ಮಳೆಗೆ ಜರಿದ ಬ್ರಹ್ಮಗಿರಿ ಬೆಟ್ಟ; ಅರ್ಚಕ ನಾರಾಯಣಾಚಾರ್ ಕುಟುಂಬಕ್ಕೆ ಶೋಧ
ಮಡಿಕೇರಿ, ಆಗಸ್ಟ್ 06: ಮಡಿಕೇರಿಯ ಭಾಗಮಂಡಲ ವ್ಯಾಪ್ತಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿದೆ. ಆ ಮನೆಗಳ ಕುರುಹೇ ಸಿಗದಂತೆ ಬೆಟ್ಟದ ಮಣ್ಣೇ ಆವರಿಸಿಕೊಂಡಿದೆ.
ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದೆ. ಸದ್ಯಕ್ಕೆ ಪ್ರಾಥಮಿಕ ಮಾಹಿತಿ ಪ್ರಕಾರ, ಎರಡು ಮನೆಗಳ ಪೈಕಿ ಒಬ್ಬರು ಅರ್ಚಕರು ಹೊಸ ಮನೆ ನಿರ್ಮಿಸಿಕೊಂಡು ಕುಟುಂಬದೊಂದಿಗೆ ಭಾಗಮಂಡಲದಲ್ಲಿ ನೆಲೆಸಿರುವುದಾಗಿ ತಿಳಿದುಬಂದಿದೆ. ಇನ್ನೊಬ್ಬ ಅರ್ಚಕರು ತಲಕಾವೇರಿಯ ಮನೆಯಲ್ಲಿಯೇ ಕುಟುಂಬದೊಂದಿಗೆ ವಾಸವಿದ್ದರು. ಕುಟುಂಬದ ಐವರು ಕಾಣೆಯಾಗಿದ್ದಾರೆ. ಸದ್ಯ ರಕ್ಷಣಾ ತಂಡವು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದೆ. ಇಲ್ಲಿ ನೆಲೆಸಿದ್ದ ಅರ್ಚಕ ನಾರಾಯಣಾಚಾರ್ ಕುಟುಂಬ ಸದಸ್ಯರ ಕುರಿತು ಆತಂಕ ಶುರುವಾಗಿದೆ.

ಅರ್ಚಕರ ಮನೆಯ ಪರಿಕರ, ಜಾನುವಾರು ಮೃತದೇಹ ಪತ್ತೆ
ಬ್ರಹ್ಮಗಿರಿ ಬೆಟ್ಟವು ಸುಮಾರು 6 ಕಿ.ಮೀ ಉದ್ದಕ್ಕೆ ಕುಸಿದು ಬಿದ್ದಿರುವುದರಿಂದ ಮಣ್ಣನ್ನು ತೆರವುಗೊಳಿಸಿ ರಕ್ಷಣಾಕಾರ್ಯ ನಡೆಸುವುದು ರಕ್ಷಣಾ ಪಡೆಗಳಿಗೆ ಸವಾಲಾಗಿದೆ. ಭಾಗಮಂಡಲದ ಬಳಿ ನಾರಾಯಣಾಚಾರ್ ಅವರ ಮನೆಗೆ ಸೇರಿದ್ದ ಜಾನುವಾರು ಮೃತದೇಹ ದೊರೆತಿದೆ. ಹೀಗಾಗಿ ಮನೆಯಲ್ಲಿದ್ದವರ ಕುರಿತೂ ಆತಂಕ ಉಂಟಾಗಿದೆ. ಮುಂದುವರೆದ ಭಾರೀ ಮಳೆಯಿಂದಾಗಿ ತಲಕಾವೇರಿಯಲ್ಲಿ ನಾಪತ್ತೆಯಾಗಿರುವ ಅರ್ಚಕ ಕುಟುಂಬದವರನ್ನು ಹುಡುಕುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಮಳೆಯ ಆರ್ಭಟಕ್ಕೆ ಬೆಚ್ಚಿ ಬಿದ್ದಿದೆ ಕೊಡಗು ಜಿಲ್ಲೆ...

ಅರ್ಚಕರ ಬಗ್ಗೆ ಶಾಸಕ ಕೆ.ಜಿ.ಬೋಪಯ್ಯ ಮಾತು
ಟಿ.ಎಸ್.ನಾರಾಯಣಾಚಾರ್ ಅವರು ಕೊಡಗಿನಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಕಟ್ಟಿಬೆಳೆಸಿದವರಲ್ಲಿ ಒಬ್ಬರು. ತಲಕಾವೇರಿ ಕ್ಷೇತ್ರಕ್ಕೇ ಶಕ್ತಿಯಂತಿದ್ದರು. ಆದರೆ ಅವರು, ಅವರ ಕುಟುಂಬದವರು ಕಣ್ಮರೆಯಾಗಿರುವುದು ಬಹಳ ದುಃಖವಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಭಾವುಕವಾಗಿ ಮಾತನಾಡಿದ್ದಾರೆ. ಮಣ್ಣಿನಡಿ ಸಿಲುಕಿರುವ ಅರ್ಚಕ ಕುಟುಂಬ ಜೀವಿಸಿರುವ ಸಾಧ್ಯತೆ ಕ್ಷೀಣ ಎಂದು ತಿಳಿದುಬಂದಿದೆ.
ಕುಂಭದ್ರೋಣ ಮಳೆ: ಕೊಡಗಿನಾದ್ಯಂತ ಪ್ರವಾಹ ಭೀತಿ, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ

ಅಧಿಕಾರಿಗಳು ಎಚ್ಚರಿಸಿದ್ದರೂ ಸ್ಥಳ ಬಿಟ್ಟಿರಲಿಲ್ಲ
ಹಲವಾರು ಬಾರಿ ತಲಕಾವೇರಿ ಬೆಟ್ಟದ ತಪ್ಪಲಿನಿಂದ ಹೊರಬಂದು ಭಾಗಮಂಡಲದ ಸುರಕ್ಷಿತ ಪ್ರದೇಶದಲ್ಲಿ ಜೀವನ ಸಾಗಿಸಿ ಎಂದರೂ ಕೇಳಲಿಲ್ಲ ಆಚಾರ್ ಎಂದು ಬೋಪಯ್ಯ ಕಣ್ಣೀರು ಹಾಕಿದರು. ಅಧಿಕಾರಿಗಳು ಎಚ್ಚರಿಸಿದ್ದರೂ ಹಟಬಿಡದೇ ಕಾವೇರಮ್ಮನ ಮಡಿಲು ಬಿಟ್ಟು ಬರಲಾರೆ ಎಂದಿದ್ದರಂತೆ ನಾರಾಯಣಾಚಾರ್. ಆದರೆ ಇದೀಗ ಬೆಟ್ಟ ಕುಸಿದು ಇಡೀ ಕುಟುಂಬವೇ ಕಣ್ಮರೆಯಾಗುವಂತೆ ಆಗಿದೆ.

ಕೊಡಗಿನಲ್ಲಿ ತಗ್ಗುತ್ತಿಲ್ಲ ಮಳೆ
ಭಾಗಮಂಡಲದ ಮತ್ತೊಂದು ಬದಿಯಲ್ಲಿ ಜೆಸಿಬಿ ನೆರವಿನಿಂದ ತಲಕಾವೇರಿ ಮಾರ್ಗದಲ್ಲಿ ಬಿದ್ದಿರುವ ಮಣ್ಣುರಾಶಿ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಆದರೆ ಭಗಂಡ ಕ್ಷೇತ್ರದಲ್ಲಿ ಎಲ್ಲಿ ನೋಡಿದರಲ್ಲಿ ನೀರು ತುಂಬಿಕೊಂಡಿದೆ. ಕೊಡಗಿನಲ್ಲಿ ಮಳೆ ಅಬ್ಬರ ತಗ್ಗುವಂತೆ ಕಾಣುತ್ತಿಲ್ಲ. ಹೀಗಾಗಿ ಜನತೆ ಸಾಕಷ್ಟು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತದ ಮನವಿ ಮಾಡಿದೆ. ನದಿತೀರ, ಬೆಟ್ಟದ ಬಳಿಯಿರುವ ಜನತೆ ತಡಮಾಡದೇ ಪರಿಹಾರ ಕೇಂದ್ರಗಳಿಗೆ ಬರುವಂತೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮನವಿ ಮಾಡಿದ್ದಾರೆ.