ವಕ್ಫ್ ಹೆಸರಿನಲ್ಲಿ ಬೆದರಿಕೆ: ಮನೆ ಖಾಲಿ ಮಾಡುವಂತೆ ಮಹಿಳೆ ತಾಕೀತು ಮಾಡಿದ ಅಪರಿಚಿತರು
ಮಡಿಕೇರಿ, ನವೆಂಬರ್ 07: ಉತ್ತರ ಕರ್ನಾಟಕ ಭಾಗದದಲ್ಲಿ ವಕ್ಫ್ ಆಸ್ತಿ ವಿವಾದ ಮುನ್ನೆಲೆಯಲ್ಲಿ ಇರುವಾಗಲೇ ಇದೀಗ ಕೊಡಗಿನಲ್ಲಿಯೂ ವಕ್ಫ್ ಆಸ್ತಿ ಅತಿಕ್ರಮ ಎಂದು ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೊಡವ ಮಹಿಳೆಯೊಬ್ಬರ ಮನೆಯ ಆವರಣಕ್ಕೆ ಪ್ರವೇಶಿಸಿ ನೀವು ವಕ್ಫ್ ಆಸ್ತಿಯನ್ನು ಅತಿಕ್ರಮಿಸಿಕೊಂಡು ಮನೆ ಕಟ್ಟಿದೀರ, ಕೂಡಲೇ ತೆರವುಗೊಳಿಸಿ ಎಂದು ಬೆದರಿಕೆ ಒಡ್ಡಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.
ಈ ಕುರಿತು ಕೊಡಗು ಜಿಲ್ಲಾ ಪೋಲೀಸ್ ಅಧಿಕಾರಿಯವರಿಗೆ ದೂರು ನೀಡಿರುವ ಪುಚ್ಚಿಮಾಡ ರೇಣುಕಾ ಉತ್ತಪ್ಪ ಅವರು ತಾವು ತಮ್ಮ ಕುಶಾಲನಗರದ ಮುಳ್ಳುಸೋಗೆಯಲ್ಲಿ ಮನೆಯಲ್ಲಿ ಒಬ್ಬರೇ ಇರುವಾಗ ಇಬ್ಬರು ಬಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಮಹಿಳೆ ನೀಡಿರುವ ದೂರಿನ ಸಂಪೂರ್ಣ ಸಾರಾಂಶ ಈ ಕೆಳಗಿನಂತಿದೆ.

ತಾವು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ಮುಳ್ಳುಸೋಗೆಯಲ್ಲಿ ಪಿತ್ರಾರ್ಜಿತ ಮನೆ ಹೊಂದಿದ್ದಾರೆ. ದಿನಾಂಕ 25.10.2024 ರಂದು ಬೆಳಿಗ್ಗೆ 11 ಗಂಟೆಗೆ, ತಾವೊಬ್ಬರೇ ಮನೆಯಲ್ಲಿ ಇರುವಾಗ ಅನ್ಯ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಮನೆಯ ಆವರಣಕ್ಕೆ ಪ್ರವೇಶಿಸಿ ಇದು ವಕ್ಫ್ ಆಸ್ತಿ ಆಗಿದ್ದು ಮನೆಯನ್ನು ತಕ್ಷಣವೇ ತೆರವುಗೊಳಿಸಿ ವಕ್ಫ್ ಗೆ ಒಪ್ಪಿಸುವಂತೆ ಬೆದರಿಸಿದರು.
ಆಗ ನಾನು ನನ್ನ ತಂದೆ 1984 ರಲ್ಲಿ ಮುಳ್ಳುಸೋಗೆ ಯಲ್ಲಿ ಸರ್ವೆ ನಂಬರ್ 79/2 ರಲ್ಲಿ 36 ಸೆಂಟ್ಸ್ ಜಮೀನನ್ನು ಮಾನ್ಯಪಂಡ ಬೋಪಣ್ಣ ಎಂಬುವವರಿಂದ ಖರೀದಿಸಿದ್ದು ಅಂದಿನಿಂದ ನಾವು ಹೇಳಿದ ಆಸ್ತಿಯಲ್ಲಿ ವಾಸಿಸುತ್ತಿದ್ದೇವೆ. ಇತ್ತೀಚೆಗೆ ನನ್ನ ಪೋಷಕರು ನಿಧನರಾದರು. ನಾನು ಹೇಳಿದ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆದಿದ್ದೇನೆ. ಏಕೆ ತೆರವುಗೊಳಿಸಬೇಕು ? ನಿಮ್ಮ ಬಳಿ ಯಾವುದಾದರೂ ನ್ಯಾಯಾಲಯದ ನೋಟೀಸ್ ಅಥವಾ ವಕ್ಫ್ ಗೆ ಸೇರಿರುವುದಕ್ಕೆ ದಾಖಲೆ ಕೊಡಿ ಎಂದು ಪ್ರಶ್ನಿಸಿದೆ.
ಆಗ ಅವರು ನೀವು ಮನೆ ಖಾಲಿ ಮಾಡದಿದ್ದರೆ ಹೊರಗೆ 15 ಜನರು ಇದ್ದಾರೆ ಅವರನ್ನು ಕರೆಯುವುದಾಗಿಯೂ ಮತ್ತು ಹೆಚ್ಚಿನ ಜನರನ್ನು ಕರೆತರುವುದಾಗಿಯೂ ಬೆದರಿಸಿದರು ಎಂದು ತಿಳಿಸಿದ್ದಾರೆ. ಆಗ ಮಹಿಳೆಯು ಕೂಡಲೇ ಮನೆಯ ಆವರಣದಿಂದ ಹೊರ ಹೋಗುವಂತೆ ಗದರಿಸಿದ್ದಾರೆ.
ಆಗ ಅವರು ನಮಗೆ ಷರಿಯಾ ಕೋರ್ಟ್ ಇದೆ ನೀವು ಬೆಂಗಳೂರಿನ ಷರಿಯಾ ಕೋರ್ಟಿಗೆ ಬರಬೇಕಾಗುತ್ತದೆ ಅಲ್ಲಿ ನಿಮ್ಮ ಮಾಲೀಕತ್ವ ಸಾಬೀತುಪಡಿಸಬೇಕು ಎಂದು ಬೆದರಿಸಿ ಸ್ಥಳದಿಂದ ತೆರಳಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆ ಕೊಡವ ಸಮಾಜದ ಒಕ್ಕೂಟಗಳ ಅಧ್ಯಕ್ಷರಿಗೂ ಸೂಕ್ತ ನೆರವು ನೀಡುವಂತೆ ಕೋರಿ ದೂರು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಕುಶಾಲನಗರ ಪೊಲೀಸರು ತನಿಖೆ ನಡೆಸುತಿದ್ದು, ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications