ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆನಪಿನ ಬುತ್ತಿ ಬಿಚ್ಚಿಡುವ ಕೊಡಗಿನ ಸುಂದರ ಮಳೆ

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ, ಜೂನ್ 16: ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ವಾಡಿಕೆಯ ಮಳೆಯಾಗದೆ ಜನರ ಮುಖದಲ್ಲಿ ನೆಮ್ಮದಿಯಿಲ್ಲದಂತಾಗಿದೆ. ಅದರಲ್ಲೂ ಕಳೆದ ವರ್ಷವಂತೂ ಬರ ಜಿಲ್ಲೆಯನ್ನು ಆವರಿಸಿತ್ತು. ಕಾವೇರಿ ಧುಮ್ಮಿಕ್ಕಿ ಹರಿಯದ ಕಾರಣ ಕೆ.ಆರ್.ಎಸ್. ಜಲಾಶಯ ಭರ್ತಿಯಾಗದೆ ರೈತಾಪಿ ವರ್ಗ ಕೃಷಿ ಚಟುವಟಿಕೆ ಮಾಡಲಾಗದೆ ಕೈಕಟ್ಟಿ ಕೂರುವಂತಾಗಿತ್ತು.

ಈ ಬಾರಿ ಜನವರಿ ತಿಂಗಳ ಆರಂಭದಲ್ಲೇ ಕೊಡಗಿನಲ್ಲಿ ಆಶಾದಾಯಕ ಮಳೆಯಾಗುವುದರೊಂದಿಗೆ ಕಾಫಿ ಬೆಳೆಗಾರರಿಗೂ ಹರ್ಷ ತಂದಿತ್ತು. ತದನಂತರ ಆಗಾಗ್ಗೆ ಮಳೆಯಾಗುವುದರೊಂದಿಗೆ ಎಲ್ಲರೂ ನೆಮ್ಮದಿಯುಸಿರು ಬಿಡುವಂತೆ ಮಾಡಿತ್ತು.

ಮುಂಗಾರಿನ ಅಭಿಷೇಕಕ್ಕೆ ಕಾದಿದೆ ನನ್ನ ಮೈಮನಮುಂಗಾರಿನ ಅಭಿಷೇಕಕ್ಕೆ ಕಾದಿದೆ ನನ್ನ ಮೈಮನ

ಹಿಂದಿನ ಕೆಲವು ದಶಕಗಳ ಮಳೆಯನ್ನು ಮೆಲುಕು ಹಾಕುವುದಾದರೆ, ಈ ವೇಳೆಗೆಲ್ಲ ಭಾರೀ ಮಳೆ ಸುರಿಯಬೇಕಿತ್ತು. ಆದರೆ ಅದ್ಯಾಕೋ ಜಡಿ ಮಳೆ ಸುರಿಯುತ್ತಿಲ್ಲ. ಆದರೆ ಸಮಾಧಾನಪಟ್ಟುಕೊಳ್ಳಬೇಕಾದ ವಿಷಯವೇನೆಂದರೆ, ಈಗಾಗಲೇ ಕೊಡಗಿನಲ್ಲಿ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ, ಮಳೆಯೂ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈಗಾಗಲೇ ಸುರಿದಿದೆ.

ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...ಮಲೆನಾಡಿನಾ ಮಳೆಹಾಡಿನಾ ಪಿಸು ಮಾತಿನಾ ಹೊಸತನ... ಸವಿದೆನಾ...

ಮೊದಲೆಲ್ಲ ಮಳೆಗಾಲ ಎಂದರೆ ಬಿಡುವಿಲ್ಲದೆ ಮಳೆ ಸುರಿಯುತ್ತಿತ್ತು. ಹೀಗಾಗಿ ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗುತ್ತಿತ್ತು. ಆದ್ದರಿಂದ ಮಳೆಗಾಲಕ್ಕೆ ಬೇಕಾದ ಸಾಮಾನುಗಳನ್ನು ಕನಿಷ್ಠ ಒಂದು ತಿಂಗಳಿಗಾಗುವಷ್ಟು ಪದಾರ್ಥ ಹಾಗೂ ಸೌದೆ, ಇನ್ನಿತರ ಅಗತ್ಯ ವಸ್ತುಗಳನ್ನು ಶೇಖರಿಸಿಡುತ್ತಿದ್ದರು.

ಕಾಮಗೆರೆಯಲ್ಲಿ ಮಳೆ ಬಂದರೂ ಕೆರೆ ತುಂಬಿಲ್ಲ!ಕಾಮಗೆರೆಯಲ್ಲಿ ಮಳೆ ಬಂದರೂ ಕೆರೆ ತುಂಬಿಲ್ಲ!

ಮಳೆ ಶುರುವಾಗುತ್ತಿದ್ದಂತೆ ಪಟ್ಟಣಗಳಿಗೆ ತೆರಳಿ ಮಳೆಗಾಲಕ್ಕೆ ಅಗತ್ಯವಾದ ಕೊಡೆ, ಗಂಬೂಟ್, ಪ್ಲಾಸ್ಟಿಕ್ ಹ್ಯಾಟ್, ಇನ್ನಿತರ ವಸ್ತುಗಳನ್ನು ಖರೀದಿಸಿ ತರುತ್ತಿದ್ದರು. ಇದರಿಂದಾಗಿ ಸಂತೆಯ ದಿನಗಳಲ್ಲಿ ಜನಜಂಗುಳಿ ಕಂಡು ಬರುತ್ತಿತ್ತು. ಈಗಲೂ ಇಂತಹ ದೃಶ್ಯಗಳು ಕಾಣಸಿಗುತ್ತವೆಯಾದರೂ ಮೊದಲಿನಷ್ಟು ವ್ಯಾಪಾರದ ಭರಾಟೆ ಕಂಡು ಬರುತ್ತಿಲ್ಲ.

ಮಳೆಗಾಲದಲ್ಲಿ ಕೃಷಿ

ಮಳೆಗಾಲದಲ್ಲಿ ಕೃಷಿ

ಮಳೆಗಾಲದಲ್ಲಿ ಇಲ್ಲಿನ ಕೃಷಿಕರಿಗೆ ಬಿಡುವಿಲ್ಲದ ದುಡಿಮೆ. ಕಾಫಿ ತೋಟಕ್ಕೆ ಗೊಬ್ಬರ ಹಾಕುವುದು, ಮರ ಕಪಾತ್, ಚಿಗುರು, ಗದ್ದೆ ಉಳುಮೆ, ಸಸಿ ಮಡಿ ತಯಾರಿಕೆ ಹೀಗೆ ಕೆಲಸಗಳನ್ನು ಮಾಡಲೇ ಬೇಕಾದ ಅನಿವಾರ್ಯತೆ ಆದರೆ ಕೂಲಿ ಕಾರ್ಮಿಕರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮುಳುಗಡೆಯ ಆತಂಕ

ಮುಳುಗಡೆಯ ಆತಂಕ

ಜಿಲ್ಲೆಯ ಭಾಗಮಂಡಲ, ಬಲಮುರಿ, ನೆಲ್ಯಹುದಿಕೇರಿ ಮುಂತಾದ ನದಿ ತೀರದ ಪ್ರದೇಶಗಳಲ್ಲಿ ವಾಸವಿರುವ ಜನರಲ್ಲಿ ಆತಂಕವೂ ಆರಂಭವಾಗಿದೆ. ಏಕೆಂದರೆ ಮಳೆ ಬಂದು ಕಾವೇರಿ ನದಿ ಉಕ್ಕಿ ಹರಿದಾಗ ನದಿ ತೀರದಲ್ಲಿರುವ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗುತ್ತವೆ. ಈ ವೇಳೆ ತಾವು ಕಷ್ಟಪಟ್ಟು ದುಡಿದುದೆಲ್ಲವನ್ನೂ ಬಿಟ್ಟು ಗಂಜಿ ಕೇಂದ್ರ ಸೇರಬೇಕಾಗುತ್ತದೆ. ಹೀಗಾಗಿ ತಮ್ಮ ಬದುಕು ನೀರು ಪಾಲಾಗುತ್ತದೆಯಲ್ಲ ಎಂಬ ಚಿಂತೆ ಅವರನ್ನು ಕಾಡುತ್ತಿದೆ.

ವಿದ್ಯತ್ ಇಲ್ಲ!

ವಿದ್ಯತ್ ಇಲ್ಲ!

ನದಿ ತೀರದ ಅಪಾಯ ಪ್ರದೇಶದಲ್ಲಿ ಮನೆ ಮಾಡಿಕೊಂಡು ವಾಸ್ತವ್ಯ ಹೂಡಿದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕೆಂಬ ಮಾತುಗಳು ಮಳೆಗಾಲದಲ್ಲಿ ಕೇಳಿ ಬರುತ್ತದೆಯಾದರೂ ನಂತರದ ದಿನಗಳಲ್ಲಿ ಮರೆತು ಹೋಗಿ ಬಿಡುತ್ತದೆ. ಹೀಗಾಗಿಯೇ ಮಳೆಗಾಲ ಬಂದಾಗ ಮತ್ತೆ ಸಮಸ್ಯೆಗಳು ಎದುರಾಗುತ್ತವೆ. ಮಳೆಗಾಲದಲ್ಲಿ ಮಳೆ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗೆ ಉರುಳುವುದರಿಂದ ವಾರಾನುಗಟ್ಟಲೆ ವಿದ್ಯುತ್, ದೂರವಾಣಿ ಸಂಪರ್ಕವಿಲ್ಲದೆ ದಿನಕಳೆಯಬೇಕಾದ ದುಸ್ಥಿತಿ ಇಲ್ಲಿ ಮಾಮೂಲಿಯಾಗಿದೆ.

ಬಟ್ಟೆ ಒಣಗಿಸೋದೇ ಸಾಹಸ!

ಬಟ್ಟೆ ಒಣಗಿಸೋದೇ ಸಾಹಸ!

ಶಾಲಾ ಕಾಲೇಜಿಗೆ ತೆರಳುವ, ಆಫೀಸ್ ಕೆಲಸಕ್ಕೆ ಹೋಗುವ ಜನರ ಪಾಡು ಹೇಳತೀರದು. ಒಗೆದು ಹಾಕಿದ ಬಟ್ಟೆ ವಾರವಾದರೂ ಒಣಗದೆ ಫಂಗಸ್ ಬಂದು ಕಿರಿಕಿರಿಯಾಗುತ್ತದೆ. ಇದನ್ನು ತಪ್ಪಿಸಲು ಬಿದಿರಿನಿಂದ ಮಾಡಿದ ಬಳಂಜಿಗೆ ಮಾರುಹೋಗುತ್ತಾರೆ. ಬೆಂಕಿ ಕೆಂಡವನ್ನು ಬಳಂಜಿಯ ಒಳಗಿಟ್ಟು ಅದರ ಮೇಲೆ ಒಣಗಿದ ಶುಭ್ರ ಬಟ್ಟೆಯನ್ನು ಮುಚ್ಚಿ ಅದರ ಮೇಲೆ ಒಗೆದ ಬಟ್ಟೆಯನ್ನು ಹಾಕಿ ಒಣಗಿಸುತ್ತಾರೆ.

ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ

ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ

ಸದಾ ಮಂಜಿನ ಮುಸುಕಿನಲ್ಲಿರುವ ಮಡಿಕೇರಿಯಲ್ಲಿ ಬೀಸುವ ಗಾಳಿಗೆ, ಸುರಿಯುವ ಮಳೆಗೆ ಕೊಡೆ ಹಿಡಿದು ನಡೆಯೋದೇ ಒಂದು ಸಾಹಸದ ಕೆಲಸ. ಸರಿಯಾದ ವಾಹನ ಸೌಲಭ್ಯವಿಲ್ಲದ ಹಳ್ಳಿಗಳಿಂದ ಗದ್ದೆ, ತೋಟವನ್ನು ದಾಟಿ ಕೊಡೆ ಹಿಡಿದುಕೊಂಡು ಮಳೆಯಲ್ಲಿಯೇ ಮೂರ್ನಾಲ್ಕು ಕಿ.ಮೀ. ನಡೆದು ಶಾಲೆಗೆ ಹೋಗಿ ವಿದ್ಯೆ ಕಲಿಯುವ ಪುಟ್ಟ ಮಕ್ಕಳು ಪಾಡು ಹೇಳತೀರದ್ದಾಗಿರುತ್ತದೆ.

ಅನುಕೂಲದ ಜೊತೆ ಅನಾನುಕೂಲ

ಅನುಕೂಲದ ಜೊತೆ ಅನಾನುಕೂಲ

ಕೆಲವೊಮ್ಮೆ ನದಿತೊರೆಗಳು ಉಕ್ಕಿ ಹರಿದಾಗ ಕಾಡಂಚಿನಲ್ಲಿ, ತೋಟಗಳ ನಡುವೆ ನೆಲೆಸಿರುವ ಮಕ್ಕಳು ಶಾಲೆಗೆ ಚಕ್ಕರ್ ಹೊಡೆದು ಗದ್ದೆಗಳಲ್ಲಿ ಅಣಬೆ ಹುಡುಕುತ್ತಾ ನದಿ ತಟದಲ್ಲಿ ಕುಳಿತು ಮೀನು, ಏಡಿ ಹಿಡಿಯುತ್ತಾ ಕಾಲ ಕಳೆಯುವುದು ಮತ್ತೊಂದು ವಿಶೇಷ. ಒಟ್ಟಾರೆ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲವೂ ಇದೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬದುಕೋದನ್ನು ಇಲ್ಲಿನವರು ರೂಢಿಸಿಕೊಂಡಿದ್ದಾರೆ ಎನ್ನುವುದಂತು ಸತ್ಯ.

English summary
The monsoon in Madikeri reflects immense beauty od nature. The people of the region simply enjoy rainy season irrespective of age. It already started raining in Madikeri. Here is a look, how Madikeri people welocme and celebrate rainy season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X