಕರಣವನ್ನು ಅಳವಡಿಸಿ ಗಾಳಿಯಂತ್ರವನ್ನು ನಿರ್ಮಿಸಲು ಬ್ರಹ್ಮಗಿರಿಬೆಟ್ಟ, ಕಾಟಿಪಳ್ಳಿಯಬೆಟ್ಟ ಹಾಗೂ ಬಾಪುರೆ ಬೆಟ್ಟಗಳು ಸೂಕ್ತವಾಗಿವೆ ಎಂಬ ವರದಿಯನ್ನು ಸರ್ಕಾರಕ್ಕೆ ನೀಡಿದ್ದರು.
ಡೆನ್ಮಾರ್ಕ್ ನಿಂದ ತಂದ ಗಾಳಿಯಂತ್ರ
ಬ್ರಹ್ಮಗಿರಿಬೆಟ್ಟ ಹಾಗೂ ಕಾಟಿಪಳ್ಳಿಯ ಬೆಟ್ಟಪ್ರದೇಶದಲ್ಲಿ ಗಾಳಿಯಂತ್ರಗಳನ್ನು ನಿರ್ಮಿಸಿದ್ದೇ ಆದರೆ ಜನರಿಂದ ವಿರೋಧ ವ್ಯಕ್ತವಾಗಬಹುದೆಂದು ಕಾರಣಕ್ಕೆ ಆ ಎರಡು ಬೆಟ್ಟಗಳನ್ನು ಹೊರತುಪಡಿಸಿ ತಲಕಾವೇರಿಗೆ ಎರಡು ಕಿ.ಮೀ. ದೂರದಲ್ಲಿರುವ ನಾಲ್ಕು ಸಾವಿರದ ನೂರು ಅಡಿ ಎತ್ತರವಿರುವ ಬಾಪುರೆ ಬೆಟ್ಟದಲ್ಲಿ ಗಾಳಿಯಂತ್ರವನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿತು. ಈ ವೇಳೆ ಸ್ಥಳೀಯ ಜನರಿಂದ ವಿರೋಧ ವ್ಯಕ್ತವಾಯಿತಾದರೂ ಅದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಯೋಜನೆಗೆ ಸಂಬಂಧಿಸಿದಂತೆ ದೆಹಲಿಯಿಂದ ಪರವಾನಗಿಯನ್ನು ಪಡೆದರಲ್ಲದೆ, ಯೋಜನೆ ತೀವ್ರಗತಿಯಲ್ಲಿ ಆರಂಭವಾಯಿತು.

ಸರ್ಕಾರವು ಡೆನ್ಮಾರ್ಕಿನ 'ವಿಮ್ಕಾನ್' ಎಂಬ ಸಂಸ್ಥೆಯೊಂದಿಗೆ ವ್ಯವಹರಿಸಿ ಸುಮಾರು ಎಂಬತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಇಪ್ಪತ್ತನಾಲ್ಕು ಮೀಟರ್ ಎತ್ತರದ ತಲಾ ಎಂಟು ಮೀಟರ್ ಉದ್ದದ ಮೂರು ರೆಕ್ಕೆಗಳಿರುವ ಐದು ಗಾಳಿಯಂತ್ರಗಳನ್ನು ಖರೀದಿಸಿತು. ಇದಕ್ಕೆ ತಗುಲಿದ ಒಟ್ಟು ವೆಚ್ಚದ ಶೇಕಡಾ ಐವತ್ತನ್ನು ಕೇಂದ್ರ ಸರ್ಕಾರ ಭರಿಸಿದರೆ, ಉಳಿದುದನ್ನು ರಾಜ್ಯ ಕೈಗಾರಿಕಾ ಬಂಡವಾಳ ಮತ್ತು ಅಭಿವೃದ್ಧಿ ನಿಗಮ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯು ನೀಡಿತು. ಯಂತ್ರಗಳ ಜೋಡಣೆಗೆ ಅಗತ್ಯವಾದ ಕೆಲಸಗಳನ್ನು ನೋಡಿಕೊಳ್ಳಲು ವಿದ್ಯುತ್ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಜವಾಬ್ದಾರಿ ವಹಿಸಿಕೊಡಲಾಯಿತು.
ಕೈ ತೊಳೆದುಕೊಂಡ ಜೆ.ಕೆ.ಕಂಪನಿ
ಗಾಳಿಯಂತ್ರಗಳನ್ನು ತಲಕಾವೇರಿಯ ಬಾಪುರೆ ಬೆಟ್ಟದಲ್ಲಿ ಸ್ಥಾಪಿಸುವ ಜವಾಬ್ದಾರಿಯನ್ನು ಸರ್ಕಾರದಿಂದ ವಹಿಸಿಕೊಂಡ ಜೆ.ಕೆ. ಕಂಪನಿಯು ಕಾರ್ಯಪ್ರವೃತ್ತವಾಗಿ ಗಾಳಿಯಂತ್ರಗಳನ್ನು ಡೆನ್ಮಾರ್ಕಿ ನಿಂದ ಹಡಗಿನ ಮೂಲಕ ಮದರಾಸಿಗೆ ತರಿಸಿಕೊಂಡಿತು. ನಂತರ ಲಾರಿಗಳ ಮೂಲಕ ತಲಕಾವೇರಿಗೆ ಸಾಗಿಸಲಾಯಿತು. ಈ ಸಂದರ್ಭ ಗಾಳಿಯಂತ್ರಗಳನ್ನು ಸಮರ್ಪಕವಾಗಿ ಜೋಡಿಸಲು ಡೆನ್ಮಾರ್ಕಿನಿಂದ ನೋಡ್ ಎಂಬ ಇಂಜಿನೀಯರ್ ಜೊತೆಯಲ್ಲಿಯೇ ಬಂದರು.
ತಲಕಾವೇರಿಗೆ ಆಗಮಿಸಿದ ಇಂಜಿನೀಯರ್ ನೋಡ್ ಅವರಿಗೆ ಗಾಳಿಯಂತ್ರಗಳನ್ನು ನಿರ್ಮಿಸಲು ಯೋಜಿಸಿದ ಸ್ಥಳ ಸೂಕ್ತವಾಗಿರುವ ಬಗ್ಗೆ ಸಂತಸವಾಯಿತಾದರೂ ಗಾಳಿಯಂತ್ರಗಳನ್ನು ತಲಕಾವೇರಿಗೆ ಸಾಗಿಸಿದ ರೀತಿ, ಅದನ್ನು ಲಾರಿಯಿಂದ ಕೆಳಕ್ಕೆ ಮರದ ದಿಮ್ಮಿಗಳನ್ನು ಉರುಳಿಸಿದಂತೆ ಇಳಿಸಿದ ರೀತಿಯನ್ನು ನೋಡಿ ದಿಗ್ಬ್ರಮೆಯಾಯಿತು. ಅಲ್ಲದೆ, ಇಂಜಿನೀಯರ್ಗಳ ಕಾರ್ಯವೈಖರಿ, ಜೊತೆಗೆ ಅಧಿಕಾರಿಗಳ ಅಸಹಕಾರ ಇವೆಲ್ಲವೂ ಅವರಿಗೆ ಬೇಸರ ತರಿಸಿತು. ಇನ್ನು ಇಲ್ಲಿ ಹೆಚ್ಚು ದಿನ ಇರಲು ಸಾಧ್ಯವಿಲ್ಲ ಎಂದರಿತ ಅವರು ಬೇಗನೆ ತಮ್ಮ ದೇಶಕ್ಕೆ ಹಿಂತಿರುಗಿದರು. ಇದರಿಂದ ವಿಚಲಿತವಾದ ಜೆ.ಕೆ.ಕಂಪನಿ ಅನ್ಯ ಮಾರ್ಗವಿಲ್ಲದೆ ತನಗೆ ತೋಚಿದಂತೆ ಜೋಡಿಸಿ ಕೈತೊಳೆದುಕೊಂಡಿತು.
ಯೋಜನೆ ವಿಫಲತೆಗೆ ಸಿಗದ ಉತ್ತರಗಳು
ಹೇಗೋ ಮೊದಲ ಬಾರಿಗೆ ಗಾಳಿಯಂತ್ರಗಳು ತಿರುಗಲಾರಂಭಿಸಿದವು. ಇನ್ನೇನು ಕುಗ್ರಾಮಗಳಿಗೂ ವಿದ್ಯುತ್ ಬರುತ್ತದೆ ಎಂದರಿತ ಜಿಲ್ಲೆಯ ಜನತೆ ಬೆಳಕಿನ ಕನಸು ಕಂಡರು. ಅಂದಿನ ಆಡಳಿತ ಸರ್ಕಾರಕ್ಕೆ ಭರ್ಜರಿ ಪ್ರಚಾರದೊಂದಿಗೆ, ರಾಜ್ಯಪಾಲರ ಪ್ರಶಂಸೆಯೂ ದೊರೆಯಿತು. ಉತ್ಪಾದನೆಗೊಂಡ ವಿದ್ಯುತ್ ಮಡಿಕೇರಿಯ 'ಗ್ರೀಡ್'ಗೆ ಪೂರೈಕೆಯಾಗತೊಡಗಿತು. ಆದರೆ ಅದು ಹೆಚ್ಚು ದಿನ ಮುಂದುವರೆಯಲಿಲ್ಲ. ಕೆಲವೇ ದಿನಗಳಲ್ಲಿ ಗಾಳಿಯಂತ್ರಗಳು ಕೆಟ್ಟು ನಿಂತವು. ಕೆಲಸ ಪೂರೈಸಿ ಹೋದ ಜೆ.ಕೆ.ಕಂಪನಿ ಇತ್ತ ತಲೆಹಾಕಲಿಲ್ಲ. ಇಲ್ಲಿನ ಇಂಜಿನಿಯರ್‌ಗಳು ಅದರ ತಲೆಬುಡ ಅರ್ಥವಾಗದೆ ತಟಸ್ಥರಾದರು. ನಿರ್ಮಾಣದ ಸಂದರ್ಭ ಇದ್ದಂತಹ ಉತ್ಸಾಹ ಬಳಿಕ ಅಧಿಕಾರಿಗಳಿಗಾಗಲೀ, ಸರ್ಕಾರಕ್ಕಾಗಲಿ ಇರಲಿಲ್ಲ. ಪರಿಣಾಮ ಸುಮಾರು ಎರಡು ಕೋಟಿ ರೂಪಾಯಿಯಷ್ಟು ಖರ್ಚು ಮಾಡಿ ರೂಪಿಸಿದ ಯೋಜನೆ ಸದ್ದಿಲ್ಲದೆ ಗಾಳಿಪಾಲಾಯಿತು.
ಆ ನಂತರ ಕೆಲವು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದಲ್ಲದೆ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದವು. ಗಾಳಿಯಂತ್ರಗಳನ್ನು ದುರಸ್ತಿ ಪಡಿಸುವಲ್ಲಿ ಆಗ ಆಡಳಿತದಲ್ಲಿದ್ದ ಸರ್ಕಾರವಾಗಲೀ, ನಂತರ ಆಡಳಿತಕ್ಕೆ ಬಂದ ಸರ್ಕಾರವಾಗಲೀ ತಲೆಕೆಡಿಸಿಕೊಳ್ಳಲಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಸೊಲ್ಲೆತ್ತಲಿಲ್ಲ ಪರಿಣಾಮ ಕಳೆದ ಮೂವತ್ತಾರು ವರ್ಷಗಳಿಂದ ಗಾಳಿಯಂತ್ರಗಳು ತುಕ್ಕುಹಿಡಿಯುತ್ತಾ ನಿಂತಿವೆಯಲ್ಲದೆ, ಅದರ ಅಗತ್ಯ ಉಪಕರಣಗಳೆಲ್ಲವೂ ಕಳ್ಳರ ಪಾಲಾಗಿದೆ. ಅಳಿದುಳಿದ ಕೆಲವು ಭಾಗಗಳು ಭೂಮಿ ಸೇರಿವೆ. ಇತರೆ ಕಡೆಗಳಲ್ಲಿ ಇಂತಹ ಯೋಜನೆಗಳು ಯಶಸ್ವಿಯಾದ ನಿದರ್ಶನಗಳಿವೆ. ಆದರೆ ತಲಕಾವೇರಿಯಲ್ಲಿ ವಿಫಲವಾದುದಕ್ಕೆ ಇವತ್ತಿಗೂ ಉತ್ತರ ಸಿಗಲೇ ಇಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications