ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ : ತನಿಖೆ ತೀವ್ರ

By: ಮಡಿಕೇರಿ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಆಗಸ್ಟ್ 17 : ಕುಶಾಲನಗರದ ಗುಡ್ಡೆಹೊಸೂರು ಬಳಿ ತನ್ನ ಆಟೋದಲ್ಲಿ ತೆರಳುತ್ತಿದ್ದ ಚಾಲಕ, ಆರ್‌ಎಸ್‌ಎಸ್ ಕಾರ್ಯಕರ್ತ ಪ್ರವೀಣ್ ಪೂಜಾರಿಯನ್ನು ಹತ್ಯೆಗೈದ ಹಂತಕರ ಪತ್ತೆಗೆ ಕೊಡಗು ಜಿಲ್ಲಾ ಪೊಲೀಸ್ ಸೇರಿದಂತೆ ನೆರೆಯ ಜಿಲ್ಲೆಗಳ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡಗಳನ್ನು ರಚಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ.

ಗುಡ್ಡೆಹೊಸೂರು ಸಮೀಪದ ಅತ್ತೂರು ಗ್ರಾಮದ ಚಂದಪ್ಪ ಅವರ ಪುತ್ರ ಆಟೋ ಚಾಲಕ ಪ್ರವೀಣ್ ಪೂಜಾರಿ (38) ಕೊಲೆಯಾದ ವ್ಯಕ್ತಿ.[ಪ್ರಾಣಕ್ಕೆ ಕುತ್ತು ತರುವ ಕೊಡಗಿನ ಮೂರು ಜಲಪಾತಗಳು]

ಭಾನುವಾರ ರಾತ್ರಿ ಕುಶಾಲನಗರದಲ್ಲಿ ನಡೆದ ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಕುಶಾಲನಗರದಿಂದ ಪ್ರವೀಣ್‌ ಪೂಜಾರಿ ತನ್ನ ಸ್ವಂತ ಆಟೋ (ಕೆಎ12 ಎ-2455)ದಲ್ಲಿ ಸಿದ್ದಾಪುರ ರಸ್ತೆಯ ಈಡನ್‌ ಗಾರ್ಡನ್ ಸಮೀಪದವರೆಗೆ ಬಾಡಿಗೆಗೆ ತೆರಳಿ ರಾತ್ರಿ ಸುಮಾರು 11.30ರ ವೇಳೆಗೆ ಹಿಂತಿರುಗಿ ಬರುತ್ತಿದ್ದ. ಈ ಸಂದರ್ಭ ಗುಡ್ಡೆಹೊಸೂರಿನ ಮೊದಲನೇ ತಿರುವಿನಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಪ್ರವೀಣ್‌ ಪೂಜಾರಿಯ ಕುತ್ತಿಗೆಯ ಎರಡು ಭಾಗಗಳಿಗೆ, ಹೊಟ್ಟೆಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ.

RSS activist Praveen Poojary murder : Investigation intensifies

ಆ ರಾತ್ರಿ ಯಾರೂ ಸಹಾಯಕ್ಕೆ ಬಾರದ ಕಾರಣ ಪ್ರವೀಣ್‌ ಪೂಜಾರಿ ಕೆಲ ಕಾಲ ಸಾವು ಬದುಕಿನೊಂದಿಗೆ ಹೋರಾಡಿ ಸಾವನ್ನಪ್ಪಿದ್ದನು. ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಶವವನ್ನು ಕುಶಾಲನಗರ ಶವಾಗಾರಕ್ಕೆ ತಂದಿರಿಸಲಾಗಿತ್ತು. ಘಟನೆ ಹಿನ್ನೆಲೆ ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಮುಂಜಾಗ್ರತಾ ಕ್ರಮವಾಗಿ ಕುಶಾಲನಗರ ವ್ಯಾಪ್ತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಸೆಕ್ಷನ್ 144 ಅನ್ನು ಜಾರಿಗೊಳಿಸಿದ್ದರು.[ಕೊಡಗಿನಲ್ಲೂ ತಮಿಳು, ಮಲಯಾಳಂ ಶಾಲೆ ಇದೆ ಕಣ್ರೀ...]

ಮಾರನೆಯ ದಿನ 9 ಗಂಟೆ ಆಗುತ್ತಿದ್ದಂತೆಯೇ ಕುಶಾಲನಗರದ ಆಟೋ ಚಾಲಕರ ಸಂಘ ಹಾಗೂ ಕುಶಾಲನಗರ ಹೋಬಳಿ ವ್ಯಾಪ್ತಿಯ ನೂರಾರು ಆಟೋ ಚಾಲಕರು ಸೇರಿದಂತೆ ಸಾರ್ವಜನಿಕರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶವಾಗಾರದ ಎದುರು ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲು ಬಿಡದೆ ಪ್ರತಿಭಟಿಸಿದರು. ಹತ್ಯೆಗೈದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಪಟ್ಟು ಹಿಡಿದರು. ಪರಿಸ್ಥಿತಿ ಬಿಗಡಾಯಿಸುವುದನ್ನು ಅರಿತ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮಾಡಿತ್ತು.

RSS activist Praveen Poojary murder : Investigation intensifies

ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿಯವರು ಅಲ್ಲಿನ ಪರಿಸ್ಥಿತಿ ಅವಲೋಕಿಸಿ, ಮೃತ ಕುಟುಂಬಕ್ಕೆ ಪರಿಹಾರ ನೀಡುವ ವ್ಯವಸ್ಥೆ ಹಾಗೂ ಆರೋಪಿಗಳನ್ನು 24 ಗಂಟೆಯೊಳಗೆ ಪತ್ತೆ ಹಚ್ಚಿ ಬಂಧಿಸಲು ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.[ಕೊಡಗಿನ ಗಡಿಭಾಗದಲ್ಲೊಂದು 'ಕಲ್ಯಾಳ ಜಲಪಾತ']

ಪೊಲೀಸ್ ಬಂದೋಬಸ್ತ್‌ಗಾಗಿ ಐಜಿ ಬಿ.ಕೆ.ಸಿಂಗ್, ಹಾಸನ ಎಸ್‌ಪಿ ಶೋಭಾರಾಣಿ, ಚಾಮರಾಜನಗರ ಎಸ್ ಪಿ ಮುತ್ತುರಾಜ್, 24 ಉನ್ನತಮಟ್ಟದ ಅಧಿಕಾರಿಗಳು ಸೇರಿದಂತೆ 10 ಮೀಸಲು ಪೊಲೀಸ್ ಪಡೆ ಸೇರಿದಂತೆ 1200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್‌ಗಾಗಿ ನೇಮಿಸಲಾಗಿತ್ತು.

ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುವುದಾಗಿ ಸ್ಥಳೀಯರು ಹೇಳುತ್ತಿದ್ದು, ಘಟನೆಯನ್ನು ಬೇಧಿಸಲು ಪೊಲೀಸರು ಹಲವು ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಂದೆಡೆ ಪಂಜಿನ ಮೆರವಣಿಗೆಯ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆಯೇ ಎನ್ನುವುದರೊಂದಿಗೆ ಇನ್ನೊಂದೆಡೆ ಪ್ರವೀಣ್ ಪೂಜಾರಿಯ ವೈಯಕ್ತಿಕ ಹಿನ್ನೆಲೆಗಳನ್ನು ಪೊಲೀಸರು ಕಲೆಹಾಕುತ್ತಿದ್ದು, ಘಟನೆಗೆ ಏನು ಕಾರಣ ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ದುಷ್ಕರ್ಮಿಗಳ ಬಂಧನದ ಬಳಿಕವಷ್ಟೆ ಹತ್ಯೆಗೆ ನೈಜ ಕಾರಣ ತಿಳಿದುಬರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Murder of Praveen Poojary, rashtriya swayamsevak sangh activist has created tension in Kushalnagar in Madikeri district. Praveen was brutally murdered by unknown people on Sunday. Prohibitory orders have been imposed and police have intensified the investigation.
Please Wait while comments are loading...