ಕೊಡಗಿಗೆ ರೈಲು, ನದಿತಿರುವು, ರೆಸಾರ್ಟ್ ಬೇಡವೇಬೇಡ!

By: ಬಿಎಂ ಲವಕುಮಾರ್, ಮಡಿಕೇರಿ
Subscribe to Oneindia Kannada

ಮಡಿಕೇರಿ, ಫೆಬ್ರವರಿ 16 : ಪರಿಸರಕ್ಕೆ ಮಾರಕವಾಗುವ ರೈಲ್ವೆ, ನದಿತಿರುವು ಯೋಜನೆ, ರೆಸಾರ್ಟ್ ಸಂಸ್ಕೃತಿ ಬೇಡವೇ ಬೇಡ ಇದರಿಂದ ನಿಸರ್ಗ ನಾಶವಾಗುತ್ತಿದ್ದು, ಕೊಡಗು ಜಿಲ್ಲೆಯನ್ನು 'ಸೂಕ್ಷ್ಮ ಪರಿಸರ ತಾಣ'ವಾಗಿ ಘೋಷಣೆ ಮಾಡಿ ಎಂದು ಕೊಡಗು ವನ್ಯಜೀವಿ ಸಂಘ ಹಾಗೂ ವನ್ಯಪ್ರೇಮಿಗಳು ಒಕ್ಕೊರಲಿನ ಒತ್ತಾಯ ಮಾಡಿದ್ದಾರೆ.

ಕೊಡಗು ವನ್ಯಜೀವಿ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಅವರು, ಪ್ರಾತ್ಯಕ್ಷಿಕೆ ಸಹಿತ ಕೊಡಗಿನ ಪರಿಸರ, ಜಲ, ವನ್ಯ ಪ್ರಾಣಿಗಳ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ವಿನಾಶವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಕೊಡಗಿನ ಪರಿಸರದ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತೆರೆದಿಟ್ಟಿದ್ದಾರೆ.

Stop all developments and save Madikeri

ಕಾಡು, ಕಾಫಿ ತೋಟ, ಭತ್ತದ ಗದ್ದೆಗಳು, ಪವಿತ್ರ ವೃಕ್ಷಗಳು, ನದಿಗಳು ಹಾಗೂ ತೊರೆಗಳಿಂದ ಕೂಡಗಿನಲ್ಲಿ ಕೊಡವ, ಗೌಡ, ಹೆಗ್ಗಡೆ, ಐರಿ, ಎರವ, ಕುರುಬ, ಕುಡಿಯ ಮುಂತಾದ ಮೂಲನಿವಾಸಿಗಳು ವಾಸ ಮಾಡುತ್ತಿದ್ದಾರೆ. ಇದರೊಂದಿಗೆ ಜಿಂಕೆ, ಕರಡಿ, ಹುಲಿ, ಆನೆ ಮೊದಲಾದ ಕಾಡು ಪ್ರಾಣಿಗಳು ಇಲ್ಲಿವೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯದಿಂದ ಎಲ್ಲವೂ ನಾಶವಾಗುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ಮಾಹಿತಿ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ 2800 ಎಕರೆಯಷ್ಟು ಕಾಫಿ ತೋಟ ಹಾಗೂ ಭತ್ತದ ಗದ್ದೆಗಳು ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆಯಾಗಿದೆ. ಕೊಡಗಿನ ನಗರಗಳು ಹಾಗೂ ಪಟ್ಟಣಗಳು ವೇಗವಾಗಿ ವಿಸ್ತಾರಗೊಳ್ಳುತ್ತಿವೆ. ಹೊಸ ವಸತಿ ಬಡಾವಣೆಗಳು ಎರಡು ಪಟ್ಟಣಗಳ ನಡುವೆ ನಿರ್ಮಿತವಾಗುತ್ತಿವೆ. ಇದರಿಂದ ಪಟ್ಟಣಗಳು ಪರಸ್ಪರ ಸೇರ್ಪಡೆಯಾಗಿ ದೊಡ್ಡ ಪಟ್ಟಣವಾಗುತ್ತಿವೆ ಎಂದ ಅವರು ಭೂ ಪರಿವರ್ತನೆ, ವಸತಿ ಬಡಾವಣೆ ನಿರ್ಮಾಣ ಹಾಗೂ ನಿವೇಶನಗಳ ಮಾರಾಟವನ್ನು ನಿಲ್ಲಿಸಲು ಮನವಿ ಮಾಡಿದರು.

Stop all developments and save Madikeri

ಪ್ರವಾಸೋದ್ಯಮದ ಹೆಸರಿನಲ್ಲಿ ಹುಟ್ಟಿಕೊಳ್ಳುತ್ತಿರುವ ಹೋಂಸ್ಟೇ, ರೆಸಾರ್ಟ್ ಜಿಲ್ಲೆಗೆ ಮಾರಕವಾಗಿದ್ದು, ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಕೊಡಗಿನಲ್ಲಿ ಕೇವಲ 5.5 ಲಕ್ಷ ಜನಸಂಖ್ಯೆ ಇದ್ದರೆ ಇಲ್ಲಿಗೆ ಕಳೆದ ಸಾಲಿನಲ್ಲಿ 13 ಲಕ್ಷ ಪ್ರವಾಸಿಗರು ಬಂದಿದ್ದಾರೆ. ನೀರಿನ ಪ್ರಮಾಣ ಕಡಿಮೆಯಾಗಿದೆ. ಇಲ್ಲಿನ ಜನರಿಗೆ ನೀರು ಒದಗಿಸಲಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಹೀಗಿರುವಾಗ ಹೊರಗಿನಿಂದ ಪ್ರವಾಸಿಗರು ಯಥೇಚ್ಛವಾಗಿ ಬರುತ್ತಿದ್ದಾರೆ. ಅವರಿಗೆಲ್ಲ ನೀರಿನ ವ್ಯವಸ್ಥೆ ಮಾಡುವುದಾದರೂ ಹೇಗೆ? ಆದ್ದರಿಂದ ಕೊಡಗಿನ ಎಲ್ಲ ರೆಸಾರ್ಟ್‌ಗಳನ್ನು ಬೇಸಿಗೆಯಲ್ಲಿ ಮುಚ್ಚುವಂತೆ ಜಿಲ್ಲಾ ಆಡಳಿತ ಆದೇಶಿಸಬೇಕಾಗಿದೆ. ಹೊಸದಾಗಿ ಹೋಂ ಸ್ಟೇಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

Stop all developments and save Madikeri

ಈಗ ಅಸ್ತಿತ್ವದಲ್ಲಿರುವ ಹೋಂ ಸ್ಟೇಗಳು ಬೇಸಿಗೆಯಲ್ಲಿ ಮುಚ್ಚಿರುವಂತೆ ಕ್ರಮ ಕೈಗೊಳ್ಳಬೇಕು. ಬೇಸಿಗೆಯಲ್ಲಿ ದೀರ್ಘಾವಧಿವರೆಗೆ ಮುಚ್ಚಿರುವದು ಒಳ್ಳೆಯದು. ಪ್ರವಾಸೋದ್ಯಮದಿಂದ ವಾಹನ ದಟ್ಟಣೆ, ಕಸದ ಶೇಖರಣೆ, ಬೆಲೆ ಏರಿಕೆ, ನೀರಿಗಾಗಿ ಒತ್ತಡ ಹಾಗೂ ರೆಸಾರ್ಟ್‌ಗಳಿಗಾಗಿ ಭೂ ಪರಿವರ್ತನೆಯಂತಹ ಪರಿಣಾಮ ಎದುರಾಗುತ್ತಿದೆ ಇದನ್ನು ತಡೆಯುವುದು ಅನಿವಾರ್ಯವಾಗಿದೆ.

ಮೈಸೂರು - ಕೋಳಿಕೋಡ್ 400 ಕೆ.ವಿ. ವಿದ್ಯುತ್‌ಲೈನ್ ನಿರ್ಮಾಣದಿಂದಾಗಿ 54,000 ಮರಗಳ ಮಾರಣ ಹೋಮ ಆಯಿತು. ಕರಿಕೆಯ ಜಲ ವಿದ್ಯುತ್ ಯೋಜನೆಯೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಮರಗಳ ಮಾರಣಹೋಮಕ್ಕೆ ಕಾರಣವಾಯಿತು. ಮುಂದೆ ರೈಲ್ವೆ ಮಾರ್ಗ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಯೋಜನೆ ಹಾಗೂ ಕೊಂಗಣ ಹೊಳೆ ಯೋಜನೆಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಕೊಡಗಿನ ಅರಣ್ಯ ಸಂಪತ್ತು ನಾಶವಾಗಲಿದೆ. ಇದರಿಂದ ಕೊಡಗಿನ ಪರಿಸರಕ್ಕೆ ಮಾರಕವಾಗುತ್ತದೆ.

ಕೊಡಗಿನ ಮೂಲಕ ಎರಡು ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈಸೂರು - ಕುಶಾಲನಗರ- ಮಕ್ಕಂದೂರು ಮಾರ್ಗ ಹಾಗೂ ದಕ್ಷಿಣ ಭಾಗವನ್ನು ಕೇರಳದ ವಯನಾಡನ್ನು ವೀರಾಜಪೇಟೆ ಮೂಲಕ ಸಂಪರ್ಕಗೊಳಿಸುವದು. ಈ ಎರಡೂ ಯೋಜನೆಗಳು ಕೊಡಗಿಗೆ ಮಾರಕವಾಗಲಿದೆ. ಇದನ್ನು ನಿಲ್ಲಿಸಬೇಕು. ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳಬೇಕಾದರೆ ಕಾನೂನಾತ್ಮಕವಾಗಿ ಇರುವ ಏಕೈಕ ಮಾರ್ಗವೆಂದರೆ ಇಡೀ ಜಿಲ್ಲೆಯನ್ನು ಅತಿಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸಬೇಕೆಂದು ಆಗ್ರಹಿಸಿದರು.

Stop all developments and save Madikeri

ಬಸವಣ್ಣ ದೇವರಬನ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ನಂಜಪ್ಪ ಮಾತನಾಡಿ, ಜಿಲ್ಲೆಯ ಕೆಲವು ಹಾಡಿಗಳ ಸನಿಹದಲ್ಲಿರುವ ಅರಣ್ಯ ಒತ್ತುವರಿಯಾಗಿದೆ. ಕೊಡಗಿನಲ್ಲಿರುವ ಅರ್ಹ ಗಿರಿಜನರಿಗೆ ನಿವೇಶನ ನೀಡಲು ಸರಕಾರ ಮುಂದಾಗಿದ್ದರೂ ಕೆಲವರ ತಂತ್ರಗಾರಿಕೆಯಿಂದಾಗಿ ಪಡೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ದಿಡ್ಡಳ್ಳಿಯಲ್ಲಿ ನಕ್ಸಲರ ಪ್ರಭಾವ ಯಾವ ರೀತಿ ಕೆಲಸ ಮಾಡುತ್ತಿದೆಯೆಂದು ಎಲ್ಲರಿಗೂ ಅರ್ಥವಾಗಿದೆ. ದಿಡ್ಡಳ್ಳಿಯಲ್ಲಿ ಅಕ್ರಮವಾಗಿ ಕುಳಿತಿರುವವರನ್ನು ಜಿಲ್ಲಾಡಳಿತ ಓಡಿಸಬೇಕು. ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಇಂಥವರಿಗೆ ಬೆಂಬಲ ನೀಡಬಾರದು ಎಂದರು.

ಬೆಳೆಗಾರರ ಸಂಘದ ಕೈಬುಲಿರ ಹರೀಶ್, ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಕೋಟ್ರಮಾಡ ಅರುಣ, ರೈತ ಸಂಘದ ಅರುಣ್ ಚಂಗಪ್ಪ, ಮೈಸೂರು ಕೊಡವ ದೀನ ಬಂಧು ಚಾರಿಟೇಬಲ್ ಟ್ರಸ್ಟ್‌ನ ಜಯಕುಮಾರ್, ಮೈಸೂರು ಕೊಡವ ಒಕ್ಕೂಟದ ಗಣೇಶ್ ಅಯ್ಯಣ್ಣ, ವನ್ಯಜೀವಿ ಸಂಘದ ಸದಸ್ಯರುಗಳು, ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Stop all kinds of developments and stop destroying forest and nature in Kodagu. This is humble request to Karnataka government by nature lovers of Madikeri district. Due to development work Kodagu has not only lost it's beauty, but people are also suffering, says Colonel CP Muthanna, Kodagu Wildlife Association president.
Please Wait while comments are loading...