ಕೂಲ್‌..ಕೂಲ್‌ ಆಗಿದ್ದ ಕೊಡಗಿನಲ್ಲೀಗ ಸುಡು..ಸುಡು ಬಿಸಿಲು: ಹೀಗಾಗಿದ್ದೇಕೆ..?

ಮಡಿಕೇರಿ, ಮಾರ್ಚ್ 12: ಕೊಡಗಿನಲ್ಲೀಗ ಬಿಸಿಲ ಧಗೆ ತಲೆ ಸುಡಲು ಆರಂಭಿಸಿದೆ. ಪರಿಣಾಮ ತಂಪಾಗಿದ್ದ ಊರು ಹೀಗೇಕೆ ಆಯಿತು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳಲಾರಂಭಿಸಿದೆ. ದಕ್ಷಿಣ ಕಾಶ್ಮೀರ ಎಂದೇ ಹೆಸರಾಗಿದ್ದ ಕೊಡಗಿಗೆ ಬಹುತೇಕ ಪ್ರವಾಸಿಗರು ಬೇಸಿಗೆಯಲ್ಲಿ ಬರುತ್ತಿದ್ದರು. ಕಾರಣ ಇಲ್ಲಿನ ವಾತಾವರಣ ತಂಪಾಗಿರುತ್ತಿತ್ತು. ಆದರೀಗ ಹಾಗಿಲ್ಲ ಎಲ್ಲವೂ ಬದಲಾಗಿದ್ದು, ಅವತ್ತಿನ ಕೂಲ್ ಕೊಡಗು ಈಗ ಹಾಟ್ ಆಗಿದೆ.

ವಾತಾವರಣದಲ್ಲಿ ಏರುಪೇರಾಗುವುದು ಸ್ವಾಭಾವಿಕ. ಆದರೆ ಕೊಡಗಿನಲ್ಲಿ ಇತ್ತೀಚೆಗೆ ಬೇಸಿಗೆಯಲ್ಲಿ ಹೆಚ್ಚುತ್ತಿರುವ ಧಗೆ ಭಯ ಹುಟ್ಟಿಸುತ್ತಿದೆ. ಇದರಿಂದ ಕಾಫಿಗಿಡಗಳು ಸಾಯುತ್ತವೆ. ಜಲಮೂಲ ಬತ್ತುತ್ತಿವೆ ಹೀಗೆ ತೊಂದರೆಗಳು ಒಂದರ ಮೇಲೆ ಒಂದು ಎದುರಾಗುತ್ತಲೇ ಇದೆ. ಹಿರಿಯರು ಮಾತ್ರ ಹಿಂದೆ ಹೀಗಿರಲಿಲ್ಲ. ಈಗ ಹೀಗೇಕೆ ಆಯಿತು ಎಂದು ಗೊಣಗಿಕೊಳ್ಳುತ್ತಾರೆ.

Summer Days 2024 Kodagu Temperature Day By Day Increased

ಹಿಂದಿನ ದಿನಗಳಿಗೆ ಹೋದರೆ ಅವತ್ತು ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಇಷ್ಟೊಂದು ಬಿಸಿಲಿನ ಧಗೆಯಿರಲಿಲ್ಲ. ಯಾರಿಗೂ ತೊಂದರೆಯಾಗುತ್ತಿರಲಿಲ್ಲ. ಈಗ ಹಾಗಿಲ್ಲ. ಬೇಸಿಗೆಯಲ್ಲಿ ಸಿಕ್ಕಾಪಟ್ಟೆ ಬಿಸಿಲು, ಮಳೆಗಾಲದಲ್ಲಿ ಸುರಿದರೆ ಪ್ರವಾಹದಂತಹ ಮಳೆ. ಐದು ವರ್ಷಗಳ ಕಾಲ ಪ್ರವಾಹ ಸೃಷ್ಟಿಸಿದ್ದ ಮಳೆ ಕಳೆದ ಬಾರಿ ಸುರಿಯಲೇ ಇಲ್ಲ. ಹೀಗೆ ಏರುಪೇರಿನ ವಾತಾವರಣದ ಬದುಕು ಮುಂದುವರೆಯುತ್ತಿದೆ.

ಬದಲಾಗುತ್ತಾ ಬರುತ್ತಿರುವ ಕೊಡಗು

ಕೊಡಗು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪಟ್ಟಣ ಪ್ರದೇಶಗಳು ವಿಸ್ತಾರವಾಗುತ್ತಿವೆ. ಜತೆ ಜತೆಗೆ ವಸತಿ ನಿರ್ಮಾಣದ ವ್ಯಾಪ್ತಿಯೂ ಹಿಗ್ಗುತ್ತಿದೆ. ಕೃಷಿ ಜತೆಗೆ ವಾಣಿಜ್ಯ ವಹಿವಾಟು ಹೆಚ್ಚಾಗುತ್ತಿದೆ. ಇದರ ಪರಿಣಾಮಗಳು ಪ್ರಕೃತಿ ಮೇಲೆ ಬೀಳುತ್ತಿದೆ. ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳು ಗೊತ್ತೇ ಆಗದಂತೆ ನಿಸರ್ಗದ ನಾಶಕ್ಕೆ ಕಾರಣವಾಗುತ್ತಿವೆ.

Summer Days 2024 Kodagu Temperature Day By Day Increased

ಒಂದೆರಡು ದಶಕಗಳ ಹಿಂದೆ ಕೊಡಗಿಗೆ ಬಂದವರು ಈಗ ಮತ್ತೊಮ್ಮೆ ಬಂದರೆ ಇಲ್ಲಿನ ಬದಲಾವಣೆಗಳು ಅವರಿಗೆ ಎದ್ದು ಕಾಣುತ್ತದೆ. ಮೊದಲಿನಂತೆ ಕೊಡಗು ಇದೆಯಾ? ವಾತಾವರಣವೂ ಹಾಗೆಯೇ ಇದೆಯಾ? ಎಂಬ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ಸಿಕ್ಕಿಬಿಡುತ್ತದೆ. ಕಾಡುಗಳು ನಾಶವಾಗಿ ತೋಟಗಳಾಗಿವೆ. ಗದ್ದೆಗಳು ನಿವೇಶನಗಳಾಗಿ ಕಾಂಕ್ರಿಟ್ ಕಾಡಾಗಿ ಮಾರ್ಪಟ್ಟಿದೆ. ಭತ್ತದ ಕೃಷಿಯಲ್ಲಿ ಲಾಭವಿಲ್ಲ ಎಂಬ ಕಾರಣಕ್ಕೆ ಕೆಲವು ಸದ್ದಿಲ್ಲದೆ ತೋಟಗಳಾಗಿದ್ದರೆ ಮತ್ತೆ ಕೆಲವು ಪಾಳುಬಿದ್ದಿವೆ.

ಹೈಟೆನ್ಷನ್ ವಿದ್ಯುತ್ ತಂದ ಸಂಕಷ್ಟ

ದೊಡ್ಡ ಮರಗಳಿಂದ ಕೂಡಿದ ಕಾಡುಗಳ ನಡುವೆ ತಂಪಾದ ವಾತಾವರಣದಲ್ಲಿ ಕಂಡು ಬರುತ್ತಿದ್ದ ಏಲಕ್ಕಿ ನಾಶವಾಗಿ ಅವು ಕಾಫಿ ತೋಟವಾಗಿ ಮಾರ್ಪಟ್ಟಿವೆ. ಇದೆಲ್ಲದರ ನಡುವೆ ಕೊಡಗಿನ ಮೂಲಕ ಕೇರಳಕ್ಕೆ ಹಾದು ಹೋದ ಹೈಟೆನ್ಷನ್ ವಿದ್ಯುತ್ ಮಾರ್ಗ ಮರಕಾಡುಗಳನ್ನು ನುಂಗಿ ಹಾಕಿದೆ. ಪ್ರಾಣಿ ಪಕ್ಷಿಗಳ ಜೀವಕ್ಕೆ ಕಂಟಕವಾಗಿವೆ.

Summer Days 2024 Kodagu Temperature Day By Day Increased

ಸುಡು ಬೇಸಿಗೆಯಲ್ಲೂ ತಣ್ಣಗಿದ್ದ ಕೊಡಗು ಇವತ್ತು ಬೇಸಿಗೆ ಬಂತೆಂದರೆ ಸುಡುತ್ತದೆ. ಕಳೆದ ಎರಡು ದಶಕಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಇಲ್ಲಿನ ಪರಿಸರದ ಮೇಲೆ ಭಾರೀ ಅತ್ಯಾಚಾರ ನಡೆದಿದೆ. ಆಧುನಿಕತೆಯ ಹೆಸರಿನಲ್ಲಿಯೂ ಇರಬಹುದು, ಟಿಂಬರ್ ಮಾಫಿಯಾದ ಮೂಲಕವೂ ಇರಬಹುದು.

ಸೃಷ್ಟಿಯಾಗದ ಪರಿಸರ ಸ್ನೇಹಿ ಅರಣ್ಯ

ಕಾವೇರಿ ಹುಟ್ಟಿ ಹರಿಯುವ ಕೊಡಗಿನಲ್ಲೇ ಇವತ್ತು ವಾಡಿಕೆಯ ಮಳೆಯಾಗದ ಕಾರಣದಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸಣ್ಣಪುಟ್ಟ ನದಿಗಳಲ್ಲಿ ನೀರು ಹರಿಯುತ್ತಿಲ್ಲ. ತೊರೆಗಳೇ ಇಲ್ಲಿನವರ ಜಲಮೂಲವಾಗಿದ್ದು, ಅವುಗಳೇ ಕ್ಷೀಣಿಸುತ್ತಿವೆ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ.

Summer Days 2024 Kodagu Temperature Day By Day Increased

ಹಣಕ್ಕಾಗಿ ನಾವು ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್ಓಕ್, ತೇಗದ ಮರಗಳನ್ನು ನೆಡುತ್ತೇವೆ. ಅವುಗಳಿಂದ ಹಸಿರು ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ. ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಅವುಗಳಿಂದ ಸಾಧ್ಯನವಿಲ್ಲ ಎಂಬುದು ನಮಗೆ ಗೊತ್ತೇ ಆಗುತ್ತಿಲ್ಲ.

ಭವಿಷ್ಯದಲ್ಲಿ ಗಂಡಾಂತರ ಖಚಿತ

ನೀಲಗಿರಿ ಮರದಡಿಯಲ್ಲಿ ಹುಲ್ಲು ಕೂಡ ಹುಟ್ಟುವುದಿಲ್ಲ. ಅವುಗಳಿಂದ ಪ್ರಾಣಿಪಕ್ಷಿ ಭೂಮಿಗೂ ಒಳಿತಾಗುವುದಿಲ್ಲ. ಅವು ಹಣ ತಂದು ಕೊಡುತ್ತವೆ ಎಂಬ ಉದ್ದೇಶಕ್ಕಷ್ಟೆ ನಾವು ಅವುಗಳನ್ನು ಬೆಳೆಯುತ್ತಿದ್ದೇವೆ. ನಮಗೆ ಪರಿಸರ ಸ್ನೇಹಿ ಅರಣ್ಯ ಬೇಕಾಗಿಲ್ಲ. ಇದು ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಗಂಡಾಂತರ ಕಾದಿರುವುದಂತು ನಿಜ. ಕೊಡಗಿನ ಪ್ರಕೃತಿ ಉಳಿವಿಗೆ ಗಮನಹರಿಸದೆ ಹೋದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವುದನ್ನು ಯಾರೂ ಮರೆಯಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+