ವರ್ಣಮಯ ಮಡಿಕೇರಿ ದಸರಾಗೆ ವರುಣನ ಭಯ!
ಕೊಡಗಿನ ದಸರಾ ಸಡಗರಕ್ಕೆ ಮಳೆಯ ಭೀತಿ. ಮಳೆಯಿಂದಾಗಿ ಕಾರ್ಯಕ್ರಮಗಳು ರದ್ದಾಗುವ ಸಾಧ್ಯತೆ.
ಮಡಿಕೇರಿ, ಸೆಪ್ಟೆಂಬರ್ 18: ಮಂಜು ಮುಸುಕಿದ ವಾತಾವರಣ, ಮೈಕೊರೆಯುವ ಚಳಿ, ಆಗೊಮ್ಮೆ ಈಗೊಮ್ಮೆ ಅಬ್ಬರಿಸುವ ಮಳೆ. ಅದ್ಯಾಕೋ ಈ ಬಾರಿ ಮಡಿಕೇರಿ ದಸರಾ ಮೇಲೆ ವರುಣನ ಕರಿನೆರಳು ಬೀರುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ. ದಸರಾ ಯಶಸ್ಸಾಗಬೇಕಾದರೆ ಮಳೆ ಬಿಡುವು ನೀಡಲೇ ಬೇಕು. ಆದರೆ ಆ ಲಕ್ಷಣಗಳೇ ಕಂಡು ಬರುತ್ತಿಲ್ಲ. ಹೀಗಾಗಿ ಒಂದಷ್ಟು ಆತಂಕ ಮನೆ ಮಾಡಿದೆ.
ಇದರ ಜತೆ ಜತೆಯಲ್ಲಿ ಸರ್ಕಾರದಿಂದ ದೊರೆಯಬೇಕಾದ ಅನುದಾನದಲ್ಲಿ ಕೊರತೆ, ಇನ್ನೂ ಮುಗಿಯದ ಕೆಲಸ ಕಾರ್ಯಗಳು, ಆರಂಭವಾಗಬೇಕಾದ ಸಿದ್ದತಾ ಕಾರ್ಯಗಳು ಮಂದಗತಿಯಲ್ಲಿ ಸಾಗಿರುವುದು ಹೀಗೆ ಎಲ್ಲವೂ ಸಮಸ್ಯೆಗಳಾಗಿ ಕಾಡುತ್ತಿವೆ.
ಜನರಿಂದ ಜನರಿಗಾಗಿ ಜನರಿಗೋಸ್ಕರ ಆಚರಣೆ ಮಾಡುತ್ತಿರುವ ಜನೋತ್ಸವ ಮತ್ತು ಇತಿಹಾಸ ಹೊಂದಿರುವ ಮಡಿಕೇರಿ ದಸರಾ ತನ್ನದೇ ಆದ ವೈಭವ ಹೊಂದಿದೆ. ಮೈಸೂರು ದಸರಾ ಜನರನ್ನು ಸ್ವಾಗತಿಸಿದರೆ, ಮಡಿಕೇರಿ ದಸರಾ ಬೀಳ್ಕೊಡುತ್ತದೆ. ಆದರೆ ಪ್ರತಿವರ್ಷವೂ ಸರ್ಕಾರ ಮಾತ್ರ ನಿರ್ಲಕ್ಷ್ಯ ತೋರುತ್ತಲೇ ಬರುತ್ತಿದೆ.

ಈ ಬಾರಿ ಸರ್ಕಾರದಿಂದ ಒಂದು ಕೋಟಿ ಅನುದಾನ ಕೋರಲಾಗಿದ್ದರೂ ಇದೀಗ 60 ಲಕ್ಷ ರೂ. ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಲವು ತೋರಿದ್ದಾರೆ. ದಸರಾ ಬೇಗನೇ ಬಂದಿರುವುದರಿಂದ ಮಡಿಕೇರಿಯಲ್ಲಿ ದಸರಾಗೆ ಸಿದ್ಧತೆಗಳಿಗೆ ಮಳೆ ಅಡ್ಡಿಯಾಗಿದೆ. ರಸ್ತೆಗಳ ದುರಸ್ತಿ ಕಾರ್ಯ ಈಗಷ್ಟೆ ನಡೆಯುತ್ತಿದೆ. ಮಳೆಯಲ್ಲಿ ಕಾಮಗಾರಿ ನಡೆಸುವುದು ಕಷ್ಟವಾಗಿ ಪರಿಣಮಿಸುತ್ತಿದೆ. ಮತ್ತೊಂದೆಡೆ ಒಂದಷ್ಟು ಗೊಂದಲಗಳು ಕಾಣಿಸಿಕೊಂಡಿದೆ. ಸಿದ್ಧತೆಗಳು ಸಮಾರೋಪಾದಿಯಲ್ಲಿ ನಡೆಯಬೇಕಾಗಿತ್ತಾದರೂ ಈಗಷ್ಟೆ ವೇಗ ಪಡೆದುಕೊಳ್ಳುತ್ತಿದೆ.
ಎಷ್ಟೇ ದುರಸ್ತಿಕಾರ್ಯ ನಡೆದರೂ ಮಡಿಕೇರಿ ರಸ್ತೆಗಳು ಮಳೆಗಾಲ ಕಳೆಯುತ್ತಿದ್ದಂತೆಯೇ ಹೊಂಡಗಳಾಗಿ ಮಾರ್ಪಾಡಾಗಿ ಬಿಡುತ್ತವೆ. ಡಾಂಬರು ರಸ್ತೆಗೆ ಬದಲಾಗಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಿದ್ದರೂ ಕೂಡ ಅವು ದುಸ್ಥಿತಿಗೀಡಾಗುತ್ತಿವೆ. ಇದರಿಂದ ರಸ್ತೆಗಳ ಹೊಂಡ ಮುಚ್ಚಿ ದುರಸ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಇದೇ ರಸ್ತೆಗಳಲ್ಲಿ ಶೋಭಾಯಾತ್ರೆ ಸಾಗುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ.

ಪ್ರವಾಸಿಗರೂ ಆಗಮನ
ಮಡಿಕೇರಿಯಲ್ಲಿಯೂ ದಸರಾ ಆಚರಣೆ ಒಂಬತ್ತು ದಿನಗಳ ಕಾಲ ನಡೆಯಲಿದ್ದು, ಸೆ. 21ರಂದು ಸಂಜೆ ಶಕ್ತಿ ದೇವತೆಗಳ ಕರಗ ಉತ್ಸವದೊಂದಿಗೆ ನವರಾತ್ರಿಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಚಾಲನೆ ದೊರೆಯಲಿದೆ. ದಸರಾ ಹತ್ತಿರ ಬರುತ್ತಿದ್ದಂತೆ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಹೀಗಾಗಿ ಜನ-ವಾಹನ ದಟ್ಟಣೆ ಹೆಚ್ಚಾಗಲಿದೆ.

ವಿದ್ಯುದ್ದೀಪ ವ್ಯವಸ್ಥೆ
ಇನ್ನು, ದಸರಾದ ಪ್ರಮುಖ ಆಕರ್ಷಣೆ ದಶಮಂಟಪಗಳಾಗಿದ್ದು, ಆಯಾ ಸಮಿತಿಯವರು ಮಂಟಪವನ್ನು ಲಕ್ಷಾಂತರ ರೂ. ಖರ್ಚು ಮಾಡಿ ತಯಾರಿಸುತ್ತಿದ್ದಾರೆ. ಕಥಾ ಸಾರಾಂಶಕ್ಕೆ ಅಗತ್ಯವಿರುವ ದೇವಿಯ ವಿಗ್ರಹಗಳು, ರಾಕ್ಷಸರ ಆಕೃತಿಗಳ ಜೋಡಣೆ, ವಿದ್ಯುದ್ದೀಪದ ವ್ಯವಸ್ಥೆ ಮಾಡುತ್ತಿದ್ದಾರೆ.

ಮಳೆಯಿಂದಾಗಿ ದಸರಾಕ್ಕೆ ತೊಂದರೆ
ಹತ್ತು ಹಲವು ಗೊಂದಲ, ತೊಂದರೆಗಳ ನಡುವೆಯೂ ಎಲ್ಲರೂ ದಸರಾಕ್ಕೆ ಸಿದ್ಧರಾಗುತ್ತಿದ್ದರೂ ಈಗಾಗಲೇ ಸುರಿಯುತ್ತಿರುವ ಮಳೆ ತಣ್ಣೀರೆರೆಚುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಮಡಿಕೇರಿ ದಸರಾ ಯಶಸ್ಸಿಗೆ ಅಡಚಣೆಯಾಗಲಿದೆ. ಸಾಮಾನ್ಯವಾಗಿ ದಸರಾಕ್ಕೆ ಮಳೆ ಬಾರದಂತೆ ಪ್ರಾರ್ಥಿಸುವ ಸಂಪ್ರದಾಯವೂ ಇದೆ. ಆದರೂ ಮಳೆ ಒಮ್ಮೆ ಸುರಿದು ಬಿಟ್ಟು ಬಿಡುವುದಿದೆ. ಎಡೆಬಿಡದೆ ಸುರಿದರೆ ಮಾತ್ರ ಭಾರೀ ತೊಂದರೆಯಾಗಲಿದೆ.

ತೊಂದರೆ ಬೇಡ ಎನ್ನುತ್ತಿರುವ ನಾಗರಿಕರು
ಹಿಂದೊಮ್ಮೆ ಭಾರೀ ಮಳೆ ಸುರಿದ ಕಾರಣ ಅರ್ಧಕ್ಕೆ ಎಲ್ಲ ಕಾರ್ಯಕ್ರಮಗಳು ನಿಂತು ಹೋಗಿ ಶೋಭಾಯಾತ್ರೆ ಸ್ಥಗಿತಗೊಂಡಿತ್ತು. ಈ ಬಾರಿ ಹಾಗಾಗದಿರಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications